ರಚನಾಕಾರ್ಯಗಳಿಗೆ ಗಮನಕೊಡಲು ಬಹಳ ಕಾಲವೇ ಹಿಡಿಯಿತು. ರಾಜ್ಯವು ಸುಭಿಕ್ಷವಾಗಿದ್ದು, ರಾಜಪ್ರಜೆಗಳು ನೆಮ್ಮದಿಯಿಂದ ಇದ್ದ ಕಾಲದಲ್ಲಿ ಗ್ರಂಥರಚನೆಯಾಯಿತೆಂದು ಕವಿರಾಜಮಾರ್ಗದ ಕೆಲವು ಪದ್ಯಗಳಿಂದಲೂ ಶಾಸನಗಳ ಆಧಾರದಿಂದಲೂ ಹೇಳಬಹುದು. ಬಹುಜನ ವಿದ್ವಾಂಸರು ಗ್ರಂಥರಚನಾ ಕಾಲವನ್ನು ಕ್ರಿ.ಶ. ೮೫೦ ಎಂದು ನಿರ್ಣಯಿಸಿದ್ದಾರೆ; ೮೫೦-೮೭೦ ನಡುವಣ ಅವಧಿಯಲ್ಲಿ ರಚಿತವಾಗಿರಬಹುದೆಂದು ಶಾಸನಾಧಾರಗಳಿಂದ ಊಹಿಸಲು ಅವಕಾಶವಿದೆ.
೨. ಕರ್ತೃತ್ವ
ಕವಿರಾಜಮಾರ್ಗವು ೧೮೯೮ರಲ್ಲಿ ಪ್ರಪ್ರಥಮವಾಗಿ ಕೆ.ಬಿ. ಪಾಠಕರಿಂದ ಸಂಪಾದಿತವಾಗಿ ಪ್ರಕಟವಾದಂದಿನಿಂದ ಈವೊತ್ತಿನವರೆಗೂ ಗ್ರಂಥಕರ್ತೃ ಯಾರು ಎಂಬ ಬಗೆಗೆ ವಾದವಿವಾದಗಳು ನಡೆಯುತ್ತಲೇ ಇವೆ. ಅವರ ನಿರ್ಣಯದ ಪ್ರಕಾರ ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗ ಅದರ ಕರ್ತೃ. ಡಾ|| ಜೆ.ಎಫ್. ಫೀಟ್ ಎಂಬ ಪಾಶ್ಚಾತ್ಯ ವಿದ್ವಾಂಸನು (೧೯೦೪ರಲ್ಲಿ) 'ಇಂಡಿಯನ್ ಆಂಟಿಕ್ವೆರಿ'ಯಲ್ಲಿ 'ಕವೀಶ್ವರನ ಕವಿರಾಜಮಾರ್ಗ' ಎಂಬ ಲೇಖನವನ್ನು ಬರದು, ಗ್ರಂಥಕರ್ತ ನೃಪತುಂಗ ಸಭಾಸದನಾದ 'ಕವೀಶ್ವರ' ಎಂಬ ವಾದವನ್ನು ಮಂಡಿಸಿದರು. ಕವಿಚರಿತೆಕಾರರಾದ ಆರ್. ನರಸಿಂಹಾಚಾರೈರು ಕವಿಚರಿತೆಯ ಪ್ರಥಮ ಸಂಪುಟದಲ್ಲಿ - “ಯದ್ಯಪಿ ಈ ಗ್ರಂಥವು ನೃಪತುಂಗ ಕೃತವೆಂದು ಪ್ರತೀತಿಯಿದ್ದರೂ ಶ್ರೀವಿಜಯಕೃತವೋ ಎಂದು ಸಂದೇಹಪಡುವುದಕ್ಕೆ ಅವಕಾಶವಿದೆ" ಎಂದು ಹೇಳಿ, ಹಾಗೆ ಹೇಳಲು ಸಾಧಕಗಳಾದ ಕೆಲವು ಗ್ರಂಥಸ್ಥ ಪ್ರಮಾಣಗಳನ್ನೂ ಬಾಹ್ಯ ಪ್ರಮಾಣಗಳನ್ನೂ ಸೂಚಿಸಿದರು. “ಆದರೆ, ಈ ವಿಷಯದಲ್ಲಿ ಹೀಗೆಯೇ ಸರಿ ಎಂದು ನಿಶ್ಚಯಿಸಲಾಗುವುದಿಲ್ಲ. ಒಂದು ವೇಳೆ ನೃಪತುಂಗನಿಗೆ ಶ್ರೀವಿಜಯ ಎಂಬ ಬಿರುದೂ ಇದ್ದಿರಬಹುದು ಎಂದರೆ ಅದಕ್ಕೆ ಶಾಸನಗಳಲ್ಲಿಯಾಗಲಿ ಈ ಗ್ರಂಥದಲ್ಲಿಯಾಗಲಿ ಆವ ಆಧಾರವೂ ಸಿಕ್ಕುವುದಿಲ್ಲ" ಎಂದು ಕರ್ತೃತ್ವವಿಚಾರವನ್ನು ಅನಿಶ್ಚಿತವಾಗಿಯೇ ಉಳಿಸಿದರು. ಆದರೂ, ತಮ್ಮ ಆಮೇಲಿನ ಬರಹಗಳಲ್ಲಿ 'ನೃಪತುಂಗನ ಕವಿರಾಜಮಾರ್ಗ ಎಂದು ಉಲ್ಲೇಖಿಸಿದರು. ಹೀಗೆ, ಕವಿರಾಜಮಾರ್ಗ ಕರ್ತೃತ್ವ ವಿಚಾರದಲ್ಲಿ-೧ ನೃಪತುಂಗಪಕ್ಷ, ೨. ಕವೀಶ್ವರಪಕ್ಷ, ೩. ಶ್ರೀವಿಜಯಪಕ್ಷ ಎಂದು ಮೂರು ಪಕ್ಷಗಳು ಹುಟ್ಟಿಕೊಂಡುವು. ದಿವಂಗತ ನಾ.ಶ್ರೀ. ರಾಜಪುರೋಹಿತರು,