ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೮ / ಕುಕ್ಕಿಲ ಸಂಪುಟ

ವಂಶ ಎಂಬುದಕ್ಕೆ ಕನ್ನಡದಲ್ಲಿ ವಂಸ, ವಂಚ ಬಂಚ ಎಂಬ ತದ್ಭವ ರೂಪಗಳು ಕನ್ನಡ ಸಾಹಿತ್ಯದಲ್ಲಿ ದೊರಕುತ್ತವೆ. ಈ ಪಂಚ ಎಂಬುದೂ ಅದರ ತದ್ಭವವೇ ಎನ್ನಲು ಸಾಕಷ್ಟು ಆಧಾರಗಳಿವೆ.

ವಂಶ ಎಂಬುದರ ಮೂಲಾರ್ಥ 'ಬಿದಿರು' ಎಂಬುದಷ್ಟೆ, ಬಿದಿರಿನಿಂದ ಹೆಣೆದ ಒಂದು ತರದ ಕುಕ್ಕೆಗೆ 'ಪಂಚಕುಕ್ಕೆ' (ತುಳುವಿನಲ್ಲಿ ಪಂಚಕುರುವೆ) ಎಂಬುದು ನಮ್ಮಲ್ಲಿ ರೂಢವಾಗಿರುವ ಹೆಸರು. ಕೋಲಾಟದ ಪದಗಳಲ್ಲಿ ಒಂದು ಹೀಗಿದೆ :

ಕೋಲು ಕೋಲೆನ್ನಿರೋ - ಚಿನ್ನದಾ
ಕೋಲು ಕೋಲೆನ್ನಿರೋ - ರನ್ನದಾ
ಕೋಲು ಕೋಲೆನ್ನಿರೋ - ಪಂಚದಾ
ಕೋಲು ಕೋಲೆನ್ನಿರೋ - ಇತ್ಯಾದಿ

ಇಲ್ಲಿ 'ಪಂಚದ ಕೋಲು' ಎಂದರೆ. ಬಿದಿರಿನ ಕೋಲೇ ಸರಿ. ಮಲಯಾಳದಲ್ಲಿ ಸಕ್ಕರೆಯನ್ನು ಪಂಚಸಾರವೆನ್ನುವರಷ್ಟೆ. ಇದು 'ವಂಶಸಾರ' ಎಂಬುದರ ತದ್ಭವವೆಂದು ಹೇಳುತ್ತಾರೆ. 'ವಂಶ' ಎಂಬುದಕ್ಕೆ a kind of sugarcane (ಒಂದು ಬಗೆಯ ಕಬ್ಬು) ಎಂದು ಆಪಟೆಯವರ ಸಂಸ್ಕೃತಕೋಶದಲ್ಲಿ ಅರ್ಥವಿದೆ. ಆದುದರಿಂದ 'ಪಂಚ' ಎಂಬುದು 'ವಂಶ' ಎಂಬುದರ ತದ್ಭವವೆಂಬುದರಲ್ಲಿ ಸಂದೇಹವುಳಿಯುವುದಿಲ್ಲ.

ಶುಭ ಸಮಾರಂಭಗಳಲ್ಲಿ ಊದುವ 'ನಾಗಸ್ವರ' ವಾದ್ಯವನ್ನು 'ಪಂಚವಾದ್ಯ'ವೆಂದು ನಮ್ಮಲ್ಲಿ ಏಕೆ ಕರೆಯುತ್ತಾರೆಂಬುದು ಈಗ ತಿಳಿಯಬಹುದು. ನಾಗಸ್ವರವೂ ಒಂದು 'ವಂಶವಾದ್ಯ.'

ಈಗ, ಈ ಪಾಠದಂತೆ, “ಒತ್ತುವ ಪಂಚದ ನುರಕ್ಕಣಂ ಮೇಳತೆಯಿಲ್ಲ” ಎಂಬುದಕ್ಕೆ ಒತ್ತುವ ಎಂದರೆ ಊದುವ" ವಂಶವಾದ್ಯದ ಮಧುರ ಸ್ವರದ ಮೇಳವೇನೂ ಇಲ್ಲ ಎಂಬ ಸರಳವೂ ಸಮಂಜಸವೂ ಆದ ಅರ್ಥವೊದಗುತ್ತದೆ. ಇದು ಎಕ್ಕಲಗಾಣನ ಹಾಡುಗಾರಿಕೆಯ ಸ್ವರೂಪವನ್ನು ನಮಗೆ ಮತ್ತಷ್ಟು ಸ್ಪಷ್ಟವಾಗಿ ತಿಳಿಸುವುದು.


೧. ನೇಮಿಚಂದ್ರನ ಲೀಲಾವತಿ ಆಶ್ವಾಸ ೯-ಪದ್ಯ ೬೮; ಸಹಕಾರ ಕೋರಕಂ ಬಂಚದ ಭಂಗಿಯೊಳ್ ಬೆರಸ" - ಚಂದ್ರ ಕವಿಯ 'ವಿರೂಪಾಕ್ಷಾಸ್ಥಾನ ವರ್ಣನೆ'ಯಲ್ಲಿ. “ಮದ್ದಳೆಯ ಗವಸಣಿಗೆಯಂ ತೆಗೆದು, ವಂಚದ ಪವಣಂ ಪರಿಕಿಸಿ”- ಇತ್ಯಾದಿ.

೨. ಕೀ. ಶೇ. ಗಣಪತಿ ರಾವ್ ಐಗಳವರು ಬರೆದ 'ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ' ದಲ್ಲಿ (ಅಧ್ಯಾಯ ೩೫) ಸುಬ್ರಹ್ಮಣ್ಯ ಲಿಂಗಕ್ಕೆ ಮುಚ್ಚುವ ಕುಕ್ಕೆಗೆ 'ಪಂಚಕುಕ್ಕೆ' ಎಂದು ಹೆಸರೆಂದೂ ಆ ಕುಕ್ಕೆ ಲಿಂಗದ ಆಕಾರದಲ್ಲಿದೆಯೆಂದೂ ಹೇಳಿದೆ.

೩. ಒತ್ತುವ ಎಂಬುದಕ್ಕೆ ಬೇರೊಂದು ಅರ್ಥವಿರಲೂಬಹುದು. 'ಒತ್ತು' ಎಂಬ ಒಂದು 'ಶ್ರುತಿವಾದ'ವಿದೆಯೆಂದು ತಿಳಿದುಬರುತ್ತದೆ. (South Indian Music-Book Ill Page 194-195) ಹಾಗಾದರೆ 'ಒತ್ತುವ' ಎಂದರೆ 'ಒತ್ತುವಿನ'. 'ಒತ್ತು' ಎಂಬ ಶ್ರುತಿವಾದ್ಯದ- ಎಂದರ್ಥವಾಗುತ್ತದೆ. 'ವೃಂದಗಾನ'ದ ವರ್ಣನಾವಸರದಲ್ಲಿ ಅಗ್ಗಳನ್ನು (ಚಂ. ಪ್ರಭ, ದ್ವಿತೀಯ ಸಂ. ಪುಟ ೨೦೨) ವಾದ್ಯ ವಾದಕರೊಳಗೆ 'ಒತ್ತಕಾರ' ಎಂಬೊಂದು ಹೆಸರನ್ನೂ ಹೇಳುತ್ತಾನೆ. ಹಾಗಾದರೆ 'ಒತ್ತುವ ಪಂಚದ ನುಣ್ಣರ...' ಎಂಬ ಮಾತಿಗೆ, “ಶ್ರುತಿವಾದ್ಯದ ಹಾಗೂ ವಂಶವಾದ್ಯಕ್ಷ ಮಧುರ ಸ್ವರ...” ಎಂಬರ್ಥವಾಗುವುದು. "