ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮ / ಕುಕ್ಕಿಲ ಸಂಪುಟ

ಇನ್ನು ಸಭಾಲಕ್ಷಣದ ಕುರಿತು ಹೆಚ್ಚೇನೂ ಹೇಳತಕ್ಕ ಅಂಶ ಕಾಣುವುದಿಲ್ಲ. ಆ ಪೂರ್ವರಂಗದಲ್ಲಿ ಬರತಕ್ಕ ವೇಷಗಳ ವಿಚಾರವೆಂದರೆ- ಗಜಾನನಂ ಭೂತ ಗಣಾದಿ ಸೇವಿತಂ... ಎಂಬ ಶ್ಲೋಕಗಳನ್ನು ಹೇಳುವಾಗ ವಿಶ್ಲೇಶ್ವರನ (ಮುಖವಾಡ ಧರಿಸಿದ ಬ್ರಹ್ಮಚಾರಿ ವಟುವಿನ) ಪ್ರವೇಶ. ಇಲ್ಲ ದಿದ್ದರೆ ಗಣಪತಿಯ ಮೂರ್ತಿಯನ್ನು ರಂಗಸ್ಥಳಕ್ಕೆ ತಂದಿಟ್ಟು ಕಟ್ಟುವೇಷದವನೊಬ್ಬನು ಗಣಪತಿಸ್ತುತಿ ಪದ್ಯಗಳಿಗೆ ಕುಣಿಯುತ್ತಾನೆ. ಅದಕ್ಕೆ 'ಗಣಪತಿ ಕೌತಕಿತ' ಎಂಬ ನೃತ್ಯವನ್ನೂ ಮಾಡಬೇಕು. ಅದಕ್ಕೆ ಮುಂಚೆ ಬಾಲಗೋಪಾಲ ವೇಷದವರು ಸ್ತುತಿನರ್ತನ ಮಾಡಿ ಹೊರಟುಹೋಗಿರುತ್ತಾರೆ. ಅವರ ನೃತ್ಯಕ್ಕೆ ನಾಟ್ಯ ಶಾಸ್ತ್ರದಲ್ಲಿ 'ವೈಷ್ಣವ ಬಾಲಕ್ರೀಡೆ' ಎಂದು ಹೆಸರು.

ಗಣಪತಿ ಕೌತಕಿತವಾಗಿ ಆ ಪಾತ್ರವು ಹೊರಟು ಹೋದೊಡನೆ ಷಣ್ಮುಖನ ವೇಷದ ಪ್ರವೇಶ ಬರುತ್ತದೆ. 'ಕುಂಡಲ ಮಣಿ ಭೂಷಣ....' ಎಂಬ ಪದ್ಯ ಹಾಡುವಾಗ ಷಣ್ಮುಖನ ವೇಷ ತೆರೆ ಹಿಡಿದು ಪ್ರವೇಶಿಸುವುದು ಸಂಪ್ರದಾಯ. ಆಗ ಹಾಡುವ ಪದ್ಯ 'ಓ ದೇವಾ ದೇವಾಧಿದೇವನಲ್ಲವೋ' ಎಂದಿರುವುದಾಗಿದೆ. ಹಾಸ್ಯಗಾರನು ಜೊತೆಯಲ್ಲಿ ಅಣಕನೃತ್ಯ ಮಾಡುತ್ತಿರುತ್ತಾನೆ.

ಆಮೇಲೆ ಈಶ್ವರನ ವೇಷ ಬರಬೇಕು. ಶಿವನ ತಾಂಡವನೃತ್ತವು ಗೀತವಿಲ್ಲದೆ ನಡೆಯತಕ್ಕದ್ದು. ಅದಾದ ನಂತರ ಶಿವನಿಗೂ, ಹಾಸ್ಯಗಾರನಿಗೂ ಸರಸ ಸಂಭಾಷಣೆ ಇದೆ. ಆಗ 'ಕಾಣೆನೇ ಕಮಲಾಂಬಿಕೆಯ । ಎನ್ನ ಪ್ರಾಣನಾಯಕಿ ಪಾರ್ವತಿಯ' ಎಂಬ ಪದ್ಯವನ್ನು ಸಂಗೀತಗಾರನು ಹಾಡುತ್ತಾನೆ. 'ನಮ್ಮ ಅರ್ಧಾಂಗಿಯಾದ ಪಾರ್ವತಿಯನ್ನು ನೀನೆಲ್ಲಿ ಯಾದರೂ ಕಂಡಿದ್ದಿಯಾ' ಎಂಬ ಶಿವನ ಪ್ರಶ್ನೆಗೆ ಹಾಸ್ಯಗಾರನು, 'ಅದೆಂಥದ್ದಂಗಿಯಪ್ಪ! ಅದಕ್ಕೂ ಕಣ್ಣು, ಮೂಗು ಮೂರುಂಟೋ' ಎಂದು ಕೇಳುತ್ತಾನೆ. ಆಗ ಈಶ್ವರನು 'ಒಳ್ಳೆ ಇಂದುವದನೆ ಸುಂದರಾಂಗಿ' ಎನ್ನುತ್ತಾನೆ. ಆಗ ಸಂಗೀತಗಾರನು 'ಇಂದುವದನೆ ಮಂದಗಮನೆ ಸುಂದರಾಂಗಿ ಪಾರ್ವತಿ । ಕುಂದರದನೆ ಕುಮುದಗಂಧಿ । ಎನ್ನರ್ಧಾಂಗಿ ಪಾರ್ವತಿ' ಎಂಬ ಪದ್ಯ ಹಾಡುವುದಾಗಿದೆ - ಸ್ವರಪಾಟ ಸಮೇತ, ಹಾಗೆ ಕುಣಿದು ಈಶ್ವರವೇಷ ಹೊರಟುಹೋದ ತಕ್ಷಣ 'ಉಮಾ ಕಾತ್ಯಾಯಿನೀ ಗೌರೀ...' ಎಂಬ ಶ್ಲೋಕ ಹಾಡುವಾಗ ಪಾರ್ವತಿಯ ಸ್ತ್ರೀವೇಷ (ಇದಕ್ಕೆ ಇಂದುವದನೆ ಸ್ತ್ರೀವೇಷವೆಂದೇ ಹೆಸರು ಬಿದ್ದಿದೆ) ಬಂದು ಲಾಸ್ಕನ್ನತ್ತ ಮಾಡುತ್ತಾಳೆ. ಹಾಸ್ಯಗಾರನು ವಿನೋದಕರವಾದ ಅಪಹಾಸ್ಯ ಮಾತಾಡಿ ಚೆಲುವನಂಜುಂಡನಂತೆ ಕೇಳಲೆ ಕಾಂತೆ । ಬಿಡದೆ ಒಂದಾಗಿರುವಂತೆ ಸೇರೆಲೆ ಕಾಂತ” ಎಂದಾಗ ಪಾರ್ವತಿ ವೇಷ ಹೊರಟುಹೋಗಿ ಕೂಡಲೇ ಅರ್ಧನಾರೀಶ್ವರ ವೇಷ ಪ್ರವೇಶಿಸುವುದು. ಆಗ ಸಂಗೀತಗಾರನು "ವಿಶ್ವೇಶಾ ತವ ಶರಣಂ । ವಿಶ್ವನಾಥಾ ತವ ಶರಣಂ । ಹರನೇ ಕುಣಿಯೆಂದೂ ಗಿರಿಜಾಧವನೇ ಕುಣಿಯೆಂದೂ । ಇಂದುಧರನಾ ನುಡಿಯ ಕೇಳಿ ಚಂದದಲಿ ಎಡತೊಡೆಯನಾಳಿ । ಎಂದೂ “ಶ್ರೀ ಸದಾಶಿವನೊಳು ಒಂದಾಗಿರಲು ಪೇಳೆಲೆ ನಾರಿ' ಎಂಬ ಪದ್ಯವನ್ನು ಹಾಸ್ಯಗಾರನೂ ಹಾಡುವಾಗ ಅರ್ಧನಾರೀಶ್ವರ ವೇಷವು ಕುಣಿದು ಹೊರಟುಹೋಗುತ್ತದೆ. ಆಮೇಲೆ ತೆರೆ ಹಿಡಿದು “ಚಂದಭಾಮಾ, ಚಂದಭಾಮಾ, ಓ ಚಂದಭಾಮಾ । ಇಂದೆನ್ನ ಮನೆಗೆ ನೀ ಚಂದದಿ ಕರೆತಾರೆ ಎಂಬ ಪದ್ಯ ಹಾಡುವಾಗ 'ಗೊಲ್ಲ ಭಾಮಾ' ಎಂಬ ಸ್ತ್ರೀವೇಷದ ಪ್ರವೇಶ. ಜೊತೆಯಲ್ಲಿ 'ಗೊಲ್ಲಮಾಧವ'ನೆಂಬ ಹೆಸರಿನಿಂದ ಹಾಸ್ಯಗಾರನ ವೇಷವಿರುತ್ತದೆ. ಹಾಗೂ ಅವರಿಬ್ಬರೊಳಗೆ ವಿನೋದ ಸಂಭಾಷಣೆ ನಡೆಯುತ್ತದೆ. ಸಭಾಲಕ್ಷಣ ಗ್ರಂಥದಲ್ಲಿರುವ ಅದು ಬಹಳ ಸ್ವಾರಸ್ಯಕರವಾಗಿದೆ. ಪಾಠಾಕ್ಷರ ಸಮೇತ ಲಾಸ್ಯಾಂಗ ನೃತ್ತವೂ