ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨೨ | ಕುಕ್ಕಿಲ ಸಂಪುಟ

ಕೊನೆಯದು ರತಿಗಣವಾಗಬೇಕೆಂಬುದು ಸಾಂಗತ್ಯದಲ್ಲಿ ಸಾಮಾನ್ಯವಾಗಿ ಕಾಣುವ ನಿಯಮ, ಅಂತೆಯೇ ಉಳಿದ ಆರು ಕಾಮಗಣಗಳಾಗಿರಬೇಕು. ಲಕ್ಷ್ಯದಲ್ಲಿ ಇದಕ್ಕೆ ಅಪವಾದವಿದ್ದೇ ಇದೆ. ಕೊನೆಯಲ್ಲಿ ಎರಡು ರತಿಗಣವಿರುವುದೂ, ಆರನೆಯದು ರತಿಗಣವಾಗಿ ಏಳನೆಯದು ಕಾಮಗಣವಾಗಿರುವುದೂ ಇದೆ. ಕೊನೆಯ ಯತಿಸ್ಥಾನವು ಒಂದಕ್ಷರದಷ್ಟು ಹಿಂದೆ ಮುಂದಾಗುವ ಮಾತ್ರದಿಂದ ಆ ರತಿಗಣ ಕಾಮಗಣಗಳು ಹಿಂದೆ ಮು೦ದಾಗುವುದೂ ಸಂಭವನೀಯವೇ. ಉದಾಹರಣೆಗಾಗಿ, 'ಸುಪಠಿತಾ, ಗೇಯವಿ, ದಜನೈಃ,' ಎಂಬಂತೆ ಯತಿಸ್ಥಾನವನ್ನು ಒಂದಕ್ಷರ ಮುಂದೆ ದೂಡಿದರೆ ಶುದ್ಧ ಸಾಂಗತ್ಯ ವಾಗುವದು. ಹೀಗಾಗುವ ಒಂದೆರಡು ಪಾದಗಳನ್ನು ಪರಿಶೀಲಿಸಿರಿ-ಭರತೇಶ ವೈಭವದಿಂದ :

ಅನಿತರೊಳಗೆ ಸಮರಾತ್ರಿಯ ಘಂಟೆತೊ೦ |ಣನ ಕೇಳ, ಲಾಯ್ತು, ಹೋಯೆಂದು
ಈ ಧೂರ್ತೆಗಾಗಿ ಮುಸುಕನಿಕ್ಕಬೇಕೆಯೆಂ | ದಾದೊರೆ, ಯೊಡನೆ, ನುಡಿದರು

ಹೀಗಾಗುವಾಗ, ಸಾಂಗತ್ಯವೆಂಬುದು ಹನ್ನೆರಡನೆಯ ಶತಮಾನದಲ್ಲಿ ಯದೃಚ್ಛೆಯಿಂದ ಆಕಸ್ಮಾತ್ ಹುಟ್ಟಿದ ನವೀನ ಛಂದಸ್ಸೆಂದು ಎಣಿಸಬೇಕಾಗಿಲ್ಲ. ಎರಡು ಏಲಾ ಪದಗಳು ಒಟ್ಟು ಸೇರಿದರೆ ಆಗುವುದು ಒಂದು ಒಂದು ಸಾಂಗತ್ಯ. ಸಂಗೀತದ ಗಾನಕ್ರಮದಲ್ಲಿ ತ್ರಿಪಾದಾತ್ಮಕವಾದ ಏಲೆಯನ್ನು ಒಂದನ್ನಾಗಿ ಹಾಡುತ್ತಿದ್ದಿಲ್ಲ. ಎರಡು ಅಥವಾ ಎರಡಕ್ಕಿಂತ ಹೆಚ್ಚು ಬಂಧಗಳು ಸೇರಿದ ಗೇಯವಸ್ತುವು ಸಂಪೂರ್ಣವೆಂದೆಣಿಸಲ್ಪಡು ತಿತ್ತು. ಪ್ರಬಂಧವೊಂದರಲ್ಲಿ ಉದ್ರಾಹ, ಮೇಲಾಪಕ, ಧ್ರುವ, ಆಭೋಗ ಎಂಬ ನಾಲ್ಕು ಧಾತುಗಳಿರಬೇಕೆಂದು ಸಾಮಾನ್ಯ ನಿಯಮವಿರುವುದು. ಆಧುನಿಕ ಸಂಪ್ರದಾಯದ ಕೀರ್ತನೆ ಗಳಿಗೆ ಅನ್ವಯಿಸಿ ಹೇಳುವುದಿದ್ದರೆ ಈ ನಾಲ್ಕು ಧಾತುಗಳನ್ನು ಕ್ರಮವಾಗಿ ಪಲ್ಲವಿ, ಅನುಪಲ್ಲವಿ, ಮಧ್ಯದ ಚರಣ, ಮುಗಿತಾಯದ ಚರಣ ಎಂದು ಹೇಳಬಹುದು. ಇವುಗಳಲ್ಲಿ ಮೇಲಾಪಕ, ಆಭೋಗಗಳೆಂಬ ಧಾತುಖಂಡಗಳು ಇಲ್ಲದಿರಲೂಬಹುದು. ಕನಿಷ್ಠ ಪಕ್ಷ ಉದ್ಗ್ರಾಹ ಮತ್ತು ಧ್ರುವ, ಪಲ್ಲವಿ ಅಥವಾ ಚರಣ ಇವೆರಡು ಇರಲೇಬೇಕು. ತ್ರಿಪಾದಾತ್ಮಕವಾದ ಏಲಾ ಬಂಧವೊಂದು ಉದ್ಗ್ರಾಹವಾಗಿ ಹಾಡಲ್ಪಡುತ್ತಿತ್ತು. ಇಂತಹ ಇನ್ನು ಮೂರು ಪಾದಗಳಲ್ಲಿ ಒಂದನ್ನು ಮೇಲಾಪಕವಾಗಿಯೂ ಇನ್ನೊಂದನ್ನು ಧ್ರುವ ವಾಗಿಯೂ ಕೊನೆಯದನ್ನು ಅಭೋಗವಾಗಿಯೂ ಹಾಡಲಾಗುತ್ತಿತ್ತು. ಇದು ಒಂದು ಕ್ರಮ. ಇನ್ನೊಂದು ಕ್ರಮದಂತೆ, ಕ್ರಮವಾಗಿ ಎರಡೆರಡು ಪಾದಗಳನ್ನು ಚರಣವೆಂದು ಗ್ರಹಿಸಿ ಆ ಪ್ರಕಾರ ಎರಡು ಬಂಧಗಳನ್ನೂ ಒಂದು ಗೂಡಿಸಿ ಎಂದರೆ ಆರು ಪಾದಗಳನ್ನು ಮೂರು ಪಾದಗಳೆಂದೆಣಿಸಿ ಹಾಡಲಾಗುತ್ತಿತ್ತು. ಏಲಾಪದ ಗಾನದ ಸಾಮಾನ್ಯ ಲಕ್ಷಣ ಹೀಗೆ.

ಈ ಪ್ರಕಾರ ಉದ್ಗ್ರಾಹಾದಿ ಚತುರ್ಧಾತುಗಳು ಎಲೆಯ ಎರಡು ಬಂಧಗಳ ಹದಿನಾರು ಪದಗಳಲ್ಲಿ ಪರಿಪೂರ್ಣವೆಂದು ಎಣಿಸಲಾಗುತ್ತಿತ್ತು. ಆಭೋಗವೆಂಬುದು ಪ್ರಬಂಧದ ಕೊನೆಯ ಧಾತು ಅಥವಾ ಗೀತಖಂಡ, ಆಭೋಗವೆಂದರೆ ಪರಿಪೂರ್ಣ ಎಂದರ್ಥ (ಆಭೋಗಃ ಪರಿಪೂರ್ಣತಾ' -ಅಮರ) ಮೊದಲು ಹೇಳಿದಂತೆ ಎರಡು 'ಛಂದಸ್ವತೀ ರತಿಲೇಖಾ' ಬಂಧಗಳು ಒಟ್ಟು ಸೇರುವಾಗ ಒಂದು ಸಾಂಗತ್ಯವಾಗುವುದು. ಎರಡು ಏಲೆಗಳು ಸಂಗತವಾಗಿರುವುದರಿಂದಲೆ ಇದು ಸಾಂಗತ್ಯವೆಂಬ ಸಾರ್ಥಕವಾದ ಸಂಜ್ಞಾಂತರವನ್ನು ಪಡೆದಿರುವುದೂ ಸಂಭವನೀಯ. ಕೆಲವು ಯಕ್ಷಗಾನಾದಿ ಗ್ರಂಥಗಳಲ್ಲಿ ಸಾಂಗತ್ಯಕ್ಕೆ ಸಂಗೀತವರ್ಣ, ಸಾಂಗೀತ್ಮಕ ಎಂಬ ಹೆಸರಿರುವುದೂ ಕಾಣುತ್ತದೆ.