ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೭೪ | ಕುಕ್ಕಿಲ ಸಂಪುಟ
ಗ್ರಂಥಾಲಯದಲ್ಲಿ ಅನೇಕ ತಾಡವಾಲೆಗಳಿದ್ದವು. ಓಲೆಗ್ರಂಥವಾಚನ ಕುಕ್ಕಿಲರಿಗೆ ಕರತಲಾಮಲಕ. ಅವರು ಓದಿ ಹೇಳಿದುದನ್ನು ನಾನು ಬರೆದುಕೊಳ್ಳುತ್ತಿದ್ದೆ. ಆ ದಿನಗಳಲ್ಲಿ ಅವರ ಕೈಗೆ ವಿದ್ಯುತ್‌ ಆಘಾತವೇನೋ ಆಗಿ ಸರಿಯಾಗಿ ಬರೆಯಲು ಅವರಿಗೆ ಆಗುತ್ತಿರಲಿಲ್ಲ. ಅಂತೂ ತುಂಬಾ ಪ್ರಯೋಜನಕಾರಿಯಾದ ಸಾಮಗ್ರಿಗಳು ಮೈಸೂರಲ್ಲಿ ದೊರೆತವು. 'ಐರಾವತ'ದ ಒಂದು ಪ್ರತಿಯಲ್ಲಿ, 'ಗಜನೋಂಪಿ'ಗಾಗಿ ಬಂದ ಅರಸುಗಳ ಯಾದಿಯಲ್ಲಿ 'ಕವಿದೇಸಿಂಗ' ಅರಸನೂ ಬಂದಿದ್ದ ಎಂಬ ಉಲ್ಲೇಖ ಇದ್ದುದು ನನಗೆ ನೆನಪಿದೆ. 'ಕವಿದೇಸಿಂಗ' (ಕವಿ ಜಯಸಿಂಹ) ಎಂಬುದು ಕುಂಬಳೆ ಅರಸರಿಗೆ ಇದ್ದ ಬಿರುದು. ಪಾರ್ತಿಸುಬ್ಬನು ಕುಂಬಳೆಯವನು ಎಂಬುದಕ್ಕೆ ಇದೂ ಒಂದು ಸಾಕ್ಷಿಯಾಗು ತ್ತದೆ ಎಂದುಕೊಂಡೆವು.
ಶೂರ್ಪನಖೆಯ ಕುಚಚ್ಛೇದನ ಪ್ರಕರಣವು ವಾಲ್ಮೀಕಿ ರಾಮಾಯಣದಲ್ಲಾಗಲೀ, ತೊರವೆ ರಾಮಾಯಣವೇ ಮೊದಲಾದ ಕನ್ನಡ ರಾಮಾಯಣಗಳಲ್ಲಾಗಲೀ ಬರುವುದಿಲ್ಲ ವಷ್ಟೆ? ಒಮ್ಮೆ ನಾನು ಸಂತ ಅಲೋಶಿಯಸ್ ಕಾಲೇಜಿನ ಗ್ರಂಥಭಂಡಾರದಲ್ಲಿನ 'ಆಟಕ್ಕಥಾ' ಎಂಬ ಮಲೆಯಾಳ ಗ್ರಂಥವನ್ನು ತೆಗೆದುಕೊಂಡು ಅದೇ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ದಿ. ಕುಂಬಳೆ ಗಣಪತಿ ಭಟ್ಟರ ಸಹಾಯದಿಂದ ಕೆಲವು ಭಾಗಗಳನ್ನು ಗಮನಿಸಿದಾಗ, ಮಲೆಯಾಳದ 'ರಾಮನಾಟಂ' ಎಂಬ ಕೊಟ್ಟಾರಕರ ಮಹಾರಾಜ ಕೃತ ಕಥಕಳಿ ಪ್ರಸಂಗದಲ್ಲಿ ಶೂರ್ಪನಖೆಯ ಕುಚಚ್ಛೇದ ಪ್ರಸಂಗ ಇರುವುದನ್ನು ತಿಳಿದೆ. ಈ ವಿಚಾರವನ್ನು ಕುಕ್ಕಿಲರಿಗೆ ತಿಳಿಸಿದಾಗ ಅವರು ತುಂಬ ಕುತೂಹಲಗೊಂಡರು. ರಾಮನಾಟಂ ಗ್ರಂಥವನ್ನು ಆಮೂಲಾಗ್ರವಾಗಿ ತಿಳಿಯುವ ಸಂಕಲ್ಪ ಮಾಡಿದರು. ಅವರಿಗೆ ಆಗ ಮಲೆಯಾಳ ಭಾಷೆಯ ಲಿಪಿಜ್ಜಾನವಿತ್ತೋ ತಿಳಿಯದು. ಇರಲಿಲ್ಲವೆಂದೇ ನನ್ನ ಗ್ರಹಿಕೆ. ಆದರೆ ಸ್ವಲ್ಪವೇ ಸಮಯದಲ್ಲಿ ಚಲತೊಟ್ಟು, ಮಲೆಯಾಳ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಂಡರು. 'ಅಲಭ್ಯವಾಗಿದ್ದ ಕಥಕಳಿ ರಾಮಾಯಣದ ಗ್ರಂಥವನ್ನು ಅತಿಪ್ರಯಾಸದಿಂದ ಸಂಗ್ರಹಿಸಿದರು. ಕಥಕಳಿ ರಾಮಾಯಣಕ್ಕೂ ಪಾರ್ತಿಸುಬ್ಬನ ಪ್ರಸಂಗ ಗಳಿಗೂ ಇರತಕ್ಕ ನಿಕಟ ಸಂಬಂಧವನ್ನು ಕಂಡುಕೊಂಡರು. ಕೆಲವು ಭಾಗ ನೇರವಾದ ಅನುವಾದ ಎಂಬುದನ್ನು ಗುರುತು ಹಚ್ಚಿದರು.
ಕೋಟೆಕಾರಿನ ಸಾಹಿತ್ಯ ಸಂಘದವರು ೧೯೬೧ರಲ್ಲಿ ಪಾರ್ತಿಸುಬ್ಬ ಜಯಂತಿಯನ್ನು ಆಚರಿಸಿದಾಗ ಕುಕ್ಕಿಲ ಕೃಷ್ಣ ಭಟ್ಟರು ವಿಶೇಷ ಅತಿಥಿಯಾಗಿ ಆಗಮಿಸಿ ಪಾರ್ತಿಸುಬ್ಬನ ವಿಚಾರದಲ್ಲಿ ತನ್ನ ಸಂಶೋಧನೆಯ ಫಲಿತಾಂಶಗಳನ್ನು ಸುಧೀರ್ಘವಾಗಿ ಮಂಡಿಸಿದರು. ಅದು ಒಂದು ಪುಸ್ತಿಕೆಯಾಗಿ ಪ್ರಕಟವಾಯಿತು. ಅದನ್ನು ಓದಿದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರು ತುಂಬ ಮೆಚ್ಚುಗೆಯನ್ನು ಸೂಚಿಸಿದ್ದರು.
ಡಾ| ಕಾರಂತರು ಮಾಡಿದ ಕವಿ ಕಾವ್ಯ ಕಾಲ ಗಣನೆಯಲ್ಲಿ ದೋಷವಿದ್ದುದನ್ನೂ, ಇತರ ವಿಚಾರಗಳನ್ನೂ ಕುರಿತು ಪತ್ರಿಕೆಗಳಿಗೆ ಬರೆಯಲಾರಂಭಿಸಿದರು ಕುಕ್ಕಿಲರು. ಮತ್ತೆ ಚರ್ಚೆ ಬೆಳೆಯಿತು. ಡಾ| ಶಿವರಾಮ ಕಾರಂತರು ತಮ್ಮ ನಿಲುಮೆಯಲ್ಲಿ ಹೆಚ್ಚು ವ್ಯತ್ಯಾಸ ಮಾಡಿಕೊಳ್ಳದಿದ್ದರೂ, ಕಾಲಗಣನೆಯ ವಿಚಾರದಲ್ಲಿ ತುಸು ವ್ಯತ್ಯಾಸ ಮಾಡಿಕೊಂಡದ್ದೂ ಇದೆ.
ಯಕ್ಷಗಾನ ಕವಿಚರಿತ್ರೆಯೊಂದು ಸಿದ್ಧವಾದರೆ ಒಳ್ಳೆಯದು ಎಂಬ ಅಭಿಪ್ರಾಯದಿಂದ ಕುಕ್ಕಿಲರು ಮತ್ತು ನಾನು ಒಂದಿಷ್ಟು ಪ್ರಯತ್ನಪಟ್ಟುದಿದೆ. ಅವರಲ್ಲಿ ಸಾಕಷ್ಟು ಹಸ್ತಪ್ರತಿ ಗಳ ಸಂಗ್ರಹವಿತ್ತು. ಅವುಗಳ ಬಗೆಗೆ ಸಂಕ್ಷಿಪ್ತ ಟಿಪ್ಪಣಿಗಳನ್ನು ಮಾಡಿಕೊಂಡಿದ್ದರು.