ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನಾನು ಕಂಡ ಕುಕ್ಕಿಲ ಕೃಷ್ಣ ಭಟ್ಟರು

ಒಂದು ಬಾರಿ ಅವರಲ್ಲಿಗೆ ಹೋಗಿದ್ದಾಗ ತಮ್ಮ ಅಪ್ರಕಟಿತ ತಮಿಳು ಛಂದೋ ವಿಚಾರದ ಬಗೆಗಿನ ಪುಸ್ತಕವನ್ನೂ ಕೆಲವು ಅಪ್ರಕಟಿತ ಲೇಖನಗಳನ್ನೂ ತೋರಿಸಿದ್ದರು. ಛಂದಸ್ಸಂಬಂಧೀ ಗ್ರಂಥದ ಪ್ರಕಾಶನದ ಅಭಿಲಾಷೆಯಿದೆಯೆಂದೂ ಲೇಖನಗಳ ಪ್ರಕಟನ ದಲ್ಲಿ ಹೆಚ್ಚಿನ ಆಸಕ್ತಿಯಿಲ್ಲವೆಂದೂ ಹೇಳಿದ್ದರು. ಆ ಎರಡು ಅಪ್ರಕಟಿತ ಲೇಖನಗಳನ್ನು ನಾನು ತೆಗೆದುಕೊಂಡು ಪ್ರಕಟನೆಗೆ ಪ್ರಯತ್ನಿಸುವುದಾಗಿ ಹೇಳಿದ್ದಕ್ಕೆ ಒಪ್ಪಿಕೊಂಡು ನನ್ನ ಕೈಗಿತ್ತರು. ಒಂದು ಲೇಖನವು ಬೆಂಗಳೂರಿನ ಬಿ. ಎಂ. ಶ್ರೀ. ಪ್ರತಿಷ್ಠಾನದ 'ಲೋಚನ' ಪತ್ರಿಕೆಯಲ್ಲಿ ಪ್ರಕಟಗೊಂಡಿತು, ಮತ್ತೊಂದು ಮಂಡೆಚ್ಚ, ಸ್ಮಾರಕಗ್ರಂಥವಾದ 'ಗಾನ ಕೋಗಿಲೆ'ಯಲ್ಲಿ ಪ್ರಕಾಶಿತವಾಯಿತು.
ಕುಕ್ಕಿಲ ಕೃಷ್ಣ ಭಟ್ಟರು ಪಾರ್ತಿಸುಬ್ಬನ ಬಗ್ಗೆ ಕನ್ನಡ ವಿಶ್ವಕೋಶದಲ್ಲಿ ಒಂದು ಲೇಖನ ಬರೆದಿದ್ದರು. 'ಪಾರ್ತಿಸುಬ್ಬನ ಯಕ್ಷಗಾನಗಳು' ಎಂಬ ಕೃತಿಯಲ್ಲಿ ಅವರು ಪಾರ್ತಿಸುಬ್ಬನ ಕಾಲ ನಿರ್ಣಯವನ್ನು ಅಂತಿಮವಾಗಿ ಸಾಧಾರವಾಗಿ ಮಾಡಿದ್ದಾರಷ್ಟೆ, ಈ ಕೃತಿಯ ಪ್ರಕಟನೆಯ ಅನಂತರ ಪ್ರಕಟವಾದ ವಿಶ್ವಕೋಶದಲ್ಲಿ ಅವರೇ ತಪ್ಪಾಗಿ ಕಾಲನಿರ್ಣಯ ಮಾಡಿರುತ್ತಾರೆಂಬ ಒಂದು ಆಕ್ಷೇಪ ಪತ್ರಿಕೆಯಲ್ಲಿ ಬಂದಿತ್ತು. ನಿಜವಾಗಿ ವಿಶ್ವಕೋಶಕ್ಕಾಗಿ ಬರೆದ ಲೇಖನವು ಅಂತಿಮವಾಗಿ ಪಾರ್ತಿಸುಬ್ಬನ ಕಾಲ ನಿರ್ಣಯ ವಾಗುವುದಕ್ಕಿಂತಲೂ ಎಷ್ಟೋ ಮುಂಚಿತವಾಗಿಯೇ ರಚಿತವಾದುದಾಗಿತ್ತು ಮತ್ತು ಕೃಷ್ಣ ಭಟ್ಟರೇ ಮಾಡಿದ ಆ ಕಾಲ ನಿರ್ಣಯವು ಸರಿಯಾಗಿರಲಿಲ್ಲ. ಆ ಲೇಖನ ವಿಶ್ವಕೋಶದಲ್ಲಿ ಪ್ರಕಟಗೊಂಡುದು ಬಹಳ ಕಾಲದ ಅನಂತರವಾದುದರಿಂದ ಮೇಲಿನ ಆಕ್ಷೇಪ ಬಂದಿತ್ತು. ಈ ವಿಷಯವನ್ನು ಸ್ಪಷ್ಟಿಕರಿಸಿ ನಾನು ಪತ್ರಿಕೆಗೊಂದು ಪತ್ರ ಬರೆದಿದ್ದೆ. ಅದೇ ದಿನ ಕೃಷ್ಣ ಭಟ್ಟರ ಸ್ಪಷ್ಟಿಕರಣವೂ ಪ್ರಕಟವಾಗಿತ್ತು. ಕೆಲವೇ ದಿನಗಳಲ್ಲಿ ಕೃಷ್ಣ ಭಟ್ಟರಿಂದ ಒಂದು ಪತ್ರ ನನಗೆ ಬಂತು. ಅದರಲ್ಲಿ ಪಾರ್ತಿಸುಬ್ಬನ ಬಗ್ಗೆ ಇನ್ನೂ ವಿವಾದಗಳು ಮುಗಿದಂತಿಲ್ಲ ವಾದುದರಿಂದ, ನಾನು ಅವರಿಂದ ಅಧ್ಯಯನಕ್ಕಾಗಿ ತಂದ ಕೆಲವು ಪುಸ್ತಕಗಳನ್ನೂ ಪಾರ್ತಿಸುಬ್ಬನ ಬಗೆಗಿನ ಚರ್ಚಾಕಾಲದಲ್ಲಿ ಕಾರಂತ, ಎನ್. ಭೀಮ ಭಟ್ಟ ಮೊದಲಾದವ ರೊಳಗೆ ನಡೆದ ಪತ್ರಿಕಾ ಲೇಖನ ವಾದವಿವಾದಗಳ ಪ್ರತಿಗಳನ್ನೂ ಆದಷ್ಟು ಶೀಘ್ರವಾಗಿ ತಲುಪಿಸುವಂತೆ ತಿಳಿಸಿದ್ದರು. ಕೂಡಲೇ ಅವರಲ್ಲಿಗೆ ಹೋಗಿ ಅವುಗಳನ್ನು ಹಿಂತಿರುಗಿಸಿ ಬಂದೆ. ಆ ದಿನ ಪುನಃ ಪಾರ್ತಿಸುಬ್ಬನ ಬಗ್ಗೆ ತೀರ್ಮಾನ ಅಂತಿಮವೆಂದೂ ಈಗಿನ ಕಾಲನಿರ್ಣಯದಲ್ಲಿ ಯಾವ ಸಂದೇಹಗಳೂ ಇಲ್ಲವೆಂದೂ ಸ್ಪಷ್ಟವಾಗಿ ತಿಳಿಸಿದ್ದಲ್ಲದೆ ಈ ಎಲ್ಲ ವಾದವಿವಾದಗಳು ಬಗೆಹರಿಯಲು ಯಕ್ಷಗಾನ ಕ್ಷೇತ್ರದಲ್ಲಿ ಗ್ರಂಥಸಂಪಾದನೆ ಯಂತಹ ಕೆಲವು ಮುಖ್ಯವಾದ ಆರಂಭಿಕ ಕೆಲಸಗಳು ನಡೆಯಬೇಕೆಂದು ಹೇಳಿದರು. ಪಾರ್ತಿಸುಬ್ಬನ ಕೃತಿಗಳನ್ನು ತಾನು ಶಾಸ್ತ್ರೀಯವಾಗಿ ಸಂಪಾದಿಸಿದಂತೆ ಇನ್ನಿತರ ಕವಿಗಳ ಕೃತಿಗಳೂ ಶಾಸ್ತ್ರೀಯವಾಗಿ ಸಂಪಾದಿಸಲ್ಪಡಬೇಕೆಂದು ಹೇಳಿದರು. ಸಂಶೋಧಕರಿಗೆ ಶಾಸ್ತ್ರೀಯ ಹಿನ್ನೆಲೆ ಇರಲೇ ಬೇಕೆಂದು ಒತ್ತಿ ಹೇಳಿದರು.
ಮುಂದೆ ಕೆಲವೇ ದಿನಗಳಲ್ಲಿ ಕುಕ್ಕಿಲ ಕೃಷ್ಣ ಭಟ್ಟರು ತೀರಿಕೊಂಡ ವಾರ್ತೆ ಬಂತು. ಸೇಡಿಯಾಪು ಕೃಷ್ಣ ಭಟ್ಟರಲ್ಲಿಗೆ ಅವರ ಲಿಪಿಕಾರನಾಗಿ ನಾನು ಹೋಗುತ್ತಿದ್ದುದರಿಂದ ಅವರು ಕುಕ್ಕಿಲ ಕೃಷ್ಣ ಭಟ್ಟರ ಬಗ್ಗೆ ಬರೆಯಿಸಿದ ಸ್ಮಾರಕ ಲೇಖನವನ್ನು ಬರೆದುಕೊಳ್ಳುವ ಸಂದರ್ಭವೂ ನನಗೆ ಬಂತು. (ಈ ಲೇಖನವು ನಾನು ಸಂಪಾದಕನಾಗಿದ್ದು ಪುತ್ತೂರು ಕರ್ನಾಟಕ ಸಂಘವು ಪ್ರಕಟಿಸಿದ ಸೇಡಿಯಾಪು ಕೃಷ್ಣ ಭಟ್ಟರ ಲೇಖನಗಳ ಸಂಕಲನವಾದ 'ವಿಚಾರ ಪ್ರಪಂಚ' (೧೯೯೨)ರಲ್ಲಿ ಸೇರ್ಪಡೆಗೊಂಡಿದೆ.) ಆ ಸಂದರ್ಭದಲ್ಲಿ ಕುಕ್ಕಿಲ ಕೃಷ್ಣ
25