೨೪ / ಕುಕ್ಕಿಲ ಸಂಪುಟ
ಈ ನಾಟ್ಯಶಾಸ್ತ್ರಕ್ಕೆ ಹಿಂದೆಯೂ ನಾಟ್ಯ ಲಕ್ಷಣಗಳನ್ನು ನಿರ್ದೇಶಿಸುವ ಸೂತ್ರಗ್ರಂಥಗಳಿದ್ದು ವೆಂದು ತಿಳಿಯುತ್ತದಾದರೂ ಅವು ಉಪಲಬ್ಧವಾಗಿಲ್ಲ. ಈ ನಾಟ್ಯಾಂಗಗಳಾದ ಗಾನ, ನೃತ್ಯ, ಗೀತ, ಪಾಠಾತ್ಮಕವಾದ ಕಥಾಸಾಹಿತ್ಯ (ದೃಶ್ಯಕಾವ್ಯ) ಎಂಬ ಮೂರು ಭಾಗಗಳು, ಸ್ವತಂತ್ರ ಕಲೆಗಳಾಗಿಯೂ ಬೆಳೆದುಬಂದಿವೆ. ನಾಟ್ಯಶಾಸ್ತ್ರದ ಉತ್ತರ ಕಾಲದಲ್ಲಿ ಈ ಒಂದೊಂದು ಕಲೆಗಳಿಗೂ ಪ್ರತ್ಯೇಕ ಲಕ್ಷಣ ಗ್ರಂಥಗಳು ಅನೇಕ ಹುಟ್ಟಿಕೊಂಡಿವೆ. ಕಾಲಧರ್ಮಕ್ಕನುಸಾರವಾಗಿ ಲಕ್ಷ್ಯ ಮಾರ್ಗದಲ್ಲಿ ಈ ಕಲೆಗಳು ನಾಟ್ಯಶಾಸ್ರೋಕ್ತ ಲಕ್ಷಣ ಗಳಿಗಿಂತ ಅಷ್ಟಿಷ್ಟು ಹೆಚ್ಚು ಕಡಿಮೆಯಾದ ಸಂದರ್ಭಗಳೂ ಇವೆ. ಇಂತಹ ಲಕ್ಷ್ಯಭೇದ ಗಳನ್ನು ಅಳವಡಿಸಿಕೊಂಡೇ ಶಾಸ್ತ್ರ ಗ್ರಂಥಗಳೂ ಲಕ್ಷ್ಯಪ್ರಧಾನವಾಗಿ ರಚಿಸಲ್ಪಟ್ಟಿವೆ. ಹೀಗಾಗಿ ನಾಟ್ಯಶಾಸ್ತ್ರೋಕ್ತ ಲಕ್ಷಣಗಳ ಮತ್ತು ಪರಿಭಾಷೆಗಳ ಶಬ್ದರೂಪದಲ್ಲಿಯೂ ಅರ್ಥವ್ಯಾಪ್ತಿಯಲ್ಲಿಯೂ ಕಾಲಕಾಲಕ್ಕೆ ಹೆಚ್ಚು ಕಡಿಮೆಯಾಗಿರುವುದೂ ಕಂಡುಬರುತ್ತದೆ. ಆದುದರಿಂದ ಪ್ರಾಚೀನ ಶಾಸ್ತ್ರಗ್ರಂಥಗಳಿಗೆಲ್ಲ ಮೂಲಾಧಾರವಾದ ಭರತನ ನಾಟ್ಯಶಾಸ್ತ್ರ ವನ್ನೂ ತದುತ್ತರ ಕಾಲೀನ ಲಕ್ಷಣ ಗ್ರಂಥಗಳಲ್ಲಿ ಕೆಲವನ್ನೂ ಆಧರಿಸಿಕೊಂಡು ನಮ್ಮ ಬಯಲಾಟದ ಶಾಸ್ತ್ರೀಯತೆಯನ್ನು ತುಲನಾತ್ಮಕವಾಗಿ ಸ್ಕೂಲ ಮಾನದಿಂದ ಪರಿಶೀಲಿಸುವ ಪ್ರಯತ್ನವನ್ನು ಮಾಡುತ್ತೇನೆ.
ಭರತನು ನಾಟ್ಯಶಾಸ್ತ್ರದಲ್ಲಿ ದೃಶ್ಯವೂ ಶ್ರವ್ಯವೂ ಆದ ಪ್ರಯೋಗವನ್ನು 'ಕ್ರೀಡ
ನೀಯಕ' (ಕುಣಿದಾಡತಕ್ಕುದು) ಎಂದೇ ಕರೆದಿರುತ್ತಾನೆ. 'ಕ್ರೀಡನೀಯಕಮಿಚ್ಛಾಮೋ
ದೃಶ್ಯಂ ಶ್ರವ್ಯಂ ಚ ಯದ್ಭವೇತ್' ಎಂದು ದೇವತೆಗಳು ಬ್ರಹ್ಮನನ್ನು ಕೇಳಿದ್ದಾಗಿಯೂ,
ಬ್ರಹ್ಮನು ನಾಲ್ಕು ವೇದಗಳಿಂದ ಚತುರ್ವಿಧವಾದ ಅಭಿನಯಗಳನ್ನು ಸಂಗ್ರಹಿಸಿ 'ನಾಟ್ಯ
ಸಂಜ್ಞಮಿಮಂ ವೇದಂ ಸೇತಿಹಾಸಂ ಕರೋಮ್ಯಹಂ' ಎಂದು ಹೇಳಿದ್ದಾಗಿಯೂ ನಾಟ್ಯ
ಶಾಸ್ತ್ರಾರಂಭದಲ್ಲಿ ಉಲ್ಲೇಖವಿದೆ. ಉಪಸಂಹಾರದಲ್ಲಿಯೂ ಇದಂ ಶಾಸ್ತ್ರಂ ಕ್ರೀಡ
ನೀಯಕ ಹೇತುಕಂ | ಅಧಿಷ್ಠಿತಂ ಮಯಾ' ಎಂದು ಭರತನೇ ಹೇಳಿರುತ್ತಾನೆ. ದೃಶ್ಯ
ಪ್ರಯೋಗಕ್ಕೆ "ಆಟ" ಎಂದೇ ನಾಟ್ಯಶಾಸ್ತ್ರದಲ್ಲಿರುವ ಹೆಸರೆಂಬುದು ಸುಸ್ಪಷ್ಟವಾಗಿದೆ.
ಅನೇಕ ವಿಧದ ಆಟಗಳ ಲಕ್ಷಣಗಳನ್ನೇ ನಿರೂಪಿಸಿದ ಗ್ರಂಥವದು. ನಾಟ್ಯವೆಂದು ಅದಕ್ಕೆ
ಸಂಜ್ಞೆ. ಅದರಿಂದ ನಾಟ್ಯಶಾಸ್ತ್ರವೆಂದು ಪ್ರಸಿದ್ಧಿ, ನಾಟಕಾದಿ ದಶರೂಪಕಗಳು ದೃಶ್ಯ
ಪ್ರಯೋಗದ ಭೇದಗಳು. ಸಂಸ್ಕೃತ ನಾಟಕಗಳಲ್ಲಿ ಕಾಲಕ್ರಮೇಣ ನೃತ್ತಭಾಗವು
ಕ್ಷೀಣಿಸುತ್ತ ಬಂದಿರುವುದಾದರೂ ಭರತೋಕ್ತ ಲಕ್ಷಣ ಪ್ರಕಾರ ನಾಟಕವೂ ನರ್ತನ
ಪ್ರಾಯವಾದುದೇ ಆಗಿದೆ ಎಂಬುದು ನಾಟ್ಯಶಾಸ್ತ್ರದಲ್ಲಿ ಸುವ್ಯಕ್ತವಾಗಿದೆ. ನಾಟಕಾಶ್ರಯ
ವಾದ ಕಾವ್ಯ ರಚನೆಯ ಕುರಿತು ನಾಟಕವು ನೃತ್ತಯೋಗ್ಯವಾಗಿರಬೇಕೆಂದು ಅವನು ಹೇಳಿದ
ಶ್ಲೋಕವು ಹೀಗಿದೆ :
ಮೃದುಲಲಿತ ಪದಾರ್ಥಂ ಗೂಢ ಶಬ್ದಾರ್ಥ ಹೀನಂ |
ಬುಧ ಜನ ಸುಖಯೋಗ್ಯಂ ಬುದ್ಧಿ ಮನ್ನ್ರುತ್ತ ಯೋಗ್ಯಂ...
ಭವತಿ ಜಗತಿಯೋಗ್ಯಂ ನಾಟಕಂ ಪ್ರೇಕ್ಷಕಾಣಾಂ ǁ
'ಭಾವಪ್ರಕಾಶ'ದ ನಾಟಕ ಲಕ್ಷಣದಲ್ಲಿಯೂ
ನಟೋ ಗೀತೇನ ನಾಟ್ಯೇನ ನೃತ್ಯೇನಾಭಿನಯೇನ ಚ...
ಪ್ರೇಕ್ಷಕಾನ್ ರಮಯಿಷ್ಯತಿ - ಎಂದಿದೆ.