ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ದೃಶ್ಯ ಪ್ರಯೋಗದ ಶಾಸ್ತ್ರೀಯತೆ । ೩೧


ಎಳೆದುಕೊಳ್ಳುತ್ತಾರೆ. ರಾಮ, ಲಕ್ಷ್ಮಣ, ಅರ್ಜುನ, ದೇವೇಂದ್ರ, ಕೀಚಕ ಇವುಗಳೆಲ್ಲ ಶೃಂಗಾರ ವೇಷಗಳೇ. ಮುಖ್ಯ ವೇಷಗಳೆಂದೂ ಕರೆಯುತ್ತಾರೆ. ಬಣ್ಣವನ್ನು ಹಚ್ಚುವ ಸ್ಥಾನ ಭೇದದಿಂದಲೂ, ಪ್ರತ್ಯೇಕ ಬಣ್ಣಗಳಿಂದ ಚಿತ್ರಿಸುವ ಆಕಾರ ಭೇದದಿಂದಲೂ, ಪ್ರತಿಯೊಂದು ವೇಷವೂ ತನ್ನದೇ ಆದ ವಿಶಿಷ್ಟ ರೂಪ ಪಡೆಯುವಂತೆ ಮಾಡುತ್ತಾರೆ. ಆಯಾ ಪಾತ್ರಗಳ ಸ್ವಭಾವಗುಣ ಧರ್ಮಗಳನ್ನು ವ್ಯಕ್ತಪಡಿಸುವ ಕಾಲ್ಪನಿಕ ಸ್ವರೂಪದ ಚಿತ್ರವು ಪ್ರೇಕ್ಷಕರ ಚಿತ್ತಭಿತ್ತಿಯಲ್ಲಿ ಸ್ಥಿರವಾಗಿ ನಿಲ್ಲುವಂತಾಗುವುದೇ ಈ ವರ್ಣಕ್ರಿಯೆಯ ವೈಶಿಷ್ಟ್ಯ, ಸ್ವಾಭಾವಿಕವಾದ ಮುಖದ ಭಾಗವು ಒಂದಿಷ್ಟೂ ಕಾಣದಂತೆ ಬಣ್ಣಗಳಿಂದ ಮುಚ್ಚಬೇಕು. ಭರತನು ವರ್ಣಕ್ರಿಯೆಯಲ್ಲಿ (ವರ್ತನೆ) ಇದನ್ನೇ ಹೇಳುತ್ತಾನೆ.
ವರ್ತನಾಚ್ಛಾದಿತಂ ರೂಪಂ ಸ್ವವೇಷಪರಿವರ್ಜಿತಂ ।
ನಾಟ್ಯಧರ್ಮಪ್ರವೃತ್ತೇನ ಜೇಯಂ ತತ್ಪ್ರಕೃತಿಸ್ಥಿತಂ ।।
ಸ್ವವರ್ಣಮಾತ್ಮನಶ್ಚಾನ್ಯಂ ವರ್ಣಜೈರ್ವೇಷ ಸಂಶ್ರಯ್ಯೇ : ।
ಪ್ರಕೃತಿರ್ವಾಸ್ಯ ಕರ್ತವ್ಯಾ ತಸ್ಯ ಪ್ರಕೃತಿಮಾತಾ ।।
ವರ್ಣಕೈಶ್ಚೈವ ವೇಪೈಶ್ಚ ಬಾಧಿತಃ ಪುರುಷಸ್ತದ ।
ಪರಪ್ರಭಾವಂ ಕುರುತೇ ಯಸ್ಯ ವೇಷಸಮಾಶ್ರಯಂ ।।
ಭಾರತ ವರ್ಷದಲ್ಲಿ ವೇಷಗಳ ವರ್ಣಕ್ರಿಯೆಗೆ ವಿಶೇಷ ಕ್ರಮವನ್ನು ವಿಧಿಸಿದ್ದಾನೆ :
ಪುನಶ್ಚ ಭಾರತೇ ವರ್ಷೇ ತಾಂಸ್ತಾನ್ ವರ್ಣಾನ್ನಿಭೋಧತ ।
ರಾಜಾನಃ ಪಂಚವರ್ಣಾಃ ಸ್ಯುಃ ಶ್ಯಾಮೋ ಗೌರಸ್ತಥೈವಚ ।।
ಕೆಂಪು ಹಸುರು ಇನ್ನಿತರ ಮಿಶ್ರವರ್ಣಗಳು ಸೇರಿ ಐದು ಬಗೆಯ ಬಣ್ಣಗಳನ್ನು ರಾಜವೇಷಗಳಿಗೆ ಹೇಳಿರುತ್ತಾನೆ. ದೈತ್ಯ, ದಾನವ, ರಾಕ್ಷಸರುಗಳಿಗೆ ಹೇಳಿರುವ ವರ್ಣ ಕ್ರಿಯೆ ವೇಷಭೂಷಣಗಳು ಆಯಾ ಪಾತ್ರ ಸ್ವಭಾವಕ್ಕೆ ತಕ್ಕಂತೆ ನಮ್ಮ ಆಟದಲ್ಲಿರು ವಂತಹವೇ ಆಗಿವೆ. ನಮ್ಮಲ್ಲಿ ವರ್ಣಗಳನ್ನು ಮಿಶ್ರ ಮಾಡುವ ಕ್ರಮವೂ ನಾಟ್ಯ ಸ್ತ್ರೋ ಶಾಸ್ತ್ರೋಕ್ತವಾದುದೇ, (ರಕ ಪೀತಸಮಾಯೋಗಾದ್ಗೌರ ಇತ್ಯಭಿಧೀಯತೇ' ಇತ್ಯಾದಿ.) ಪಾತ್ರದ ಸ್ವಭಾವವು ಯಾವ ರಸಭಾವಾಧಿಷ್ಠಿತವಾಗಿದೆಯೋ ಆ ರಸಕ್ಕೆ ನಿರ್ದಿಷ್ಟವಾದ ವರ್ಣವೇ ಆ ವೇಷವನ್ನು ಚಿತ್ರಿಸುವ ಪ್ರಧಾನ ವರ್ಣವಾಗಿರುತ್ತದೆ.
ಶ್ಯಾಮೋ ಭವೇತ್ತು ಶೃಂಗಾರ: ಸಿತೋ ಹಾಸ್ಯ: ಪ್ರಕೀರ್ತಿತಃ ।
ಕಪೋತಃ ಕರುಣಶ್ಚೈವ ರಕ್ತೋ ರೌದ್ರಃ ಪ್ರಕೀರ್ತಿತಃ ।।
ಗೌರೋ ವೀರಸ್ತು ವಿಜ್ಞೆಯಾ: ಕೃಷ್ಣಶ್ಚಾಪಿ ಭಯಾನಕಃ ।
ನೀಲ ವರ್ಣಸ್ತು ಭೀಭತ್ಸ: ಪೀತಶ್ಚೈವಾದ್ಭುತಃ ಸ್ಮೃತಃ ।।
ಇವು ಪ್ರತ್ಯೇಕ ರಸಕ್ಕೆ ಭರತನು ಹೇಳಿದ ವರ್ಣಗಳು, ರಾಕ್ಷಸ ವೇಷಗಳ ಕುರಿತು, ಅವುಗಳನ್ನು ಸದಾ ರೌದ್ರ ರಸಾಧಿಷ್ಠಿತಗಳೆಂದೇ ರೂಪಿಸಬೇಕೆನ್ನುತ್ತಾನೆ. ಇತರ ರಸ ಸಂದರ್ಭವಿದ್ದರೂ ಅವುಗಳ ವೇಷವರ್ಣಗಳು ರೌದ್ರ ಸ್ವಭಾವದಲ್ಲೆ ಇರಬೇಕೆನ್ನುತ್ತಾನೆ.
..ವಕ್ಷಾಮಿ ದೈತ್ಯರಕ್ಷೋಗಣಾನ್ ಪ್ರತಿ
ಏಕ ಏವ ರಸಸ್ತೇಷಾಂ ಸ್ಥಾಯೀ ರೌದ್ರೋ ದ್ವಿಜೋತ್ತಮಾಃ ।।
ನೇಪಥ್ಯರೌದ್ರೋ ವಿಜ್ಞೆಯ ಸ್ತ್ವಂಗ ರೌದ್ರಸ್ತಥೈವ ಚ ।
ತಥಾ ಸ್ವಭಾವಜಶ್ವವ ತಿಸ್ರೋ ರೌದ್ರಃ ಪ್ರಕೀರ್ತಿತಃ ।।