ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

4

ಕೋಟಿ ಚೆನ್ನಯ

ಇದ್ದದ್ದು ಕಾಲಿಗೆ ಇಳಿಯಿತು; ಕಾಲಿನಲ್ಲಿ ಇದ್ದದ್ದು ಪಾದದಲ್ಲಿ ಆಯಿತು; ಪಾದದಲ್ಲಿ ಇದ್ದದ್ದು ಭೂಮಿಗೆ ಬಿತ್ತು. ಹೋದ ರುಚಿ ಇಲ್ಲದ ಹಸಿವೆ, ಬಾರದ ನಿದ್ದೆ - ಇವೆಲ್ಲಾ ತಿರಿಗಿ ಬಂತು. ಬಲ್ಲಾಳನು ಮೊದಲಿನ ಬಲ್ಲಾಳನಾದನು. ಅಂದಿನಿಂದ ಬಲ್ಲಾಳನಿಗೂ ಬೀಡಿನವರಿಗೂ ದೇಯಿ ಬೈದಿತಿಯ ಮೇಲೆ ಗೌರವವು ಹೆಚ್ಚಾಯಿತು, ಅದನ್ನು ಕಂಡು ಕೆಲವರ ಹೊಟ್ಟೆ ಸುಡಹತ್ತಿತು. ಹೀಗೆ ಹೊಟ್ಟೆಕಿಚ್ಚು ಪಡುವವರಲ್ಲಿ ಬಲ್ಲಾಳನಿಗೆ ಮಂತ್ರಿಯಾಗಿದ್ದ ಮಲ್ಲಯ ಬುದ್ದಿವಂತ ಎಂಬವನು ಒಬ್ಬನಾಗಿದ್ದನು.

ಇತ್ತ ಬಲ್ಲಾಳನಿಗೆ ಮೊದಲಿಗಿಂತ ಚೆನ್ನಾಗಿ ಮೈ ತುಂಬಿದ್ದನ್ನು ಕಂಡು, ಒಂದು ದಿನ ದೇಯಿ ಬೈದಿತಿಯು 'ಬಲ್ಲಾಳರೆ! ನಾನು ಮನೆಗೆ ಹೊರಡ ಬೇಕೆಂದಿದ್ದೇನೆ. 'ನನಗೆ ಏನಾದರೂ ಕೊಡುವುದು ಇದ್ದರೆ, ಅದಕ್ಕೆ ಅಪ್ಪಣೆಯಾಗಲಿ ಎಂದು ಕೈಮುಗಿದು ಬಿನ್ನಯಸಿದಳು,

"ನೀನು ಹೋಗತಕ್ಕದ್ದೆ! ಆದರೆ ಉಡುಗೊರೆ ಕೊಡಲಿಕ್ಕೆ ನಮ್ಮ ಮಲ್ಲಯ ಬುದ್ಧಿವಂತನು ಈಗ ಇಲ್ಲಿ ಇಲ್ಲವಷ್ಟೆ! ಅವನ ಕೂಡೆ ಒಂದು ಮಾತು ಕೇಳಬೇಕು ಎಂದು ಪೆರುಮಾಳು ಬಲ್ಲಾಳನು ಹುಬ್ಬುಗಳನ್ನು ಎತ್ತಿ ಹೇಳಿದನು.

"ಹಾಗೊ? ಅಳಿದ ಜೀವ ಉಳಿಸಿಕೊಡಲು ಆಗ ಇಲ್ಲದವರು ಈಗ ಮಾತ್ರ ಬೇಕೊ?” ಎಂದು ದೇಯಿಯು ಮರುಮಾತು ಕೊಟ್ಟು, ಬೀಡಿನ ಚಾವಡಿಯಿಂದ ಎದ್ದಳು.

ಅಷ್ಟರಲ್ಲಿ ಬೀಡಿನ ಯಜಮಾನಿ ಹೆಂಗಸು 'ಜೀವದಾನ ಮಾಡಿದ್ದಕ್ಕೆ ಯಾವ ಮಾನ ಮಾಡಿದರು? ಆಹಾ! ” ಎಂದು ತನ್ನೊಳಗೆ ಮಾತಾಡಿ ಕೊಂಡದ್ದನ್ನು ಬಲ್ಲಾಳನು ಕೇಳಿ, ಚಾವಡಿಗೆ ಬೆನ್ನು ಹಾಕಿ ಹೋಗುತಿದ್ದ ಆ ದೇಯಿಯನ್ನು ಮತ್ತೆ ಕರೆಯಿಸಿ ಇಕೊ ! ಈ ತಳಿಗೆಯನ್ನು ಹಿಡಿದುಕೊ” ಎಂದು ಹೇಳಿ, ವೀಳ್ಯದ ಹರಿವಾಣವನ್ನು ಅವಳ ಕೈಯಲ್ಲಿ ಕೊಟ್ಟು, ಅವ್ವಾ! ಈ ಎಣ್ಣೆ ಓಲೆ, ಎಸಳು ಬುಗುಡಿ, ಮುಳ್ಳಿನ ಕೊಪ್ಪು, ಪಚ್ಚೆಯ ಮೂಗುತಿ, ಇವೆಲ್ಲ ನಿನಗೆ; ಇನ್ನು ಕೊಡಲಿಕ್ಕೆ ಇರುವುದನ್ನು ನಿನ್ನ ಮುಂದಿನ ಮಕ್ಕಳಿಗೆ ಕೊಡುತ್ತೇನೆ' ಎಂದು ಸಂತಯಿಸಿದನು.