ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

8

ಕೋಟಿ ಚೆನ್ನಯ

ದಕ್ಕಾಗಿ ತನ್ನ ಮನೆಯಿಂದ ಹೊರಟು, ಊರ ಜೋಯಿಸನಿದ್ದಲ್ಲಿಗೆ ಹೋಗುತಿದ್ದನು. ಜೋಯಿಸನ ಮನೆಗೆ ಹೋಗಲು ಏರಜೆ ಬೈಲು ದಾಟಿ ಹೋಗಬೇಕಾಗಿತ್ತು. ಬುದ್ಧಿವಂತನು ಹೋಗುವುದನ್ನು ಕಂಡು, ಕೋಟಿಯು ತಮ್ಮ ಮನೆಯಿಂದ ಹೊರಕ್ಕೆ ಬಂದು-'ಅಯ್ಯಾ ! ನಮ್ಮ ಕಂಬುಳಕ್ಕೂ ಮುಹೂರ್ತ ಕೇಳಿಬಿಡಿ” ಎಂದು ಹೇಳಿ, ಜೋಯಿಸನ ದೇವರಿಗೆ ಕಾಣಿಕೆಯಾಗಿ ತೆಂಗಿನ ಕಾಯನ್ನು ಕೊಟ್ಟರು. ಮಲ್ಲಯನು ಹೂ೦ಕುಟ್ಟಿ ಮುಂದರಿಸಿ, ಅವನ ತಲೆಯು ತನ್ನ ಕಣ್ಣಿಗೆ ಮರೆಯಾದ ಕೂಡಲೆ ಆ ಹರಕೆಯ ತೆಂಗಿನಕಾಯನ್ನು ದಾರಿಕಲ್ಲಿಗೆ ಒಡೆದು, ನೀರು ಕುಡಿದ, ಕೊಬ್ಬರಿ ತಿಂದು, ಜೋಯಿಸನಿದ್ದಲ್ಲಿಗೆ ಹೋದನು; ಮರಳಿ ಬರುವಾಗ ನಮ್ಮ ಕಂಬುಳಕ್ಕೆ ಈ ಮಂಗಳವಾರ ಮುಹೂರ್ತ, ನಿಮ್ಮ ಕಂಬುಳಕ್ಕೆ ಮುಂದಿನ ಮಂಗಳವಾರ ಕೂಡಿಬರುತ್ತದಂತೆ” ಎಂದು ಸುಳ್ಳೇ ಹೇಳಿದನು. ಆದರೆ ಚೆನ್ನಯನಿಗೆ ಬುದ್ಧಿವಂತನ ಮಾತಿನಲ್ಲಿ ಸಂಶಯ ಬಾರದೆ ಹೋಗಲಿಲ್ಲ ಬುದ್ಧಿವಂತನ ಕಂಬುಳ ನಾಡದು ಮಂಗಳ ವಾರವಷ್ಟೆ ! ನಮಗೂ ಅದೇ ದಿನ ಕಂಬುಳ ಆಗಬೇಕು. ಬುದ್ಧಿವಂತನು ಗೋರುವ ದಿನವೇ ನಾವು ಗೋರಬೇಕು; ' ಅವನು ಬಿತ್ತುವ ದಿನವೇ ನಾವು ಬಿತ್ತಬೇಕು” ಎಂದು ಅವನು ಅಂತರಂಗದಲ್ಲಿ ನಿಶ್ಚಯಿಸಿಕೊಂಡು, ಅಟ್ಟದಲ್ಲಿದ್ದ ಬತ್ತದ ಬೀಜವನ್ನು ತೆಗೆದು, ನೀರಿನಲ್ಲಿ ನೆನೆಹಾಕಿ, ಮನೆ ಮನೆಗೆ ಹೋಗಿ 'ಕಂಬುಳಕ್ಕೆ ನಾಳೆ ಆಳುಬೇಕು, ಎತ್ತುಬೇಕು. ನಾಲ್ಕೆತ್ತು ಇದ್ದವರು ಎರಡೆತ್ತು ನಮ್ಮ ಗದ್ದೆಗೆ ಬಿಡಬೇಕು, ಎರಡೆತ್ತು ಬುದ್ದಿವಂತನ ಗದ್ದೆಗೆ ಬಿಡಬೇಕು, ಎರಡೆತ್ತು ಇದ್ದವರು ಮನಸ್ಸಿದ್ದರೆ ಎರಡನ್ನೂ ನಮ್ಮ ಗದ್ದೆಗೆ ಅಟ್ಟಬೇಕು, ಇಲ್ಲದಿದ್ದರೆ ಅವನ ಗದ್ದೆಗೆ ಅಟ್ಟಬೇಕು' ಎಂಬುದಾಗಿ ಸಾರಿದನು.

ಇದನ್ನು ಕೇಳಿ ಬುದ್ಧಿವಂತನು ಸ್ವಲ್ಪ ಬಿಸಿಯಾಗಿ, ನಿಮ್ಮ ಕಂಬುಳಕ್ಕೂ ನಾಳೆಯ ದಿನವೇ ಕೂಡಿಬಂತೇ ? ಇರಲಿ ! ನಮ್ಮ ಕಂಬುಳವು ನಾಳೆಯೇ ಆಗುವುದು. ಬೆಳ್ಳಿ ಮೂಡಿ ಬೆಳಕು ಹರಿಯುವಷ್ಟರಲ್ಲಿ, ನಿಮ್ಮ ಎತ್ತು ನಮ್ಮ ಗದ್ದೆಗೆ ಇಳಿಯಬೇಕು. ಮನೆಯ ಹೆಂಗಸರು ನೀರಿಗೆ ಬರುವಷ್ಟರಲ್ಲಿ ನಮ್ಮ ಗದ್ದೆಯಲ್ಲಿ ಎತ್ತು ಬಂದು ನಿಲ್ಲಬೇಕು?” ಎಂದು ಕಣ್ಣು ಕೆರಳಿಸಿ ಹೇಳಿ ತನ್ನ ಮನೆಗೆ ಹಿಂತಿರುಗಿದನು.