ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಡುಮಲೆಯ ಕಂಬಳ

9

ಇರುಳು ಕಳೆದು ಬೆಳಕು ಹರಿಯಿತು, ಕೋಟಿ ಚೆನ್ನಯರ ಗದ್ದೆಯ ಎರಡು ಸಾಲು ಉತ್ತಾಯಿತು; ಆದರೂ ಬುದ್ಧಿವಂತನ ಗದ್ದೆಗೆ ಎತ್ತುಗಳು ಇಳಿಯಲಿಲ್ಲ. ಗದ್ದೆಗೋರಿ ಆದ ತರುವಾಯ ಕೋಟಿ ಚೆನ್ನಯರು ಎರಡು ಜೋಡಿ ಎತ್ತನ್ನೂ ಎರಡು ಆಳುಗಳನ್ನೂ ಬುದ್ಧಿವಂತನಿಗೆ ಕಳುಹಿಸಿದರು.

ತನ್ನ ಗದ್ದೆಗಿಂತ ಬಿಲ್ಲವರ ಕಂಬುಳವು ಮೊದಲು ಗೋರಿ ಮುಗಿದದ್ದನ್ನು ಕಂಡು ಬುದ್ಧಿವಂತನು ಕಿಡಿಕಿಡಿಯಾದನು; ತನ್ನ ಗದ್ದೆಗೆ ಇಳಿದ ಅವರ ನಾಲ್ಕೆತ್ತುಗಳನ್ನು ಕಂಡು, ತಾನು ನಿಂತಿದ್ದ ಕಟ್ಟೆಯಿಂದ ಕೆಳಕ್ಕೆ ಹಾರಿ, ನೇಗಿಲು ಕಟ್ಟಿದ ಎತ್ತುಗಳನ್ನು ಹೊಡೆದು ಹೊಡೆದು ಓಡಿಸುತ್ತ, ತನ್ನ ಗದ್ದೆಯನ್ನು ಗೋರ ತೊಡಗಿದನು.

ಹೀಗೆ ಬುದ್ಧಿವಂತನು ಸಿಟ್ಟಿನಿಂದ ಎತ್ತುಗಳನ್ನು ಬಡಿಯುವುದನ್ನು ಕಂಡು ಕೋಟಿ ಚೆನ್ನಯರು “ಅಯ್ಯಾ ! ಹೆರವರ ಎತ್ತನ್ನು ಹೊಡೆಯುವುದು ಸರಿಯಲ್ಲ. ಏಟು ಎತ್ತಿನ ಬೆನ್ನಿಗೆ ನೋವು ಮಾತ್ರ ನನ್ನ ಎದೆಗೆ, ನಮ್ಮ ಮೇಲೆ ನಿಮಗೆ ಸೇಡು ಇದ್ದರೆ ನಮ್ಮ ಮೇಲೆ ತೀರಿಸ ಬೇಕೇ ಹೊರತು ಅದನ್ನು ಬಡ ಎತ್ತಿನ ಮೇಲೆ ತೋರಿಸ ಬೇಕೇ? ” ಎಂದು ಹಿಂಜರಿಯದೆ ಮಾತಾಡಿದರು, ಬುದ್ಧಿವಂತನ ಬಾಯಿಂದ ಉತ್ತರವಿಲ್ಲ; ಉಂಕಾರ ಮಾತ್ರ ಹೊರಟಿತು.

ಆ ದಿನದ ಕಂಬುಳದ ಗೌಜಿಯು ಹೇಗೂ ಮುಗಿಯಿತು. ಊಟ ಮಾಡುವವರಿಗೆ ಊಟ ಕೊಟ್ಟಿದ್ದಾಯಿತು; ಊಟ ಮಾಡದವರಿಗೆ ಎಳನೀರು ಹಂಚಿದ್ದಾಯಿತು; ಬಂದವರನ್ನು ಮರ್ಯಾದೆಯಿಂದ ಕಳುಹಿಸಿದ್ದಾಯಿತು. ತರುವಾಯ ಪೂರ್ವ ಪದ್ಧತಿಗೆ ಸರಿಯಾಗಿ ಗದ್ದೆಯಲ್ಲಿ ಬೀಜ ಬಿತ್ತುವ ಸಂಭ್ರಮವು ಪ್ರಾರಂಭವಾಯಿತು. ಬುದ್ದಿವಂತನ ಗದ್ದೆಯ ಬೀಜವನ್ನು ದಂಡಿಗೆಯಲ್ಲಿಯೂ, ಬಿಲ್ಲರ ಗದ್ದೆಯ ಬಿತ್ತವನ್ನು ಕುಕ್ಕೆಯಲ್ಲಿಯೂ ತಂದು, ಅದನ್ನು ಬಿತ್ತಿ ಬಾಳೆಯ ಪೂಕರೆಯನ್ನು ಹಾಕಿದರು.

ಬಿತ್ತಿದ ಗದ್ದೆಯಲ್ಲಿ ಅಗೆಯು ಅಂದವಾಗಬೇಕಾದರೆ ಬಿತ್ತಿದ ನಾಲ್ಕಾರು ದಿನಗಳೊಳಗೆ ಮೊದಲಿನ ಕೊಳೆ ನೀರು ಕಳೆದು, ತಿಳಿನೀರು ಬಿಡುವುದು ಕೆಲವು ಕಡೆ ವಾಡಿಕೆಯಾಗಿದೆ. ಅದಕ್ಕಾಗಿ ಕೋಟಿಯು ಏರಜೆಯಿಂದ ಹೊರಟು ಅನಿಲಜೆಗೆ ಬಂದನು. ಕೋಟಿಯ ಗದ್ದೆಯು ನೀರು ತುಂಬಿ