ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

10

ಕೋಟಿ ಚೆನ್ನಯ

ರಾಮಸಮುದ್ರದಂತೆ ಕಾಣುತಿತ್ತು; ಬುದ್ದಿವಂತನ ಗದ್ದೆಯಲ್ಲಿ ಚಿಟ್ಟೆಗೆ ಕುಡಿಯಲು ನೀರು ಇಲ್ಲದೆ, ಕೊಕ್ಕರೆ ಆಡುತಿತ್ತು. ಕೋಟಿಯು ನೆಟ್ಟಗೆ ಬುದ್ಧಿವಂತನ ಮನೆಗೆ ಹೋಗಿ, ತಲೆ ಹೊರೆಯನ್ನು ಕೆಳಗಿಟ್ಟು, ಬಗ್ಗಿ ಕೈ ಮುಗಿದನು. ಬುದ್ಧಿವಂತನು ಅವನನ್ನು ನೋಡಿದರೂ ನೋಡದಂತೆ ಮಾಡಿ, ಮೋರೆ ತಿರುಗಿಸಿ ಕುಳಿತುಕೊಂಡನು. ಕೋಟಿಯು ತಾನು ನಮಸ್ಕಾರ ಮಾಡಿದರೂ ಕಣ್ಣೆತ್ತಿ ನೋಡದ ಬುದ್ಧಿವಂತನಿಗೆ ಕೇಳಿಸುವಂತೆ “ ಅಯ್ಯಾ! ನಾನು ನಾಲ್ಕು ಸಾರಿ ನಿಮಗೆ ನಮಸ್ಕಾರ ಮಾಡಿದೆ. ನೀವು ಒಂದಕ್ಕಾದರೂ ಕೈ ಅಲ್ಲಾಡಿಸಲಿಲ್ಲ! ಇರಲಿ! ಕಾಡಿನ ಕಾಸರ್ಕನ ಮರಕ್ಕೆ ಅಡ್ಡ ಬಿದ್ದಿದ್ದರೆ ಹಣ್ಣೆಲೆ ಉದುರುತಿತ್ತು, ಚಿಗುರೆಲೆ ನಗುತಿತ್ತು' ಎಂದು ಹೇಳಿದನು. ಆದರೂ ಮಲ್ಲಯ ಬುದ್ದಿವಂತನು ಮಿಾಸೆ ತಿರುವುತ್ತ ಸುಮ್ಮನಿದ್ದನು.

ಕೋಟಿಯು “ಅಯ್ಯಾ! ನಮ್ಮ ಕಂಬಳವನ್ನು ಬಿತ್ತಿ ಮೂರು ದಿನ ನಮ್ಮ ಗದ್ದೆಯ ನೀರು ಬಿಡುವುದಕ್ಕೆ ಅಪ್ಪಣೆಯಾಗಬೇಕು” ಎಂದು ಹೇಳಿ, ಮತ್ತೊಮ್ಮೆ ಕೈಮುಗಿದನು.

ಮೇಲಿನ ಗದ್ದೆಯಿಂದ ಬಿಟ್ಟ ನೀರು ಕೆಳಗಿನ ಗದ್ದೆಗೆ ಇಳಿದು ತೋಡಿಗೆ ಹರಿಯುವಾಗ, ಕೆಳಗಿನ ಗದ್ದೆಯಲ್ಲಿದ್ದ ಬಿತ್ತವೂ ಅಗೆಯ ನೀರಿನೊಡನೆ ಕೊಚ್ಚಿಕೊಂಡು ಹೋಗುವುದೆಂದು ಬುದ್ಧಿವಂತನು ತಿಳಿದಿದ್ದರೂ ಆತನು ಕಣ್ಣಿದ್ದ ಕುರುಡನಂತೆಯೂ, ಕಿವಿಯಿದ್ದ ಕಿವುಡನಂತೆಯೂ, ಬಾಯಿದ್ದ ಮೂಕನಂತೆಯೂ ಸುಮ್ಮನಿದ್ದನು.

ಅವನ ಅಲಕ್ಷ್ಮಭಾವದ ಪರಿಯನ್ನು ನೋಡಿ ಕೋಟಿಯು “ನನ್ನ ನಮಸಾರಗಳು ನಿಮ್ಮ ಗುರುಹಿರಿಯರಿಗೆ ಇರಲಿ” ಎಂದು ಹೇಳಿ, ಅಲ್ಲಿಂದ ತಟ್ಟನೆ ಇಳಿದು, ತನ್ನ ಗದ್ದೆಯ ಹತ್ತಿರ ಬಂದನು, ಗದ್ದೆಯು ನೀರು ತುಂಬಿ ಕೆರೆಯಾಗಿತ್ತು. ಕೋಟಿಯು ಒಂದು ಗುದ್ದಲಿಯನ್ನು ತನ್ನ ಹೊರೆಯಿಂದ ಈಚೆಗೆ ತೆಗೆದು, ಗದ್ದೆಯ ತೆವರಿಯನ್ನು ಒಂದು ಕಡೆ ಕಡಿದುಬಿಟ್ಟನು. ಮೇಲಿನ ಗದ್ದೆಯ ನೀರೆಲ್ಲಾ ನೆರೆಯ ನೀರಿನಂತೆ ಕೆಳಗಿನ ಗದ್ದೆಗೆ ಹರಿಯಿತು. ಜೋಯೆಂದು ಧುಮುಕುವ ಗದ್ದೆ ನೀರಿನ ಜೋಗನ್ನು ಕಂಡು, ಮಲ್ಲಯ ಬುದ್ಧಿವಂತನು ತನ್ನ ಆಳುಗಳನ್ನು ಕೂಗಿ ಕರೆದು, ಹುಲ್ಲು ಸೊಪ್ಪನ್ನು