ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊಲೆ

13

ಇತ್ತ ಬುದ್ಧಿವಂತನ ಕೈಹಿಡಿದವಳು ನೆಟ್ಟಗೆ ಪಡುಮಲೆ ಬೀಡಿಗೆ ಹೋಗಿ, ಬಲ್ಲಾಳನ ಕಾಲಡಿಯಲ್ಲಿ ಬಿದ್ದು ಮೂಗಿನ ಮೂಗುತಿ ಕತ್ತಿನ ಕರಿಮಣಿ, ಕಿವಿಯ ಓಲೆ, ಕೈಯ ಬಳೆಗಳನ್ನು ಆತನ ಪಾದದಲ್ಲಿ ಇಟ್ಟು, ತನ್ನ ದುಃಖವನ್ನೂ ದುರ್ದಶೆಯನ್ನೂ ಹೇಳಿಕೊಂಡಳು. ಬಲ್ಲಾಳನು ಕೊಂದವರಿಗೆ ಕೊಲೆ ತಪ್ಪಲಿಕ್ಕಿಲ್ಲ” ಎಂದು ಆಕೆಗೆ ಸಮಾಧಾನ ಹೇಳಿ, ಮನೆಗೆ ಕಳುಹಿಸಿ ಕೊಟ್ಟು, ಕೋಟಿ ಚೆನ್ನಯರನ್ನು ಕರೆತರುವುದಕ್ಕೆ ತತ್ ಕ್ಷಣವೇ ಆಳನ್ನು ಅಟ್ಟಿದನು. ನರಹತ್ಯದ ಸುದ್ದಿಯಿಂದ ಬೀಡಿನವರು ಸಂಭ್ರಾಂತರಾದರು; ಹಳ್ಳಿಯವರು ಭಯಭೀತರಾದರು.

ಕೋಟಿ ಚೆನ್ನಯರು ಮನೆಗೆ ಮುಟ್ಟುವ ಮುಂಚೆಯೇ ಅವರು ಮಾಡಿದ ಘಾತುಕ ಕೃತ್ಯ ಅದನ್ನು ಕುರಿತು ವಿಧವೆಯು ಕೊಟ್ಟ ದುಃಖದ ದೂರು, ದೂರನ್ನು ಕೇಳಿ ಬಲ್ಲಾಳನಿಗಾದ ಕರಿಕರಿ ಕೋಪ, ಇವುಗಳ ಸುದ್ದಿಯೆಲ್ಲಾ ಅವರ ಸಾಕಣೆ ತಾಯಿಯಾದ ಸಾಯಿನ ಬೈದಿತಿಯ ಕಿವಿಗೆ ಬಿದ್ದು, ಅವಳು ಕಳವಳಗೊಳ್ಳುತಿದ್ದಳು, ಅಷ್ಟರಲ್ಲಿ ಇವರಿಬ್ಬರು ಮನೆಗೆ ಬಂದರು,

ಅವರನ್ನು ಕಾಣುತ್ತಲೆ ಸಾಯನ ಬೈದಿತಿಯು ಕೋಟಿ! ಏನಾಯಿತು? ಚೆನ್ನಯ! ಏನು ಮಾಡಿದಿ? ನಮಗೆ ಕೆಡುಗಾಲ ಬಂತಲ್ಲಾ!” ಎಂದು ಸಿಡಿಮಿಡಿಗೊಂಡು ಕೇಳಿದಳು.

ಆಗ ಕೋಟಿಯು “ಅಮ್ಮಾ! ಬುದ್ದಿವಂತನ ಬಾಯಿಂದ ಹದ ತಪ್ಪಿ ಮಾತು ಬಂತು. ಚೆನ್ನಯನ ಕೈಯಿಂದ ಹದ್ದು ಮೀರಿ ಏಟು ಬಿತ್ತು. ಬುದ್ಧಿವಂತನ ಹಾಳು ಒಗಟುತನಕ್ಕೂ ಚೆನ್ನಯನ ಹರೆಯದ ಅವಿವೇಕಕ್ಕೂ ಸರಿಹೋಯಿತು' ಎಂದು ಹೇಳಿ ತಲೆ ತಗ್ಗಿಸಿ ಸಿಂತನು.

ಸಾಯನ ಬೈದಿತಿಯು “ಮಕ್ಕಳೇ! ನೀವು ಮಾಡಿದ ಮಾಟಕ್ಕೆ ಬಲ್ಲಾಳನು ನಿಮ್ಮಾಟ ಆಡಿಸುತ್ತಾನಂತೆ, ನಿಮ್ಮನ್ನು ಬೆಟ್ಟದಿಂದ ಬೀಳಿಸುತ್ತಾನೊ? ಮಡುವಿನಲ್ಲಿ ಮುಳುಗಿಸುತ್ತಾನೊ? ಆನೆಯಿಂದ ತುಳಿಸುತ್ತಾನೊ? ಕುದುರೆಯಿಂದ ಓಡಿಸುತ್ತಾನೊ? ಏನು ಮಾಡುತ್ತಾನೆಂದು ಯಾರು ಬಲ್ಲರು, ದೇವರೇ!” ಎಂದು ಬಾಯಿಬಿಟ್ಟು ಅಳಹತ್ತಿದಳು.