ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರೆಯ ಇಲಿ ಹುಲಿಯಂತಾಯಿತು

15

ಅಡ್ಕವನ್ನು ಅಡರಿ, ಹೊಡೆಯಲ್ಲಿ ಹೋಗಿ, ಹೊಳೆಯನ್ನು ಹಾಯ್ದು, ಕೋಟೆಯ ಆನೆಬಾಗಿಲನ್ನು ಹತ್ತಿ, ರಾಜಾಂಗಣಕ್ಕೆ ಬಂದು, ಚಾವಡಿಯನ್ನು ಬಿಟ್ಟು, ಪಡುವಣ ಪಟ್ಟ ಸಾಲೆಗೆ ಹೋಗಿ, ಬೆಳ್ಳಿಯ ಕಲಶದ ಬಿಳಿಯ ಉಪ್ಪರಿಗೆಯನ್ನು ಏರಿದರು. ಅವರು ರಾಜಾಂಗಣದಲ್ಲಿ ಬಂದಾಗಲೇ ಪಡುಮಲೆಯ ಪೆರುಮಾಳು ಬಲ್ಲಾಳನು ಉಪ್ಪರಿಗೆಯ ಕಿಟಕಿ ಬಾಗಿಲಿನಿಂದ ಇಣಿಕಿ ನೋಡಿ ಓಹೋ! ಅರೆಯಲ್ಲಿ ಹುಟ್ಟಿ ಇಲಿಯಂತೆ ಇದ್ದ ಮಕ್ಕಳು ಈಗ ಹುಲಿಯಂತಾದರು ಎಂದು ತನ್ನೊಳಗೆ ತಿಳಿದುಕೊಂಡು, ಅವರ ವಿಚಾರಣೆ ನಡಿಸುವುದಕ್ಕೆ ಓಲಗವನ್ನು ಕೊಡುವಂಥವನಾದನು.

ಕೋಟಿ ಚೆನ್ನಯರು ಒಳಕ್ಕೆ ಬಂದು, ಕುರ್ಚಿಯಂತಿದ್ದ ಒಂದು ಅರಸುಮಣೆಯ ಮೇಲೆ ಕುಳಿತುಕೊಂಡು ಓಲಗವನ್ನು ಕೊಡುತಿದ್ದ ಪಡುಮಲೆ ಬಲ್ಲಾಳನಿಗೆ ಅಡ್ಡ ಬಿದ್ದು ನಮಸ್ಕಾರ ಮಾಡಿದರು.

ಬಲ್ಲಾಳನು ಮಾಡಬಾರದ್ದನ್ನು ಮಾಡಿದಿರಿ! ಆಗ ಬಾರದ್ದು ಆಗಬೇಕಷ್ಟೆ' ಎಂದು ಪ್ರಾರಂಭಿಸಿದನು.

ಆಗ ಕೋಟಿಯು ತನಗೆ ಸಾಯನ ಬೈದಿತಿಯು ಕಿವಿಯಲ್ಲಿ ಹೇಳಿದ ಮಾತನ್ನು ನೆನಸಿಕೊಂಡು “ಬುದ್ದೀ! ನಮ್ಮ ತಾಯಿಗೆ ತಾವು ಕೊಟ್ಟ ಮಾತುಂಟಷ್ಟೆ” ಎಂದನು,

“ಯಾವ ಮಾತು?” ಎಂದು ಬಲ್ಲಾಳನು ಕೇಳಿದನು.

“ಬುದ್ದಿ, ಈ ಒಡವೆ ವಸ್ತುಗಳೆಲ್ಲಾ ನಿನಗೆ, ಇನ್ನು ಕೊಡಲಿಕ್ಕೆ ಇರುವುದನ್ನು ಮುಂದೆ ನಿನ್ನ ಮಕ್ಕಳಿಗೆ ಕೊಡುತ್ತೇನೆ” ಎಂದು ತಾವು ನಮ್ಮ ತಾಯಿಗೆ ಮಾತು ಕೊಡಲಿಲ್ಲವೇ? ಎಂದು ಕೋಟಿಯು ಕೇಳಿದನು.

ಬಲ್ಲಾಳ- ಕೋಟಿ, ನಿನ್ನ ತಾಯಿಗೆ ನಾವು ಆಗ ಕೊಟ್ಟ ಮಾತಿಗೂ ನೀವು ಈಗ ಮಾಡಿದ ತಪ್ಪಿಗೂ ಏನೂ ಸಂಬಂಧವಿಲ್ಲ.”

ಕೋಟಿ-ಬುದ್ದಿ, ನಾವು ಆಳು ಕೊಂದದ್ದಕ್ಕೆ ನಮಗೆ ಆಗುವುದು ಆಗಲಿ! ಆದರೆ ನೀವು ಮಾತು ಕೊಟ್ಟಿದ್ದಕ್ಕೆ ನಮಗೆ ದೊರೆಯುವುದು ದೊರೆಯಲಿ!"