ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸುಂಕದ ದೇರೆ

21

ಆ ಅರವಟ್ಟಿಗೆ ಕಟ್ಟೆ ಎಲ್ಲಿತ್ತೊ ಅಲ್ಲಿಂದ ಹಡುಮಲೆ ಬಲ್ಲಾಳನ ಸೀಮೆಯ ಗಡಿಕಲ್ಲಿಗೆ ಬಹಳ ದೂರವಿರಲಿಲ್ಲ; ತಕ್ಕಷ್ಟು ಎತ್ತರದ ಒಂದು ಗುಡ್ಡವು ಮಾತ್ರ ಮಧ್ಯದಲ್ಲಿ ಇತ್ತು, ಕೋಟಿಚೆನ್ನಯರು ಆ ಗುಡ್ಡವನ್ನು ಏರಿ, ಅಡ್ಡಹಾದಿಯಿಂದ ಹೋಗುತಿದ್ದಾಗ, ಚೆನ್ನಯನು “ಇದೇನು ಆಶ್ಚರ್ಯ! ಅಣ್ಣಾ, ಮೂಡು ದಿಕ್ಕಿನಲ್ಲಿ ದೇವರು ಮುಳುಗುತ್ತಾರೋ” ಎಂದು ವಿಚಾರಿಸಿದನು.

ಕೋಟಿಯು ಮೋರೆ ತಿರುಗಿಸಿ, ಕೊಂಬಳತೆಯ ದೂರದಲ್ಲಿ ಕಾಣುವ ಕೆಂಬಣ್ಣವನ್ನು ಕಂಡು “ತಮ್ಮಾ, ಸರಿ- ಅಲ್ಲಿಯೇ ನಮ್ಮ ಮನೆಯಲ್ಲವೇ ? ಹೌದು-ಇದು ಹೊತ್ತು ಮುಳುಗುವ ಬಣ್ಣ ವಲ್ಲ. ನಮ್ಮ ಮನೆ ಹೊತ್ತಿ ಮೇಲೆ ಹಾರುವ ಬೆಂಕಿಯ ನಾಲಗೆ” ಎಂದನು,

ಚೆನ್ನಯನು “ಅಣ್ಣಾ, ಜೋಯಿಸರು ಮೂಡುಗಡೆಯಿಂದ ಕಿಚ್ಚಿನ ಅಪಾಯವುಂಟೆಂದು ಕಣಿಹೇಳಿದ್ದು ನಿಜವಾಯಿತು. ಅಯ್ಯೋ ! ಮನೆಯವರು ಏನಾದರೋ?” ಎಂದು ನಿಟ್ಟುಸಿರು ಬಿಡಹತ್ತಿದನು.

ಕೋಟಿಯು ಅವರು ಮೊನ್ನೆಯೇ ಮನೆಬಿಟ್ಟು ಹೋಗಿರಬಹುದು. ದೇವರ ಮನಸ್ಸಿನಲ್ಲಿದ್ದರೆ, ನಾವು ತಾಯಿಯನ್ನು ಇನ್ನೊಮ್ಮೆ ನೋಡುವೆವು” ಎಂದು ಸಂತಯಿಸುತ್ತ ಮುಂದರಿಸಿದನು. ಅವರಿಗೆ ಸೀಮೆಯ ಗಡಿಕಲ್ಲಿನ ಹತ್ತಿರ ಎರಡು ಗಳಿಗೆ ಇರುಳು ಆಯಿತು, ಗಡಿಕಲ್ಲಿನಿಂದ ಒಂದು ಮಾರು ಈಚೆಗೆ ಸುಂಕದ ಕಟ್ಟೆ ಇತ್ತು, ಸುಂಕದ ದೇರೆ ಎಂಬವನು ಇವರ ಕಾಲಿನ ಸದ್ದನ್ನು ಕೇಳಿ ಕತ್ತಲಲ್ಲಿ ಯಾರದು ಹೋಗುವುದು?” ಎಂದು ವಿಚಾರಿಸಿದನು.

“ನಾವು ದಾರಿಹೋಕರು” ಎಂದು ಕೋಟಿಯು ಉತ್ತರಕೊಟ್ಟನು.

“ಯಾರೇ ಆಗಲಿ, ದಾರಿಸುಂಕ ಕೊಟ್ಟು ಹೋಗಿ” ಎಂದು ದೇರೆಯು ಇದ್ದಲ್ಲಿಂದ ಕದಲದೆ ಹೇಳಿದನು.

ಕೋಟಿ-“ಯಾವ ಸುಂಕವೊ? ನಮ್ಮ ಮೈ ಬೆವರಿನ ಉಪ್ಪಿನ ಸುಂಕವೊ ? ಬಾಯಿ ವೀಳ್ಯದ ಸುಣ್ಣದ ಸುಂಕವೊ ?”

ಚೆನ್ನಯ- “ತಲೆಯ ಮೇಲಿನ ಕೂದಲು ಸುಂಕವೊ? ಕಾಲಿಗಿದ್ದ ಎಕ್ಕಡದ ಸುಂಕವೊ?” ಆಗ ದೇರೆಯು ಹೊರಕ್ಕೆ ತಲೆ ಹಾಕಿ, “ನಿಮ್ಮಕೈಯಲ್ಲಿದ್ದ ಉಕ್ಕಿನ ಕತ್ತಿಯ ಸುಂಕ" ಎಂದನು.