ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨ ನೆ ಯ ಭಾ ಗ .


ಪಂಜದಲ್ಲಿ

ಪಡುಮಲೆ ಸೀಮೆಗೆ ಒಬ್ಬ ಬಲ್ಲಾಳನಿದ್ದಂತೆಯೇ ಪಂಜ ಸೀಮೆಗೂ ಒಬ್ಬ ಬಲ್ಲಾಳನಿದ್ದನು. ಇವನ ಹೆಸರು ಕೇಮರ ಬಲ್ಲಾಳ. ಇವನ ಬೀಡು ಪಂಜದಲ್ಲಿತ್ತು; ಪಂಜವು ಆ ಕಾಲದಲ್ಲಿ ದೊಡ್ಡ ಊರಾಗಿತ್ತು.

ಪಂಜದಲ್ಲಿ ಒಂದು ಮನೆ, ಮಾಳಿಗೆಯ ಮನೆ, ಎದುರು ಸಣ್ಣದೊಂದು ಚಪ್ಪರ, ಬಲಗಡೆ ಪದ್ಮಕಟ್ಟೆಯುಳ್ಳ ತೆಂಗಿನಮರ, ಎಡಗಡೆ ಏತಹಾಕಿದ ಬಾವಿ, ಹಿಂದುಗಡೆ ಜೋಡು ಹಟ್ಟಿ ಗಳು, ಅದರ ಮಗ್ಗುಲಲ್ಲಿ ಕೋಳಿಯ ಗೂಡು. ಕೋಟಿ ಚೆನ್ನಯರು ಈ ಮನೆಯ ಮುಂದಿನ ಅಡ್ಡಗಟ್ಟಿದ ಗುಜ್ಜು ತಡಮೆಯನ್ನು ದಾಟಿ, ಬೇಲಿಯೊಳಕ್ಕೆ ನಿಂತು “ ಪಯ್ಯ, ಪಯ್ಯ” ಎಂದು ಕರೆದರು.

ಒಳಗಿನಿಂದ ಯಾರೂ ಓ ಎನ್ನಲಿಲ್ಲ. ಚೆನ್ನಯನು ಓ ಪಯ್ಯ! ಪಯ್ಯ, ಇಲ್ಲವೆ ?” ಎಂದು ಗಟ್ಟಿಯಾಗಿ ಕೂಗಿದನು.

“ಯಾರದು ಕರೆಯುವುದು? » ಎಂಬುದಾಗಿ ಹೆಂಗಸಿನ ಸ್ವರವೊಂದು ಕೇಳಿಸಿತು.

ಕೋಟಿಯು- “ಯಾರೂ ಇಲ್ಲ; ನಾವು ಹಾದಿ ಪಯಣದ ಮಂದಿ. ಪಯ್ಯಬೈದ್ಯ ಇದ್ದಾನೋ? ”

ಉತ್ತರ- 'ಅವರಿಲ್ಲ.”

ಪ್ರಶ್ನೆ – “ಎಲ್ಲಿ ಹೋಗಿದ್ದಾನೆ?”

ಉತ್ತರ- “ಬೈನಿ ಕಟ್ಟಲಿಕ್ಕೆ ಸಂಕಮಲೆಗೆ ಹೋಗಿದ್ದಾರೆ.”

ಪ್ರಶ್ನೆ- “ಯಾವಾಗ ಬಂದಾನು?”

ಉತ್ತರ- ಬೆಳಗ್ಗೆ ಹೋದರೆ, ಮಧ್ಯಾಹ್ನ ಬರುವರು. ಮಧ್ಯಾಹ್ನ ಹೋದರೆ, ಸಂಜೆಗೆ ಬರುವರು.”

ಪ್ರಶ್ನೆ – “ಬರಲಿಕ್ಕೆ ಹೊತ್ತು ಆಗಲಿಲ್ಲವೇ ?