ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಿನ್ನಿದಾರು

27

ಹೆಂಗಸು- ಅನಂತರದ ಸಂಗತಿ ನನಗೆ ಬೇಡವಾಯಿತು. ಬಿತ್ತಿದ ಗದ್ದೆಗೆ ತೆವರಿ ಗಟ್ಟಿ ಇರಬೇಕು; ಹುಟ್ಟಿದ ಹೆಣ್ಣಿಗೆ ತವರು ಗಟ್ಟಿ ಇರಬೇಕು. ತಾಯಿ ಹೋದ ಮೇಲೆ ತವರಿಗೆ ಹೋಗಲಿಲ್ಲ, ತಮ್ಮಂದಿರನ್ನು ಕಾಣಲಿಲ್ಲ, ಊರವರು ಮಾತ್ರ ಅವರ ಪ್ರತಾಪವನ್ನು ಹೊಗಳುತ್ತಾರೆ. ನೀರಿಂದ ಹುಟ್ಟಿದ ಬೆಂಕಿಯಂತೆ, ನೆಲದಿಂದ ಬಂದ ಸಿಡಿಲಂತೆ-

ಚೆನ್ನಯ – “ಅಕ್ಕಾ, ನಿನ್ನ ಹೆಸರು?

ಹೆಂಗಸು-ನನ್ನ ಹೆಸರು ಕಿನ್ನಿದಾರು.?

ಕೂಡಲೆ ಕೋಟಿ ಚೆನ್ನಯರು ತಟ್ಟನೆ ಎದ್ದು “ ಅಕ್ಕ ಎಂದರೆ ನೀನೇ ಸೈ: ತಮ್ಮ ಎಂದರೆ ನಾನೇ ಸೈ; ಎಂದು ಬಾಯಿಂದ ಹೇಳುತ್ತ, ಇಬ್ಬರು ಅವಳ ಪಾದದ ಮೇಲೆ ತಲೆಯಿಟ್ಟು ಅಡ್ಡಬಿದ್ದರು. ಆಗ ಗೋಡೆಯ ಹಿಂದುಗಡೆ ಅದುವರೆಗೆ ಅವಿತುಕೊಂಡಿದ್ದ ಆಕೆಯ ಗಂಡನು ಈಚೆಗೆ ಬಂದು, “ಏಳಿ, ಏಳಿ” ಎಂದು ಹೇಳಿ, ಅವರನ್ನು ಬಲಗೈಯಿಂದ ಎತ್ತಿ, ಮೊಗಸಾಲೆಯ ತೂಗುಯ್ಯಾಲೆಯ ಮೇಲೆ ಕುಳ್ಳಿರಿಸಿದನು; ಕಿನ್ನಿದಾರು ಹಸುವನ್ನು ಕರೆದು, ಹಾಲನ್ನು ಕಾಯಿಸಿ ತಂದು ಅವರನ್ನು ಆದರಿಸಿದಳು. ಆ ದಿನ ಅಕ್ಕನ ಮನೆಯ ಅಕ್ಕಿಯ ಬಿಳಿಯನ್ನವೇನು, ಬೆಲ್ಲದ ಪಾಯಸವೇನು, ಹಲಸಿನ ಸುಟ್ಟವೆಯೇನು, ತುಪ್ಪದ ಒಗ್ಗರಣೆಯೇನು, ಬೆಣ್ಣೆಯ ಮೊಸರೇನು, ಉಪ್ಪಿನ ಕಾಯಿಯೇನು, ಒಟ್ಟೇನು? ಅಡಿಗೆ ಆರೋಗಣೆಗಳು ಹಸಿಯದ ಹೊಟ್ಟೆಗೆ ಹಸಿವೆಯನ್ನು ಉಂಟುಮಾಡಿದುವು.

ಈ ಪ್ರಕಾರವಾಗಿ ಕೋಟಿಚೆನ್ನಯರು ಪಂಜದಲ್ಲಿಯ ತಮ್ಮ ಅಕ್ಕನ ಮನೆಯಲ್ಲಿ ಸುಖವಾಗಿ ಕಾಲ ಕಳೆಯುತ್ತಿರಲು, ಆ ಸುದ್ದಿಯು ಪಂಜದ ಊರಲೆಲ್ಲಾ ಮೆಲ್ಲ ಮೆಲ್ಲನೆ ಹರಡಿತು, ಅನೇಕರು ಬೈದ್ಯನ ಮನೆಗೆ ಹೋಗಿ, ಇವರ ಗಂಡು ಸಿರಿಯ ಮುಖ, ಅಗಲದ ಎದೆ, ಸಣಕಲು ಮೈ, ಚಳಕದ ಕೈ ನೋಡಿಕೊಂಡು, ತಮ್ಮಲ್ಲಿಯೇ ಬೆರಗುಗೊಂಡು ಹಿಂದೆರಳುತ್ತಿದ್ದರು. ಮೊತ್ತಮೊದಲು ಕೋಟಿಚೆನ್ನಯರು ಹೊರಗೆ ಮೋರೆ ಹಾಕಲಿಕ್ಕೆ ಮನಸ್ಸಿಲ್ಲದೆ ಜನಗಳು ಆಗಾಗ ತಮ್ಮನ್ನು ಮನೆಗೆ ಬಂದು ನೋಡಿದಷ್ಟಕ್ಕೆ ಒಬ್ಬಿಬ್ಬರ ಹತ್ತಿರ ಸಲುಗೆಯಿಂದ ವರ್ತಿಸುತ್ತ, ಕ್ರಮೇಣ ಊರಲ್ಲಿ ತಲೆಯೆತ್ತಿ ನಡೆಯ ತೊಡಗಿದರು. ಈ