ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

38

ಕೋಟಿ ಚೆನ್ನಯ

ಇಕ್ಕಡೆಯ ಬಾಗಿಲುಗಳು ಮುಚ್ಚಿ ಬಿಟ್ಟಿದ್ದ ಮೇಲ್ಮಾಳಿಗೆಯಲ್ಲಿ ಕೋಟಿ ಚೆನ್ನಯರು ಚಾಪೆಯೊಳಗೆ ಹಿಡಿದಿದ್ದ ಹಾವಿನಂತೆ ಬುಸುಗುಟ್ಟುತ್ತ “ಅಯ್ಯೋ ! ವಿಧಿಯೇ ! ಇದು ಪಡುಮಲೆಯವರ ಹಗೆಯೇ ? ಕೇಮರನ ಮೋಸವೇ ? ನಮ್ಮ ಗ್ರಹಚಾರವೇ ? ಹೀಗೆ ಮಳೆಗಾಲದಲ್ಲಿ ಮೋಡದ ಮೇಲೆ ಮೋಡವು ಕವಿಯುವಂತೆ ನಮ್ಮ ಮೇಲೆ ಆಪತ್ತಿನ ಮೇಲೆ ಆಪತ್ತು ಬರುತ್ತದಲ್ಲಾ! ನಮಗೆ ಸಾಯುವ ಕಾಲವು ಬಂತೇ ? ಇದ್ದಾಗ ನಾವು ಓಲಗದ ಬಂಟರು; ಸತ್ತರೆ ವೈಕುಂಠದ ಬಂಟರು ನಾವು ಒಟ್ಟಿಗೆ ಹುಟ್ಟಿದೆವು, ಒಟ್ಟಿಗೆ ಬೆಳೆದೆವು. ಇನ್ನು ಒಟ್ಟಿಗೆ ಏಕೆ ಸಾಯಬಾರದು ?" ಎಂದು ನಾನಾ ಪ್ರಕಾರವಾಗಿ ಮರುಗುತಿದ್ದರು.

ನಡು ಇರುಳು ದಾಟಿ ಹೋಗಿ, ಚಂದ್ರನು ಅಸ್ತಮಿಸುವುದಕ್ಕಾದರೂ ಇಬ್ಬರು ಮುಂದೇನು ಗತಿ ಎಂದು ತಮ್ಮೊಳಗೆ ವಿಚಾರಿಸುತ್ತ, ಕಣ್ಣಿಗೆ ನಿದ್ದೆ ಬಾರದೆ ಕುಳಿತುಕೊಂಡಿದ್ದರು. ಮುಳುಗುವ ಚಂದ್ರನು ಆ ಮಾಳಿಗೆಯ ಒಂದು ಸಣ್ಣ ಕಿಟಿಕಿಯೊಳಗಿನಿಂದ ಈ ಇಬ್ಬರನ್ನು ಇಣಿಕಿ ನೋಡಿ ಕೆಳಕ್ಕೆ ಇಳಿದನು, ಆಗ ಚೆನ್ನಯನು ಅಣ್ಣಾ, ನನ್ನನ್ನು ಒಂದು ನಿಮಿಷ ನಿನ್ನ ಹೆಗಲ ಮೇಲೆ ಹೊತ್ತುಕೊಳ್ಳುವೆಯಾ? ನಾವು ಇಲ್ಲಿಂದ ತಪ್ಪಿಸಿಕೊಳ್ಳಬಹುದು” ಎಂದನು.

ಕೋಟಿಯು ತಮ್ಮನನ್ನು ಹೆಗಲ ಮೇಲೆ ಹಿಡಿದುಕೊಂಡು ಎದ್ದು ನಿಂತನು; ಹೆಗಲ ಮೇಲೆ ನಿಂತಿದ್ದ ಚೆನ್ನಯಸ ಕೈಗಳಿಗೆ ಆ ಚಿಕ್ಕ ಕಿಟಿಕಿಯು ಎಟಕಿತು. ಕೂಡಲೆ ಆ ಕಿಟಿಕಿಯು ಅವನ ಬಲವಾದ ಕೈಗಳಿಂದ ಕುಲುಕಿದಂತಾಗಿ, ಗೋಡೆಯಿಂದ ಎಬ್ಬಿಸಲ್ಪಟ್ಟು, ಕಿಟಿಕಿ ಇದ್ದೆಡೆಯಲ್ಲಿ ಒಂದು ಬಿರುಕು ಕಾಣಿಸಿತು. ತರುವಾಯ ಅಣ್ಣ ತಮ್ಮಂದಿರು ತಮ್ಮ ನಡುವಿಗೆ ಬಿಗಿದುಕೊಂಡಿದ್ದ ದಟ್ಟಿಗಳನ್ನು ಬಿಚ್ಚಿ, ಅವೆರಡನ್ನು ಉದ್ದದ ಒಂದೇ ದಟ್ಟಿಯಾಗುವಂತೆ ಗಂಟಿಕ್ಕಿ, ಅದನ್ನು ಇಕ್ಕಡೆಗಳಿಂದ ಚೆನ್ನಾಗಿ ಎಳೆದು ನೋಡಿ ಪರೀಕ್ಷಿಸಿದರು. ಈ ಉದ್ದದ ದಟ್ಟಿಯ ಒಂದು ತುದಿ ಯನ್ನು ಚೆನ್ನಯನು ಕೈಯಲ್ಲಿ ಹಿಡಿದುಕೊಂಡನು, ದಟ್ಟಿಯ ಬಹು ಭಾಗವನ್ನು ಕೋಟೆಯು ನೆರಿಗೆನೆರಿಗೆಯಾಗಿ ಕಟ್ಟಿಕೊಂಡನು. ಈಗ ತಮ್ಮನು ಅಣ್ಣನ ಹೆಗಲನ್ನು ಮತ್ತೊಮ್ಮೆ ಏರಿ, ಗೋಡೆಯಲ್ಲಿದ್ದ ಆ ಬಿರುಕಿನಿಂದ