ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಂಜದಿಂದ ಪಲಾಯನ

39

ಮೈಯನ್ನು ತೂರಿಸಿಕೊಂಡು, ದಟ್ಟಿಯ ತುದಿಯನ್ನು ಬಿಡದೆ ಹೊರಕ್ಕೆ ಬಂದನು. ಒಳಗಿನಿಂದ ಕೋಟಿಯು ದಟ್ಟಿಯ ಭಾಗವನ್ನು ಬಿಡುವಷ್ಟಕ್ಕೆ ಚೆನ್ನಯನು ತನ್ನ ಕಾಲುಗಳನ್ನು ಒಂದೊಂದಾಗಿ ಗೋಡೆಗೆ ಆನಿಸಿಕೊಂಡು ಆ ದಟ್ಟಿ ಹಿಡಿದು ಮಾಡುತ್ತ ಮಾಟುತ್ತ ಕೆಳಕ್ಕೆ ಇಳಿದನು, ಈಗ ಚೆನ್ನಯನು ಅದನ್ನು ಕೆಳಗಿನಿಂದ ಎಳೆಯುವಷ್ಟಕ್ಕೆ ಒಳಗಿದ್ದ ಕೋಟಿಯು ಅದನ್ನು ಸೆಳೆದು ಸೆಳೆದು ಗೋಡೆಯನ್ನು ಹತ್ತುತ್ತ, ಕಿಟಿಕಿಯ ಕನ್ನವನ್ನು ಮುಟ್ಟಿದನು; ಅನಂತರ ಆ ದಟ್ಟಿಯ ತುದಿಯನ್ನು ಮಾಳಿಗೆಯ ಮಾಡಿನ ಮರದ ಅಡ್ಡಕ್ಕೆ ಕಟ್ಟಿ, ಅದನ್ನು ತೂಗಬಿಟ್ಟು, ಅದರ ಆಧಾರದಿಂದ ಮೆಲ್ಲನೆ ಕೆಳಕ್ಕೆ ಇಳಿದು ತಮ್ಮನನ್ನು ಸೇರಿಕೊಂಡನು. ಇಷ್ಟರಲ್ಲಿ ಚಂದ್ರನು ಮುಳುಗಿ ಕತ್ತಲು ಇನ್ನೂ ಕಪ್ಪಾದಂತೆ ಕಾಣಿಸಿತು. ಗುಂಡಿಯೊಳಗಿಂದ ತಪ್ಪಿಸಿಕೊಂಡು ಕತ್ತಲೆಯ ಕಾಡೊಳಗೆ ನುಗ್ಗಿ ಕೊಳ್ಳುವ ಸೊಕ್ಕಾನೆಗಳಂತೆ ಅವರಿಬ್ಬರು ಆ ಅಂಧಕಾರದಲ್ಲಿ ಅಲ್ಲಿ ಬಿದ್ದು ಇಲ್ಲಿ ಬಿದ್ದು, ಬೆಳಕು ಹರಿಯುವಷ್ಟರೊಳಗೆ ಪಂಜದಿಂದ ಮಾಯವಾದರು.

ಮರುದಿನ ಬೆಳಗ್ಗೆ ಕೋಟಿಚೆನ್ನಯರ ಪಲಾಯನದ ಸಮಾಚಾರವು ಚೆಂದುಗಿಡಿಗೆ ಗೊತ್ತಾದರೂ ಅವನು ಅದನ್ನು ಕೇಮರಬಲ್ಲಾಳನ ಕಿವಿಗೆ ಬೀಳಿಸದೆ ಅವರಿಬ್ಬರು ಸೆರೆಯಲ್ಲಿ ಇದ್ದಾರೆ ಎಂಬಂತೆ ಸುದ್ದಿಯನ್ನು ಹರಹಿದನು; ಆದರೆ ಆಳುಗಳನ್ನು ಗುಟ್ಟಾಗಿ ಕಳುಹಿಸಿ ಮನೆ ಮನೆಗಳಲ್ಲಿ ಹುಡುಕಿಸಿದನು. ತಪ್ಪಿಹೋದ ಕೋಟಿಚೆನ್ನಯರು ತಪ್ಪಿಯೇ ಹೋದರು; ಪಂಜದ ಜನಗಳಿಗೆ ಮಾತ್ರ ಗೊತ್ತಾಗಲಿಲ್ಲ.