ಪುಟ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಎಣ್ಮೂರು ಬಲ್ಲಾಳನಿಗೆ ಬಿಲ್ಲರ ಅಂಕೆ

41

ದಷ್ಟಕ್ಕೆ ಭಯಭರಿತ ಭಕ್ತಿಯಾಯಿತು. "ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟಲಿಕ್ಕಿಲ್ಲ' ಎಂಬಂತಿದ್ದ ವೀರರಿಬ್ಬರನ್ನು ಎಣ್ಮೂರಿನ ಬಿಲ್ಲವರು ಕ್ರಮೇಣ ತಮ್ಮವರೆಂಬ ವಿಶ್ವಾಸದಿಂದ ಭಾವಿಸತೊಡಗಿದರು. ಹೀಗೆ ಕೋಟಿಚೆನ್ನಯರ ಪ್ರಶ್ನೆಯು ಎಣ್ಮೂರಲ್ಲಿ ಜಾತಿ ಪ್ರಸಂಗವಾಯಿತು. ಕೇಮರ ಬಲ್ಲಾಳನು ಅವರನ್ನು ಮೋಸದಿಂದ ಹಿಡಿದು ಸೆರೆಯಲ್ಲಿ ಇಟ್ಟಿದ್ದಾನೆಂಬ ಸುದ್ದಿಯಿಂದ ಬಿಲ್ಲರ ಉಡಿಯಲ್ಲಿ ಬೆಂಕಿಕಿಡಿಯನ್ನು ಕಟ್ಟಿದಂತಾಗಿ, ಅವರೆಲ್ಲ ರು ಒಟ್ಟುಗೂಡಿ ಎಣ್ಮೂರು ಬಲ್ಲಾಳನಿದ್ದಲ್ಲಿಗೆ ಹೋಗಿ, ಕೋಟಿ ಚೆನ್ನಯರನ್ನು ಅವರ ತಲೆ ಹೂ ಬಾಡದಂತೆ ನೋಡಿಕೊಂಡು ಅವರನ್ನು ಕೂಡಲೆ ಕಳುಹಿಸಿಕೊಡಲು ಕೇಮರ ಬಲ್ಲಾಳನಿಗೆ ಪತ್ರ ಬರೆಯಬೇಕೆಂಬುದಾಗಿಯೂ, ಆತನು ಅದಕ್ಕೆ ಒಪ್ಪದಿದ್ದರೆ ಆತನ ಸೀಮೆಯನ್ನು ಒಳನುಗ್ಗಿ ಕೋಟಿಚೆನ್ನಯರನ್ನು ಬಿಡಿಸಿಕೊಂಡು ಎಣ್ಮೂರಿಗೆ ತರುವಂತೆ ತಮಗೆ ಅಪ್ಪಣೆ ಕೊಡಿಸಬೇಕೆಂಬದಾಗಿಯೂ ಅರಿಕೆಮಾಡಿಕೊಂಡರು. ಎಣ್ಮೂರು ಬಲ್ಲಾಳನು ಬಿಲ್ಲರ ಬಿನ್ನಹವನ್ನು ಕಿವಿಗೊಟ್ಟು ಕೇಳಿ, ತನ್ನ ಕಡೆಯ ಕಿನ್ನಿಚೆನ್ನಯನೆಂಬವನನ್ನು ಕರೆದು, ಕೋಟಿಚೆನ್ನಯರನ್ನು ಸಂಧಿಮಧ್ಯಸ್ಥಿಕೆಯಿಂದ ಕರೆದುಕೊಂಡು ಬರುವಂತೆ ಪ್ರಯತ್ನಿಸು” ಎಂದು ಅಪ್ಪಣೆಮಾಡಿ, ಒಂದು ದಿನ ಪಂಜಕ್ಕೆ ಕಳುಹಿಸಿದನು.

ಆ ದಿನ ಮಧ್ಯಾಹ್ನ ಕೋಟಿಚೆನ್ನಯರು ತಾವೂ ಅಡಗಿಕೊಂಡಿದ್ದ ತುಪ್ಪೆ ಕಲ್ಲು ಅಡವಿಯಿಂದ ಹೊರಬಿದ್ದು ಮುಂದಿನ ದಾರಿಯನ್ನು ಹುಡುಕಿ ಸಂಚರಿಸುತ್ತಿರಲು, ಚೆನ್ನಯನು ಫಕ್ಕನೆ ನಿಂತು ಬಿಟ್ಟು, “ಅಣ್ಣಾ, ಇದೋ ಗಡಿಕಲ್ಲು, ಪಂಜ ಹಿಂದಕ್ಕಾಯಿತು-- ಇದು ಎಣ್ಮೂರು” ಎಂದನು.

ಆಗ ಕೋಟಿಯು “ನನಗೆ ಬರಹ ಇಲ್ಲ. ಮೊದಲು ಹುಟ್ಟಿ, ನೆಟ್ಟಗೆ ಬೆಳೆಯಲಿಕ್ಕೆ ನಾನಾದೆ; ಬರಹ ಓದಿ, ಬುದ್ಧಿ ಕಲಿಯಲಿಕ್ಕೆ ನೀನಾದೆ. ಕಲ್ಲು ಬರಹ ಓದು” ಎಂದನು.

ಚೆನ್ನಯನು ಮೊಳಕಾಲು ಊರಿ, ಗಡಿಕಲ್ಲಿನ ಬರಹವನ್ನು ಓದಿ ಹೇಳಿದನು.

ಕೋಟಿಯು “ಹೌದು, ಚೆನ್ನಯ ನೀನು ಓದಿದಂತೆ ಎಲ್ಲವೂ ಈಗ ನಡೆಯುತ್ತದೆ. ಮುಂಚಿನ ಕಾಲದಲ್ಲಿ ಎಣ್ಮೂರು ಬಲವಾಗಿತ್ತು, ಪಂಜದ