ಪುಟ:ಕ್ರಾಂತಿ ಕಲ್ಯಾಣ.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೮೭

ತೋರ್ಪಡಿಸುವುದು ತನ್ನ ಪ್ರತಿಷ್ಠೆ ಗೌರವಗಳಿಗೆ ಹಾನಿಯೆಂದು ಭಾವಿಸಿ ಅವನು ತಟಸ್ಥನಾಗಿದ್ದನು. ಮುಂದೇನಾಗುವುದೆಂದು ನಿರೀಕ್ಷಿಸಿ ಬಳಿಕ ತನ್ನ ಕಾರ್ಯವಿಧಾನವನ್ನು ತೋರಿಸಿಕೊಳ್ಳುವುದು ಕ್ರಮಿತನ ಉದ್ದೇಶವಾಗಿತ್ತು.

***

ಚೆನ್ನಬಸವಣ್ಣನವರ ಒಪ್ಪಿಗೆಯ ಓಲೆ ತಲುಪಿದ ದಿನವೇ ಬಿಜ್ಜಳನು ಮೇನೆಕಳುಹಿಸಿ ಅವರನ್ನು ಸರ್ವಾಧಿಕಾರಿ ಚಾವಡಿಗೆ ಕರೆಸಿಕೊಂಡನು.

ಮಂಚಣನಾಯಕ, ನಾರಣಕ್ರಮಿತ, ಇವರೇ ಮುಖ್ಯರಾದ ಅಷ್ಟಪ್ರಧಾನಿಗಳು ಸಭೆಯಲ್ಲಿದ್ದರು. ಅವರ ಸಮಕ್ಷಮ ಚೆನ್ನಬಸವಣ್ಣನವರು ಧರ್ಮಾಧಿಕರಣದ ವಿಶೇಷ ಸಚಿವರಾಗಿ ಅಧಿಕಾರ ವಹಿಸಿಕೊಂಡರು.

ಪದವಿ ಗೌರವಗಳಿಗೆ ತಕ್ಕಂತೆ ರಕ್ಷಕ ಭಟರು, ರಾವುತರು, ಪಸಾಯತರು, ಕರಣಿಕರು ಮುಂತಾದ ಪರಿವಾರವನ್ನು ಮಹಮನೆಗೆ ಕಳುಹಿಸುವ ವಿಚಾರ ಬಿಜ್ಜಳನೇ ಪ್ರಸ್ತಾಪಿಸಿದಾಗ ಚೆನ್ನಬಸವಣ್ಣನವರು,

"ಈ ಎಲ್ಲ ವೈಭವ ಪ್ರದರ್ಶನಗಳು ವಿರಕ್ತನೂ ಶರಣನೂ ಆದ ನನಗೆ ಸಲ್ಲದು. ಮಂತ್ರಿಪದವಿಯ ಸ್ವೀಕಾರ ನನ್ನ ಸರಳ ಜೀವನಕ್ಕೆ ಕೊಡಲಿಯಾಗದಿರಲಿ ಎಂದು ಕೂಡಲ ಚೆನ್ನ ಸಂಗಮದೇವನನ್ನು ಪ್ರಾರ್ಥಿಸಿ ನಾನಿಲ್ಲಿಗೆ ಬಂದೆ. ಒಬ್ಬ ಕರಣಿಕ, ಇಬ್ಬರು ಪಸಾಯಿತರು, ಇವರನ್ನು ಕಳುಹಿಸಿದರೆ ಸಾಕು. ನಾನು ನನ್ನ ಕಾಲವೆಲ್ಲವನ್ನೂ ಮಹಮನೆಯಲ್ಲಿ ಕಳೆಯುತ್ತೇನೆ. ಹೊರಗೆ ಹೋಗುವುದು ಅಪರೂಪ. ಮೇನೆಯ ಅಗತ್ಯವಿಲ್ಲ. ಮಂತ್ರಿಮಂಡಲದ ಸಭೆಗಳಿಗೆ ಬರಬೇಕಾದಾಗ ಪ್ರಭುಗಳು ಮೇನೆ ಕಳುಹಿಸಿದರೆ ಸಾಕು," ಎಂದರು.

ಚೆನ್ನಬಸವಣ್ಣನವರ ವಿರಕ್ತಿ ಸರಳತೆಗಳು ಉಳಿದ ಮಂತ್ರಿಗಳಿಗೆ ವಿಲಕ್ಷಣವಾಗಿ ಕಂಡವು. ಆದರೆ ಬಿಜ್ಜಳನು ಆ ವಿಚಾರವಾಗಿ ಏನೂ ಹೇಳದೆ ಸಲಹೆಗೆ ಒಪ್ಪಿಕೊಂಡನು. ಅವನಿಗೆ ಬೇಕಾಗಿದ್ದುದು ಮಂತ್ರಿಮಂಡಲಕ್ಕೆ ಚೆನ್ನಬಸವಣ್ಣನವರ ಪ್ರವೇಶ. ಅದನ್ನು ಹೇಗೋ ಸಾಧಿಸಿದ್ದಾಯಿತು. ಉಳಿದ ವಿಚಾರಗಳು ಮುಂದೆ ಸಹಜವಾಗಿ ಪರಿಹಾರವಾಗುವುದೆಂದು ಅವನು ತಿಳಿದಿದ್ದನು.

ದೇವಗಿರಿಯ ಯಾಗಶಾಲೆಯಲ್ಲಿ ವೀರಭದ್ರನಂತೆ ಅವತರಿಸಿ ತನ್ನ ಯಾಗವನ್ನು ಕೆಡಿಸಿದ ಶರಣ ಯುವಕನು ಮಂತ್ರಿಯಾಗಿ ತನ್ನೊಡನೆ ಸಮಾನಾಸನದಲ್ಲಿ ಕುಳಿತುದನ್ನು ಕಂಡು ನಾರಣಕ್ರಮಿತನ ಮನಸ್ಸು ಅಳುಕಿತು. ತನ್ನ ಪ್ರತಿಷ್ಠೆ ಮಹತ್ವಾಕಾಂಕ್ಷೆಗಳಿಗೆ ಆತಂಕ ತಂದೊಡ್ಡುವ ರಾಜಕೀಯ ಚತುರತೆ ಈ ಹೊಸ ಮಂತ್ರಿಗಿಲ್ಲವೆಂಬ ಭರವಸೆ ಸಮಾಧಾನವನ್ನುಂಟುಮಾಡಿತು.

ಇನ್ನೂ ಕೆಲವು ದಿನಗಳು ಕಳೆದವು. ಮಾರ್ಗಶಿರ ಮುಗಿದು ಪೌಷ