ಪುಟ:ಕ್ರಾಂತಿ ಕಲ್ಯಾಣ.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೮

ಕ್ರಾಂತಿ ಕಲ್ಯಾಣ

ಆರಂಭವಾಗಿ ಕೆಲವು ದಿನಗಳು ಕಳೆದವು. ಆಮೇಲೆ ಒಂದು ದಿನ ಅಪರಾಹ್ನ ಅಧ್ಯಯನ ಶಾಲೆಯಲ್ಲಿ ಚೆನ್ನಬಸವಣ್ಣನವರು, ಹಿಂದಿನ ದಿನ ಅನುಭವಮಂಟಪದಲ್ಲಿ ನಡೆದ ಚರ್ಚಾಗೋಷ್ಠಿಯ ವರದಿಯನ್ನು ಪರಿಷ್ಕರಿಸುತ್ತ ಕುಳಿತಿದ್ದಾಗ ಪಸಾಯಿತನು ಓಲೆಯೊಂದನ್ನು ತಂದುಕೊಟ್ಟನು. ಚೆನ್ನಬಸವಣ್ಣನವರು ಅದನ್ನು ಓದಿಕೊಂಡು, ಕೊಂಚ ಹೊತ್ತು ಯೋಚಿಸುತ್ತಿದ್ದು, ಬಳಿಕ ಮಾಚಿದೇವರನ್ನು ಹುಡುಕುತ್ತ ಹೊರಗೆ ಬಂದರು.

ಪ್ರತಿದಿನ ಅಪರಾಹ್ನ ಮೊದಲನೆಯ ಪ್ರಹರಾನಂತರ ಅನುಭವಮಂಟಪದ ಸಭೆ ಪ್ರಾರಂಭವಾಗುವವರೆಗೆ, ಆಪ್ತೇಷ್ಟರಾದ ಕೆಲವು ಮಂದಿ ವೃದ್ದಶರಣರೊಡನೆ ಮಾತಾಡುತ್ತಾ ಮೊಗಶಾಲೆಯಲ್ಲಿ ಕುಳಿತುಕೊಳ್ಳುವುದು ಮಾಚಿದೇವರ ಪದ್ಧತಿ. ಕೆಲವು ವೇಳೆ ಈ ಮೊಗಶಾಲೆಯ ಚರ್ಚೆ, ಅನುಭವಮಂಟಪದಲ್ಲಿ ಪುನರ್ವಿಮರ್ಶೆಗೆ ಬರುವಷ್ಟು ಪ್ರಾಮುಖ್ಯವಾಗಿರುತ್ತಿತ್ತು.

ಚೆನ್ನಬಸವಣ್ಣನವರನ್ನು ನೋಡುತ್ತಲೆ ಮಾಚಿದೇವರು ಮೊಗಶಾಲೆಯಿಂದೆದ್ದು ಹತ್ತಿರಹೋಗಿ, "ಡಣ್ಣಾಯಕರು ಯಾರನ್ನೋ ಹುಡುಕುತ್ತಿರುವಂತಿದೆ?" ಎಂದರು. ಮಂತ್ರಿಯಾದ ಕೆಲವೇ ದಿನಗಳಲ್ಲಿ ಚೆನ್ನಬಸವಣ್ಣನವರನ್ನು, ಚಿಕ್ಕದಂಡನಾಯಕರು ಅಥವಾ ಡಣ್ಣಾಯಕರು ಎಂದು ಗೌರವದಿಂದ ಕರೆಯುವುದು ರೂಢಿಗೆ ಬಂದಿತ್ತು.

"ನಿಮ್ಮನ್ನೇ ಹುಡುಕುತ್ತಿದ್ದೆ, ಮಾಚಿದೇವಯ್ಯನವರೇ," ಎಂದು ಚೆನ್ನಬಸವಣ್ಣನವರು ಆ ವೃದ್ಧಜಂಗಮನನ್ನು ಸಂಗಡ ಕರೆದುಕೊಂಡು ಪುನಃ ಅಧ್ಯಯನ ಶಾಲೆಗೆ ಬಂದರು. ಅಲ್ಲಿದ್ದ ಸುಖಾಸನದ ಮೇಲೆ ಮಾಚಿದೇವರನ್ನು ಕುಳ್ಳಿರಿಸಿ, ಹತ್ತಿರ ತಾವೂ ಕುಳಿತುಕೊಂಡು,

"ಈಗೊಂದು ಸಮಸ್ಯೆ ಒದಗಿದೆ. ಏನು ಮಾಡಬೇಕೆಂಬುದನ್ನು ನಿರ್ಧರಿಸಲಾರದೆ ನಿಮ್ಮನ್ನು ಹುಡುಕಿದೆ." ಎಂದರು.

"ಡಣ್ಣಾಯಕರು ಬಿಡಿಸಲಾರದ ಸಮಸ್ಯೆಯೂ ಉಂಟೆ?" -ಎಂದು ಮಾಚಿದೇವರು ನಗೆಯಾಡಿದರು.

ವೃದ್ಧ ಜಂಗಮನ ಹಾಸ್ಯಪ್ರವೃತ್ತಿಯನ್ನು ಅರಿತಿದ್ದ ಚೆನ್ನಬಸವಣ್ಣನವರು, "ನಾನೇನು ಸರ್ವಜ್ಞನೇ? ನನ್ನಿಂದ ಬಿಡಿಸಲಾಗದ ಎಷ್ಟೋ ಸಮಸ್ಯೆಗಳು ಜಗತ್ತಿನಲ್ಲಿವೆ. ಅವುಗಳಲ್ಲಿ ಇದೊಂದು," -ಎಂದು ಹೇಳಿ ಕೊಂಚಹೊತ್ತಿಗೆ ಮೊದಲು ಪಸಾಯಿತನು ತಂದುಕೊಟ್ಟ ಓಲೆಯನ್ನು ಮಾಚಿದೇವರಿಗೆ ಕೊಟ್ಟರು.

ಓಲೆಯಲ್ಲಿ ಬಿಜ್ಜಳರಾಯನು ಈ ರೀತಿ ಬರೆದಿದ್ದನು;

".....ಚಾಲುಕ್ಯ ಚಕ್ರೇಶ್ವರ ಜಗದೇಕಮಲ್ಲರಸರಲ್ಲಿ ಈಚೆಗೆ ಅಂಕುರಿಸಿರುವ