ಪುಟ:ಕ್ರಾಂತಿ ಕಲ್ಯಾಣ.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೮೯

ಧರ್ಮನಿಷ್ಠೆ ನಮ್ಮನ್ನು ತೊಡಕಿನಲ್ಲಿ ಹಾಕಿದೆ. ಮುಂದಿನ ಮಾಘಮಾಸದ ಪರ್ವದಿನಗಳಲ್ಲಿ ಅವರು ಜಂಗಮ ದಾಸೋಹ ನಡೆಸಲು ಅಪೇಕ್ಷಿಸಿದ್ದಾರೆ. ದಾಸೋಹ ಎಷ್ಟು ದಿನಗಳು ನಡೆಯಬೇಕು, ಪ್ರತಿದಿನ ಎಷ್ಟು ಮಂದಿ ಜಂಗಮರಿಗೆ ಆಹ್ವಾನ ಕೊಡಬೇಕು, ಅದಕ್ಕೆ ಬೇಕಾಗುವ ಸಾಮಾನು ಸರಂಜಾಮುಗಳೇನು, ಈ ವಿಚಾರಗಳು ಇನ್ನೂ ನಿರ್ಧರವಾಗಿಲ್ಲ. ರಾಜ ಗೃಹದ ಮನೆಹೆಗ್ಗಡೆಗೆ ಧಾರ್ಮಿಕ ವಿಚಾರಗಳೇನೂ ತಿಳಿಯದು. ಕಾರಣ ನಿಮ್ಮ ಕಡೆಯ ಇಬ್ಬರು ಕಾರ್ಯದರ್ಶಿಗಳನ್ನು ರಾಜಗೃಹಕ್ಕೆ ಕಳುಹಿಸಿ ಈ ಕಾರ್ಯ ಸಮರ್ಪಕವಾಗಿ ನಡೆಯುವಂತೆ ಏರ್ಪಡಿಸಬೇಕಾಗಿ ಕೋರುತ್ತೇನೆ.

"ಜಗದೇಕಮಲ್ಲರಸರ ಇನ್ನೊಂದು ಇಚ್ಛೆ ನಮ್ಮನ್ನು ಇನ್ನೂ ಹೆಚ್ಚಿನ ತೊಂದರೆಗೆ ಗುರಿಪಡಿಸಿದೆ. ಶೈವಧರ್ಮ ಸಾಹಿತ್ಯಗಳಲ್ಲಿ, ಮುಖ್ಯವಾಗಿ ಶರಣಧರ್ಮದಲ್ಲಿ ಪರಿಚಯವುಳ್ಳ ಜಂಗಮರೊಬ್ಬರನ್ನು ಧರ್ಮೋಪದೇಶಕರಾಗಿ ಕಳುಹಿಸಬೇಕೆಂಬುದು ಪ್ರಭುಗಳ ಅಪೇಕ್ಷೆ. ಈ ಹೊಣೆಗಾರಿಕೆಯ ಸ್ಥಾನಕ್ಕೆ ನೇಮಿಸಲ್ಪಡುವ ಜಂಗಮ ಗುರು, ಕೆಲವು ತಿಂಗಳ ಮಟ್ಟಿಗಾದರೂ ಹೊರಗಿನ ಜಗತ್ತಿನೊಡನೆ ಎಲ್ಲ ಸಂಬಂಧವನ್ನೂ ತೊರೆದು ರಾಜಗೃಹದಲ್ಲಿರಬೇಕಾಗುವುದು. ಇದಕ್ಕೆ ತಕ್ಕವರನ್ನು ಆರಿಸುವ ಕಾರ್ಯಭಾರವನ್ನೂ ನಾನು ನಿಮಗೇ ಬಿಟ್ಟಿದ್ದೇನೆ....."

-ಎಂದು ಬಿಜ್ಜಳನು ಓಲೆಯನ್ನು ಮುಗಿಸಿದ್ದನು.

"ಕಲ್ಯಾಣದಲ್ಲಿ ಒಂದು ನೂರಾ ಎಂಟು ಜಂಗಮ ಮಠಗಳಿವೆ. ಅವುಗಳಲ್ಲಿ ಯಾವುದಾದರೂ ಒಂದು ಮಠಕ್ಕೆ ಬರೆದಿದ್ದರೆ ಈ ಎಲ್ಲ ಕಾರ್ಯಗಳನ್ನೂ ನಡೆಸಿಕೊಡುತ್ತಿದ್ದರು. ಹಾಗೆ ಮಾಡದೆ ಬಿಜ್ಜಳರಾಯರು ನಮಗೇ ಬರೆದಿರುವ ಉದ್ದೇಶವೇನು?"

-ಬೇಸರಗೊಂಡವರಂತೆ ಚೆನ್ನಬಸವಣ್ಣನವರು ಹೇಳಿದರು.

ಯಾವ ಮಠಕ್ಕೆ ಬರೆದಿದ್ದರೂ ಅದು ಕೊನೆಯ ನಿರ್ಧಾರಕ್ಕಾಗಿ ಮಹಮನೆಗೇ ಬರುತ್ತಿತ್ತೆಂಬುದು ಬಿಜ್ಜಳರಾಯರಿಗೆ ತಿಳಿದಿದೆ. ಆ ಬಳಸು ಮಾರ್ಗದಿಂದ ತಪ್ಪಿಸಿ ಕೊಳ್ಳಲು, ಅವರು ನೇರವಾಗಿ ನಿಮಗೇ ಬರೆದಿದ್ದಾರೆ. ಅಲ್ಲದೆ ನೀವು ಅವರ ಧರ್ಮಾಧಿಕರಣದ ಸಚಿವರು," -ಎಂದರು ಮಾಚಿದೇವರು ಅದೇ ದನಿಯಿಂದ.

"ಈಗ ನಾವೇನು ಮಾಡಬೇಕೆಂದು ನಿಮ್ಮ ಸಲಹೆ?"

"ನೀವು ಏನು ಯೋಚಿಸಿದ್ದೀರಿ?" -ಪ್ರಶ್ನೆಗೆ ಉತ್ತರವಾಗಿ ಮತ್ತೊಂದು ಪ್ರಶ್ನೆ.

ಚನ್ನಬಸವಣ್ಣನವರು ಹೇಳಿದರು: "ಜಗದೇಕಮಲ್ಲರಸರು ಭವಿ. ಅವರು