ಪುಟ:ಕ್ರಾಂತಿ ಕಲ್ಯಾಣ.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೦

ಕ್ರಾಂತಿ ಕಲ್ಯಾಣ

ನಡೆಸುವ ದಾಸೋಹಕ್ಕೆ ನಾವು ಜಂಗಮರನ್ನು ಕಳುಹಿಸುವುದು ಹೇಗೆ? ಈ ಧರ್ಮಸೂಕ್ಷ್ಮದ ಅರಿವಿಲ್ಲದೆ ಬಿಜ್ಜಳರಾಯರು ಬರೆದಿದ್ದಾರೆ."

ಮಾಚಿದೇವರು ಕೊಂಚಹೊತ್ತು ಯೋಚಿಸುತ್ತಿದ್ದು ಬಳಿಕ, "ದಾಸೋಹದಲ್ಲಿ ಭವಿ, ಭಕ್ತ ಎಂಬ ಭೇದಭಾವನೆ ಸರಿಯಲ್ಲವೆಂದು ನನ್ನ ಅಭಿಪ್ರಾಯ. ಶರಣ ಧರ್ಮದ ಪ್ರಭಾವದಿಂದ ರಾಜಧಾನಿ ಕಲ್ಯಾಣ ನಗರದಲ್ಲಿ ಚಾಲುಕ್ಯರಾಜ್ಯದ ಬೇರೆ ಕಡೆಗಳಲ್ಲಿ ಭಕ್ತರಂತೆ ಭವಿಗಳೂ ವರ್ಷದಲ್ಲಿ ಒಂದೆರಡು ಸಾರಿಯಾದರೂ ದಾಸೋಹ ನಡೆಸುತ್ತಾರೆ. ಅವುಗಳಲ್ಲಿ ಭಕ್ತ ಜಂಗಮರೆಂಬ ಭೇದಭಾವವಿಲ್ಲದೆ ಎಲ್ಲರೂ ಭಾಗವಹಿಸುವುದನ್ನು ನೋಡಿದ್ದೇನೆ," ಎಂದರು.

"ಅಂತಹ ವರ್ತನೆ ಶರಣರಿಗೆ ಸಲ್ಲ, ಮಾಚಿದೇವಯ್ಯನವರೇ," ವ್ಯವಸ್ಥಾಪಕನ ಅಧಿಕಾರವಾಣಿಯಿಂದ ಚೆನ್ನಬಸವಣ್ಣನವರೆಂದರು. "ಈಗ ದೇಶದಲ್ಲಿ ಪ್ರಚಾರದಲ್ಲಿರುವ ವೈದಿಕ ತಾಂತ್ರಿಕ ಧರ್ಮಗಳ ನಡುವೆ ಶರಣಧರ್ಮ ತಲೆಯೆತ್ತಿ ನಿಲ್ಲಬೇಕಾದರೆ ಈ ಉಚ್ಚಂಖಲ ವರ್ತನೆಯನ್ನು ತಡೆಗಟ್ಟಲು ನಾವು ಕೆಲವು ಕಟ್ಟುಕಾಯಿದೆಗಳನ್ನು ರಚಿಸಿಕೊಳ್ಳಬೇಕಾಗುವುದು. ಅನುಭವಮಂಟಪದಲ್ಲಿ ಪ್ರಭುದೇವರು ಅಧ್ಯಕ್ಷರಾಗಿದ್ದಾಗಲೆ ಈ ವಿಚಾರಗಳು ಚರ್ಚೆಗೆ ಬಂದಿದ್ದವು. ಅಂತ್ಯ ನಿರ್ಧಾರವಾಗಲಿಲ್ಲ."

ಮಾಚಿದೇವರ ಮುಖದಲ್ಲಿ ವಿಡಂಬನೆಯ ಚುಚ್ಚುನಗೆಯೊಂದು ಮಿಂಚಿ ಮರೆಯಾಯಿತು. ತುಸು ಗಡುಸಾದ ದನಿಯಲ್ಲಿ ಅವರು ಹೇಳಿದರು: "ಶರಣಧರ್ಮವು ವಿಶ್ವಧರ್ಮ. ಪ್ರಭುದೇವರು, ಬಸವಣ್ಣನವರು, ಸಿದ್ದರಾಮ ಶಿವಯೋಗಿಗಳು, ಇವರೆಲ್ಲ ಅದನ್ನು ವಿಶ್ವಧರ್ಮವನ್ನಾಗಿ ಮಾಡಲು ಪರಿಶ್ರಮಿಸಿದ್ದಾರೆ. ಜಾತಿಮತ ಪಂಥಗಳ ಭೇದವಿಲ್ಲದೆ, ಸ್ತ್ರೀಪುರುಷ, ಬಾಲವೃದ್ದ, ದರಿದ್ರಸಿರಿವಂತ ಎಂಬ ಅಂತರವಿಲ್ಲದೆ, ಎಲ್ಲ ವರ್ಗದ ಎಲ್ಲ ಮಾನವರಿಗೂ ಮಾರ್ಗದರ್ಶಕ ಜ್ಞಾನಜ್ಯೋತಿಯಾಗಬೇಕು ಶರಣಧರ್ಮ. ಕಾಯಿದೆ ಕಟ್ಟುಗಳಿಂದ ಅದರ ವ್ಯಾಪ್ತಿ ವೈಶಾಲ್ಯಗಳನ್ನು ಸೀಮಿತಗೊಳಿಸಲು ನೀವು ಪ್ರಯತ್ನಿಸಬೇಡಿರಿ. ಬಿಜ್ಜಳನನ್ನು ಕೂಪಮಂಡುಕವೆಂದು ಕರೆದ ನಾವು, ಅವನ ಈ ಸಲಹೆಯನ್ನು ನಿರಾಕರಿಸಿದರೆ ನಿಜವಾಗಿ ನಾವೇ ಕೂಪಮಂಡುಕಗಳಾಗುತ್ತೇವೆ."

"ಹಾಗಾದರೆ ದಾಸೋಹದ ಸಲಹೆಗೆ ನಾವು ಒಪ್ಪಬೇಕೆಂದು ಹೇಳುವಿರಾ?"

"ಅಹುದು, ಅದೇ ನನ್ನ ಅಭಿಪ್ರಾಯ. ರಾಜಕೀಯ ವಿಪರ್ಯಾಸ ಫಲವಾಗಿ ಜಗದೇಕಮಲ್ಲರಸರು ಈಗ ರಾಜಗೃಹದಲ್ಲಿ ಬಂದಿಯಾಗಿದ್ದರೂ ಅವರೇ ಚಾಲುಕ್ಯ ರಾಜ್ಯದ ನಿಜವಾದ ಒಡೆಯರು. ಬಿಜ್ಜಳರಾಯರು ಭುಜಬಲ ಪರಾಕ್ರಮಗಳಿಂದ