ಪುಟ:ಕ್ರಾಂತಿ ಕಲ್ಯಾಣ.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೪

ಕ್ರಾಂತಿ ಕಲ್ಯಾಣ

ಮುಂತಾದ ಪರಿಕರಣಗಳನ್ನು ಸರಿಪಡಿಸಿಕೊಂಡು ಬೊಮ್ಮರಸನೂ ಅವನ ಹಿಂದೆ ಹೋದನು.

ಎಂದಿನಂತೆ ಅನುಭವಮಂಟಪದ ಮೊಗಶಾಲೆಯಲ್ಲಿ ಕುಳಿತಿದ್ದ ಮಾಚಿದೇವರು, ಮಿದುನಗೆಯಿಂದ ಅವರನ್ನು ಸ್ವಾಗತಿಸಿ,

"ನಮ್ಮ ಕೀರ್ತಿ ಪ್ರತಾಪಗಳ ವರದಿ ಬಿಜ್ಜಳರಾಯರನ್ನು ಮುಟ್ಟಿವೆ, ಬ್ರಹ್ಮೇಂದ್ರ ಶಿವಯೋಗಿಗಳೆ,” ಎಂದರು.

ಮಾಚಿದೇವರ ಸಹಜ ಮಂದಹಾಸ ಬೊಮ್ಮರಸನಿಗೆ ಕುಹಕದ ಕಿಡಿಯಾಗಿ ಕಂಡಿತು. ಮಾತು ಕುಚೋದ್ಯದ ಬಿರುನುಡಿಯಾಯಿತು. ತಬ್ಬಿಬ್ಬಾಗಿ, "ಕೀರ್ತಿ! ಪ್ರತಾಪ! ಬಿ-ಬಿ-ಬಿಜ್ಜಳರಾಯರು! ನಿಮ್ಮ ಮಾತು ನನಗೆ ಅರ್ಥವಾಗಲಿಲ್ಲ,” ಎಂದನು ಅವನು.

ನಿಮ್ಮ ಕೀರ್ತಿ ಪ್ರತಾಪಗಳಿಗೆ ಮೆಚ್ಚಿದ ಬಿಜ್ಜಳರಾಯರು ನಿಮ್ಮ ವಿಷಯವಾಗಿ ನಮಗೊಂದು ಆಜ್ಞೆ ಕಳುಹಿಸಿದ್ದಾರೆ.” ಮಾಚಿದೇವರು ತುಸು ಗಂಭೀರವಾಗಿ ಹೇಳಿದರು.

'ಇನ್ನೇನು ನನ್ನ ಅವತಾರ ಮುಗಿದಂತೆಯೇ?” ಎಂದು ಭಾವಿಸಿ ಬೊಮ್ಮರಸನು ನಿಲ್ಲಲಾರದೆ ಬ್ರಹ್ಮಶಿವನ ಹೆಗಲ ಮೇಲೆ ಕೈಯಿಟ್ಟನು. ದೇಹ ಥರ ಥರ ಕಂಪಿಸಿತು, ಹಣೆಯಲ್ಲಿ ಬೆವರಿನ ಹನಿಗಳೂ ಮೂಡಿದವು.

ಮಾಚಿದೇವರು ತೀವ್ರ ದೃಷ್ಟಿಯಿಂದ ಬೊಮ್ಮರಸವನ್ನು ನಿಟ್ಟಿಸಿ, "ನಿಮ್ಮಂಥ ಯೋಗಿಗಳನ್ನೂ ನಡುಗಿಸುವಂತಹ ಭಯಂಕರ ರಾಕ್ಷಸನೇ ಬಿಜ್ಜಳರಾಯನು!” ಎಂದರು.

"ಗುರುಗಳು ಈಗತಾನೇ ಧ್ಯಾನದಿಂದೆದ್ದರು. ಅದರಿಂದಲೇ ಅವರ ಮೈನಡುಗುತ್ತಿರುವುದು. ಒಂದೊಂದು ಸಾರಿ ಹೀಗಾಗುವುದುಂಟು.” — ತಲೆಮರೆಸಿಕೊಂಡಿದ್ದ ಬುದ್ದಿಚತುರತೆಗಳನ್ನು ಹೊಡೆದೆಬ್ಬಿಸಿ ಎಳೆತಂದು ಮಾಚಿದೇವರ ಮುಂದೆ ನಿಲ್ಲಿಸಿದಂತೆ ಬ್ರಹ್ಮಶಿವನು ಉತ್ತರ ಕೊಟ್ಟನು.

ಧ್ಯಾನದಲ್ಲಿ ಕುಳಿತು ಸಮಾಧಿಮಗ್ನರಾದವರು ಎಚ್ಚೆತ್ತ ಮೇಲೆ ಸ್ವಲ್ಪ ಹೊತ್ತು ದೇಹ ಕಂಪಿಸುವುದೆಂಬುದನ್ನು ಮಾಚಿದೇವರು ತಿಳಿದಿದ್ದರು. ಬ್ರಹ್ಮಶಿವನ ವಿವರಣೆಯಿಂದ ಬ್ರಹ್ಮೇಂದ್ರ ಶಿವಯೋಗಿಯಲ್ಲಿ ಅವರ ಗೌರವ ಹೆಚ್ಚಿತು.

ಬದಲಿಸಿದ ಕಂಠದಿಂದ ಅವರು, "ಹೀಗೆ ಕುಳಿತುಕೊಳ್ಳಿರಿ, ಯೋಗಿವರ್ಯರೆ. ಕೊಂಚಹೊತ್ತು ವಿಶ್ರಮಿಸಿಕೊಂಡು ಬರಬಹುದಾಗಿತ್ತು. ಈ ತಿಳಿಗೇಡಿ ಹರೀಶರುದ್ರ ಅವಸರ ಮಾಡಿದನೆಂದು ಕಾಣುತ್ತದೆ" ಎಂದರು.

ತನ್ನ ಬುದ್ಧಿ ಚತುರತೆಯ ಪುರಸ್ಕಾರವಾಗಿ ತಿಳಿಗೇಡಿ ಪ್ರಶಸ್ತಿಯನ್ನು ಪಡೆದ