ಪುಟ:ಕ್ರಾಂತಿ ಕಲ್ಯಾಣ.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೯೫

ಬ್ರಹ್ಮಶಿವನು, ಕಟುಕನ ಮುಂದೆ ನಿಂತ ಅಸಹಾಯಕ ಕುರಿಯಂತೆ ತಲೆಬಾಗಿ ಬೆದರಿಕೆಯ ನಟನೆ ತೋರಿದನು.

ಬೊಮ್ಮರಸನು ಚೇತರಿಸಿಕೊಂಡು, “ಆಜ್ಞೆಯೇನು ಮಾಚಿದೇವಯ್ಯನವರೆ? ನಾವದನ್ನು ನೋಡಬಹುದೇ?” ಎಂದನು.

“ಚಾಲುಕ್ಯ ಚಕ್ರೇಶ್ವರ ಜಗದೇಕಮಲ್ಲರಸರ ಹೆಸರು ಕೇಳಿದ್ದೀರಾ ನೀವು?”

ಮಾಚಿದೇವರ ಪ್ರಶ್ನೆಯಿಂದ ಬೊಮ್ಮರಸ ಪುನಃ ಬೆದರಿ, “ಏನಾಯಿತು ಅವರಿಗೆ?” ಎಂದು ಕೇಳಿದನು.

“ಅವರಿಗೇನೂ ಆಗಿಲ್ಲ. ನಿಮ್ಮನ್ನು ಅವರ ಧರ್ಮೋಪದೇಶಕರಾಗಿ ನೇಮಿಸಿ ಬಿಜ್ಜಳರಾಯರು ನಿರೂಪ ಕಳುಹಿಸಿದ್ದಾರೆ,” -ಎಂದು ಹೇಳಿ ಮಾಚಿದೇವರು ಆಜ್ಞಾಪತ್ರವನ್ನು ಬೊಮ್ಮರಸನಿಗೆ ಕೊಟ್ಟರು.

ಪತ್ರವನ್ನು ಓದುತ್ತ ಬೊಮ್ಮರಸನು ಚಿಂತಿಸಿದನು -'ಇದೇನು ಕನಸೇ, ವಾಸ್ತವವೇ ? ಕಳೆದ ಕೆಲವು ತಿಂಗಳಿಂದ ನಾನು ಯಾರನ್ನು ನೋಡಲು ಪ್ರಯತ್ನಿಸಿ ವಿಫಲನಾಗಿದ್ದೆನೋ ಆ ನನ್ನ ಯೌವನದ ಗೆಳೆಯ, ರಾಜಗೃಹದಲ್ಲಿ ಬಂಧಿಸಲ್ಪಟ್ಟ ಚಾಲುಕ್ಯ ಅರಸು, ಜಗದೇಕಮಲ್ಲನಿಗೆ ನಾನು ಧರ್ಮೋಪದೇಶಕ! ಸ್ವಯಂ ಬಿಜ್ಜಳರಾಯನ ಆಜ್ಞೆಯಿಂದ ! ಕನಸಿನಲ್ಲಲ್ಲದೆ ಜಾಗ್ರತ ಜಗತ್ತಿನಲ್ಲಿ ಇದು ಸಾಧ್ಯವೇ?

....ಅಥವಾ ....ಅಥವಾ.....ಬೇಹುಗಾರರಿಂದ ಎಲ್ಲವನ್ನೂ ತಿಳಿದ ಬಿಜ್ಜಳನು ತನ್ನನ್ನು ಬಂಧನದಲ್ಲಿಡಲು ಮಾಡಿದ ವಿಡಂಬನೆಯ ಆಜ್ಞೆಯೇ ಇದು!”

“ಬಿಜ್ಜಳರಾಯರಿಗೆ ನಮ್ಮ ವಿಚಾರ ತಿಳಿದದ್ದು ಹೇಗೆ?” - ಕೆಲವು ಕ್ಷಣಗಳ ಮೇಲೆ ಬೊಮ್ಮರಸನು ಪ್ರಶ್ನಿಸಿದನು.

“ಅನುಭವಮಂಟಪದಲ್ಲಿ ನಿಮ್ಮ ಪ್ರವಚನಗಳನ್ನು ಕೇಳಿದವರು ವರದಿ ಮಾಡಿರಬಹುದು.”

ಬೊಮ್ಮರಸನಿಗೆ ಧೈರ್ಯಮೂಡಿತು. ವಾಸ್ತವ ಪರಿಸ್ಥಿತಿ ತಾನು ನಿರೀಕ್ಷಿಸಿದಷ್ಟು ಕೆಟ್ಟಿಲ್ಲವೆಂದು ತಿಳಿದನು.

ಮಾಚಿದೇವರು ಮುಂದುವರೆದು, “ಅದೇನೇ ಇರಲಿ, ಶೈವಶರಣಧರ್ಮಗಳಲ್ಲಿ ನೀವು ಪರಿಣತ ಪಂಡಿತರೆಂದು ಬಿಜ್ಜಳರಾಯರ ನಂಬಿಕೆ. ಅದರಿಂದಲೆ ವಿಷಯಾ ಸಕ್ತರೆಂದು ವಿಖ್ಯಾತರಾದ ಜಗದೇಕಮಲ್ಲರಸರನ್ನು ಧರ್ಮಮಾರ್ಗಕ್ಕೆ ತಿರುಗಿಸುವ ದೊಡ್ಡ ಹೊಣೆಯನ್ನು ನಿಮ್ಮ ಮೇಲೆ ಹಾಕಿದ್ದಾರೆ. ಈ ಕಾರ್ಯವನ್ನು ನೀವು ಚಾತುರ್ಯ ದಕ್ಷತೆಗಳಿಂದ ನಿರ್ವಹಿಸಬೇಕು,” ಎಂದು ಮುಗಿಸಿದರು.

***

ಮಾಚಿದೇವರ ಸಲಹೆಯಂತೆ ಚೆನ್ನಬಸವಣ್ಣನವರು ನಗರದಿಂದ ರಥವನ್ನು