ಪುಟ:ಕ್ರಾಂತಿ ಕಲ್ಯಾಣ.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೯೮

ಕ್ರಾಂತಿ ಕಲ್ಯಾಣ


“ಇದೇನು ಅರಮನೆಯೋ ಸೆರೆಮನೆಯೋ !”-ಅಚ್ಚರಿಯಿಂದ ಬ್ರಹ್ಮಶಿವನೆಂದನು ಬೊಮ್ಮರಸನ ಕಡೆ ತಿರುಗಿ.

“ನೀನು ಅಪೇಕ್ಷಿಸಿದ್ದು ಅರಮನೆಯ ಭೋಗವನ್ನಲ್ಲವೆ? ಅದನ್ನೇ ಕರುಣಿಸಿದ್ದಾನೆ ಪರಶಿವನು. ಬಿಜ್ಜಳರಾಯರು ಜಗದೇಕಮಲ್ಲರಸರನ್ನು ಕೈಕಾಲುಗಳಿಗೆ ಬೇಡಿ ಹಾಕಿ ಸೆರೆಮನೆಯಲ್ಲಿಟ್ಟಿರುವರೆಂದು ಭಾವಿಸಿದೆಯಾ ತಿಳಿಗೇಡಿ?” - ಮಾಚಿದೇವರು ಕೊಟ್ಟ 'ತಿಳಿಗೇಡಿ' ಪ್ರಶಸ್ತಿಯನ್ನು ಶಾಶ್ವತವಾಗಿ ಬ್ರಹ್ಮಶಿವನಿಗೆ ಅಂಟಿಸುವುದು ಬೊಮ್ಮರಸನ ಉದ್ದೇಶವಾಗಿತ್ತು.

“ಹಾಗಾದರೆ ನೀವಿಲ್ಲಿಗೆ ಬರಲು ಅಷ್ಟೊಂದು ಬೆದರಿದಿರೇಕೆ, ಬೊಮ್ಮರಸರೆ? ರಥದಿಂದಿಳಿದು ಓಡಿಹೋಗಲು ಯೋಚಿಸಿದ್ದಿರಲ್ಲವೆ?” -ಬ್ರಹ್ಮಶಿವನು ಅಚ್ಚರಿಯಿಂದ ನುಡಿದನು.

“ಅದಕ್ಕೆ ಕಾರಣವಿದೆ, ಪಂಡಿತ. ಈಗ ಓಲಗಶಾಲೆಯಲ್ಲಿ ನಮಗೆ ದರ್ಶನ ಕೊಡುವವರು ಜಗದೇಕಮಲ್ಲರಸರೆ? ಬಿಜ್ಜಳರಾಯರೆ? ಅಥವಾ ಒಟ್ಟಿಗೆ ಅವರಿಬ್ಬರೆ? ಅದನ್ನು ತಿಳಿದಮೇಲೆ ನನ್ನ ಭಯ ಪರಿಹಾರವಾಗುವುದು,” ಎಂದು ಮಾರ್ಮಿಕವಾಗಿ ಬೊಮ್ಮರಸನು ಉತ್ತರ ಕೊಟ್ಟನು.

“ಏನೇ ಆಗಲಿ, ಅಷ್ಟೊಂದು ಜನ ಸುಂದರ ತರುಣಿಯರು ಏಕಕಾಲದಲ್ಲಿ ನನ್ನ ಕಾಲುಗಳನ್ನು ಹಿಡಿದದ್ದು ಇದೇ ಮೊದಲ ಸಾರಿ ಬೊಮ್ಮರಸರೆ. ನಿಮಗೂ ಹಾಗೆಯೇ ಇರಬೇಕು. ನಾನು ಭಾವಿಸಿದ್ದೆ, ಈ ಹೆಣ್ಣುಸಂತೆಯಲ್ಲಿ ನಮ್ಮ ಸನ್ಯಾಸಿವೇಷಕ್ಕೆ ಪಾದಪೂಜೆಯಲ್ಲದೆ, ಬೇರೇನಾದರೂ ಬೆಲೆಯಿದೆಯೇ ? ಎಂದು.” -ನಿಟ್ಟುಸಿರಾಡಿಸಿ ಬ್ರಹ್ಮಶಿವನೆಂದನು.

“ಈ ಗಡ್ಡಮೀಸೆಗಳಲ್ಲದಿದ್ದರೂ ನನ್ನ ವಯಸ್ಸು ನನ್ನನ್ನು ರಕ್ಷಿಸಬಹುದು. ಆದರೆ ತರುಣನಾದ ನೀನು ಈ ರೊಚ್ಚು ಹೊಳೆಯಲ್ಲಿ ತೇಲಿಹೋಗುವೆ !”

ಶಕುನ ಪಲುಕಿದನು ಬೊಮ್ಮರಸ.

“ತರುಣರಿಗಿಂತ ಮುದುಕರಿಗೇ ಇಂಥ ರೊಚ್ಚಿನಾಸೆ ಹೆಚ್ಚು ಎನ್ನುತ್ತಾರೆ ಜನ. ಎಲ್ಲಾದರೊಂದು ಕಡೆ ವಾತ್ಸಾಯನನೂ ಅದನ್ನು ಹೇಳಿರಬೇಕು,” -ಎಂದು ಬ್ರಹ್ಮಶಿವ ಮಾತಿನ ಮುಡಿಯಿಡುತ್ತಿದ್ದಂತೆ ಹೆಗ್ಗಡೆ ಅಲ್ಲಿಗೆ ಬಂದು,

“ಪ್ರಭುಗಳು ಸಿದ್ಧರಾಗಿದ್ದಾರೆ. ದಯಮಾಡಿಸಬೇಕು,” -ಎಂದು ಅವರನ್ನು ಓಲಗಶಾಲೆಗೆ ಕರೆದುಕೊಂಡು ಹೋದನು.

ಬಾಗಿಲಲ್ಲಿ ಕಾವಲಿದ್ದ ಬಿಚ್ಚುಕತ್ತಿಯ ಭಟರ ಹೊರತಾಗಿ ಅದು ಪರಿಜನ ಶೂನ್ಯವಾಗಿತ್ತು. ಜಗದೇಕಮಲ್ಲನೊಬ್ಬನೆ ಮೆತ್ತನೆಯ ದಿಂಬುಗಳ ಸುಖಾಸನದಲ್ಲಿ