ಪುಟ:ಕ್ರಾಂತಿ ಕಲ್ಯಾಣ.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸಿರಿಮನೆಯ ಕತ್ರಲೆಗೆ ಗುರುಮನೆಯ ದೀಪ

೯೯


ಕುಳಿತು ಧರ್ಮೋಪದೇಶಕನ ಎದುರು ನೋಡುತ್ತಿದ್ದನು. ಹಿಂದೆ ಇಳಿಯಬಿಟ್ಟಿದ್ದ ಕೆಂಪುತೆರೆಯ ಮರೆಯಲ್ಲಿ ಕಂಡೂ ಕಾಣಿಸದಂತೆ ಅಗ್ಗಳನು ನಿಂತಿದ್ದನು.

ಮನೆಹೆಗ್ಗಡೆ ಜಂಗಮರಿಬ್ಬರನ್ನು ಕರೆದುಕೊಂಡು ಒಳಗೆ ಬರುತ್ತಿರುವುದನ್ನು ಕಂಡು ಜಗದೇಕಮಲ್ಲನು ಸುಖಾಸನದಿಂದೆದ್ದು ಕೆಲವು ಹೆಜ್ಜೆಗಳು ಮುಂದೆ ಬ೦ದು ಅವರನ್ನು ಸ್ವಾಗತಿಸಿ ಪಾರ್ಶ್ವದಲ್ಲಿದ್ದ ಭದ್ರಾಸನದ ಮೇಲೆ ಕುಳ್ಳಿರಿಸಿದನು.

“ಪ್ರಭುಗಳು ಕುಳಿತುಕೊಳ್ಳಬೇಕು.” -ಗುರುಮನೆಗೆ ತಕ್ಕ ಠೀವಿಯಿಂದ ಜಗದೇಕಮಲ್ಲನ ಕಡೆ ತಿರುಗಿ ಕೈತೋರಿಸಿ ಬೊಮ್ಮರಸನು ಹೇಳಿದನು.

ಜಗದೇಕಮಲ್ಲನು ಸುಖಾಸನದಲ್ಲಿ ಮಂಡಿಸಿ ಹೆಗ್ಗಡೆಯ ಕಡೆ ತಿರುಗಿ “ಗುರುದೇವರ ಬಿಡಾರದಲ್ಲಿ ಯಾವ ಅರೆಕೊರೆಗಳೂ ಇಲ್ಲದಂತೆ ಎಚ್ಚರ ವಹಿಸಬೇಕು, ನೆನಪಿರಲಿ. ನಿನ್ನ ಗಣಿಕಾಪರಿವಾರದ ಗಾಳಿ ಕೂಡ ಆ ಕಡೆಗೆ ಬೀಸಬಾರದು.” ಎಂದು ಎಚ್ಚರಿಕೆಯಿತ್ತು ಬೊಮ್ಮರಸನಿಗೆ ಪುನಃ ವಂದಿಸಿ,

“ಈ ರಾಜಗೃಹದ ಏಕಾಂತವಾಸದಲ್ಲಿ, ವಿಲಾಸಿನಿಯರ ನಡುವೆ, ನನ್ನ ಮನಸ್ಸು ಚಲವಿಚಲವಾಗಿದೆ, ಗುರುದೇವ. ನಾನು ಮನಃಶಾಂತಿಯನ್ನು ಬಯಸಿ ನಿಮ್ಮನ್ನಾಶ್ರಯಿಸಿದ್ದೇನೆ. ನಿಮ್ಮ ಧರ್ಮಬೋಧೆಯಿಂದ ನನ್ನ ಅರಿವಿನ ದೀವಿಗೆ ಮತ್ತೆ ಉರಿಯಲಿ,” -ಎಂದು ಗಂಭೀರವಾಗಿ ಹೇಳಿದನು.

ಬೊಮ್ಮರಸನು ಪ್ರತಿನಮಸ್ಕಾರ ಮಾಡಿ, "ಪ್ರಭುಗಳಿಗೆ ಯೋಗಭೋಗಗಳೆರಡೂ ಒಪ್ಪವವು. ಭೋಗದ ಸರದಿ ಮುಗಿದ ಮೇಲೆ ಅದರ ಪ್ರತಿಕ್ರಿಯಾ ರೂಪವಾದ ವಿರಕ್ತಿಯ ಸರದಿ ಪ್ರಾರಂಭವಾಗುವುದು.

“ನಮಸ್ತುಂಗ ಶಿರಶ್ಚುಂಬಿ "ಚಂದ್ರಚಾಮರ ಚಾರವೇ ।
ತ್ರೈ ಲೋಕ್ಕನಗರಾರಂಭ ಮೂಲಸ್ತಂಭಾಯ ಶಂಭವೇ ॥
-ಎಂದು ವೈರಾಗ್ಯನಿಧಿಯಾದ ಶಿವನನ್ನು ನುತಿಸಿದ ಕವಿ,
"ನಿತಂಬಾಲಸಗಾಮಿನ್ಯಃ ಪೀನೋನ್ನತ ಪಯೋಧರಾಃ ।
ಮನ್ಮಥಾಯ ನಮಸ್ತಸ್ಮೈ ಯಸ್ಯಾಯತನಮಂಗನಾ: ॥| *
-ಎಂದು ಕಾಮದೇವನನ್ನು ಸ್ತುತಿಸಿದ್ದಾನೆ. ಧರ್ಮ, ಅರ್ಥ, ಕಾಮಗಳನ್ನು

____________

“ಮೊದಲನೆಯದು ಚಾಲುಕ್ಕ ಶಾಸನಗಳಲ್ಲಿ ಸಾಮಾನ್ಯವಾಗಿ ದೊರಕುವ ಮಂಗಳ ಶ್ಲೋಕ “ಜಾಮರದಂತೆ ಹಾರಾಡುವ ಜಟೆಯಂತೆ ಚ೦ದ್ರನನ್ನು ಧರಿಸಿರುವ ಮತ್ತು ಮೂರು ಲೋಕಗಳ ಸೃಷ್ಟಿಸ್ಥಿತಿಲಯ ರೂಪವಾದ ಕಾರ್ಯಾರಂಭಕ್ಕೆ ಮೂಲಸ್ತಂಭವಾದ ಶಂಭುವಿಗೆ ನಮಸ್ಕಾರ” ಎಂದು ಪದ್ಯದ ತಾತ್ಪರ್ಯ, ಎರಡನೆಯ ಪದ್ಯ ಮನ್ಮಥನ ಸ್ತುತಿರೂಪವಾಗಿದೆ. “ನಿತಂಬಗಳ ಭಾರದಿಂದ ಜಗ್ಗಿ ನಡೆಯುವ, ತುಂಬೆದೆಯ ಅಂಗನೆಯರನ್ನು ಆಶ್ರಯಿಸಿದ ಮನ್ಮಥನಿಗೆ ನಮಸ್ಕಾರ” ಎಂದು ಅದರ ಅರ್ಥ. ಭರ್ತೃಹರಿ ವಿರಚಿತವೆಂದು ಹೇಳುವ 'ವಿಟವೃತ್ತ'ದ ಮಂಗಳ ಶ್ಲೋಕ ಇದು.