ಪುಟ:ಕ್ರಾಂತಿ ಕಲ್ಯಾಣ.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೬

ಕ್ರಾಂತಿ ಕಲ್ಯಾಣ

ಹಿಡಿದು ತಿಂದಿತಂತೆ. ನಿಮ್ಮ ಗಣಿಕಾಪರಿವಾರಕ್ಕೂ ಅದೇ ಗತಿ."

ಆಗ ಹೆಗ್ಗಡೆಗೆ ಅರ್ಥವಾಯಿತು. ಗಟ್ಟಿಯಾಗಿ ನಕ್ಕು, "ಉಪಯುಕ್ತ ವಸ್ತುಗಳು ನಿರುಪಯೋಗದಿಂದ ಕೊಳೆಯುತ್ತಿರುವುದನ್ನು ಕಂಡು ಅಗ್ಗಳನ ಕವಿ ಹೃದಯ ಮರುಕದಿಂದ ತಳಮಳಿಸಿರಬೇಕು, ಅಲ್ಲವೇ ಅಯ್ಯನವರೆ? ಸನ್ಯಾಸಿಯಾದರೂ ರಸಿಕರು ನೀವು. ಹಿಂಡಿನಲ್ಲಿ ಯಾವುದಾದರೊಂದು ಕುರಿಯ ಮೇಲೆ ನಿಮ್ಮ ಕೃಪಾದೃಷ್ಟಿ ಬಿದ್ದರೆ ನನ್ನ ಅಡ್ಡಿಯಿಲ್ಲ," ಎಂದನು.

ಹೆಗ್ಗಡೆ ತನ್ನನ್ನು ಪರೀಕ್ಷಿಸುತ್ತಿರುವುದಾಗಿ ತಿಳಿದು ಬ್ರಹ್ಮಶಿವನು, "ಹೆಣ್ಣು ಮಾಯೆ, ಎಂದು ಶಾಸ್ತ್ರ ಹೇಳುತ್ತದೆ. ಆ ಮಾಯೆಯಿಂದ ಪಾರಾಗಲು ನಾನು ಗುರುದೇವರನ್ನು ಆಶ್ರಯಿಸಿದ್ದೇನೆ. ಬಿಟ್ಟದ್ದನ್ನು ಯಾರಾದರೂ ಮತ್ತೆ ಬಯಸುವರೆ?" ಎಂದು ವಿರಕ್ತಿಯಿಂದ ನುಡಿದನು.

"ನಿಮ್ಮ ಗುರುಗಳೂ ಮಾಯೆಯಿಂದ ಮುಕ್ತರಾದವರೆ? ವಯಸ್ಸಾದರೂ ದೇಹದಲ್ಲಿ ಶಕ್ತಿಯುಡುಗಿಲ್ಲ."

"ಹೆಣ್ಣಿನ ಹೆಸರು ಕೇಳಿದರೆ ಅವರು ಕಿಡಿಕಿಡಿಯಾಗುವರು."

"ಹಾಗಿದ್ದರೆ ಈ ದಿನ ಬೆಳಿಗ್ಗೆ ಅಷ್ಟೊಂದು ಮಂದಿ ಹೆಂಗಸರು ಅವರ ಕಾಲು ಹಿಡಿದಾಗ ಆ ವೈರಾಗ್ಯದ ಬೆಂಕಿ ಎಲ್ಲಿ ಮರೆಯಾಗಿತ್ತು?"

-ಕುಹಕದ ನಗೆ ಬೀರಿ ಹೆಗ್ಗಡೆ ಹೇಳಿದನು.

"ಏಕಕಾಲದಲ್ಲಿ ಅಷ್ಟೊಂದು ಜನ ಹೆಂಗಸರ ಸೆರಗಿನ ಗಾಳಿಯಿಂದ ಉರಿ ಆರಿತ್ತು, ಹೆಗ್ಗಡೆಗಳೆ. ಕೆಂಡ ಹಾಗೆಯೇ ಇದೆ. ಈಗ ನಾವು ಪುನಃ ಆ ವಿಚಾರ ತೆಗೆದರೆ ಜ್ವಾಲೆಯೆದ್ದು ನಮ್ಮನ್ನು ಸುಡುವುದು."

ಸನ್ಯಾಸಿ ತನ್ನೊಡನೆ ನಗೆಯಾಡುತ್ತಿರುವನೆಂದು ಹೆಗ್ಗಡೆ ತಿಳಿದನು. 'ಎರಡು ದಿನ ಕಳೆದರೆ ಗುರುಶಿಷ್ಯರು ತಾವಾಗಿ ನನ್ನ ಬಳಿಗೆ ಬರುವರು. ಎಂಥೆಂಥ ಋಷಿ ಮುನಿಗಳನ್ನೋ ನುಂಗಿ ನೀರು ಕುಡಿದ ಮಾಯೆ ಈ ಬಡ ಜಂಗಮರನ್ನು ಬಿಡುವುದೆ?" ಎಂದು ಭಾವಿಸಿ ಪ್ರಕಟವಾಗಿ ಅವನು,

"ನೀವು ಮತ್ತು ನಿಮ್ಮ ಗುರುಗಳು ನಿಜವಾಗಿ ಅದೃಷ್ಟಹೀನರು, ಹರೀಶ ರುದ್ರಯ್ಯನವರೆ. ರಾಜಗೃಹದ ಗಣಿಕಾವಾಸ ರತ್ನಗಳ ನಿಧಿ. ಅದು ತಾನಾಗಿ ನಿಮ್ಮನ್ನು ಹುಡುಕಿಕೊಂಡು ಬಂದಾಗ ಹಾವೆಂದು ಹಿಂದೆ ಹೋಗುವಿರಿ. ಆವಿನ ಕೆಚ್ಚಲಲ್ಲಿದ್ದೂ ಹಾಲಿನ ರುಚಿ ಕಾಣದ ಉಣ್ಣೆಗಳು ನೀವು," -ಎಂದ ನಗುತ್ತಾ ಮೂದಲಿಸಿದನು.

ಮರುದಿನ ಅಪರಾಹ್ನ ಓಲಗಶಾಲೆಯಲ್ಲಿ ಪ್ರವಚನ ಪ್ರಾರಂಭವಾದಾಗ