ಪುಟ:ಕ್ರಾಂತಿ ಕಲ್ಯಾಣ.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೧೦೭

ಪಸಾಯಿತರಿಬ್ಬರು ಕೈಕಟ್ಟಿ ನಿಂತಿರುವುದನ್ನು ಕಂಡು ಜಗದೇಕಮಲ್ಲನು, "ಹೆಗ್ಗಡೆಯೆಲ್ಲಿ?" ಎಂದು ಕೇಳಿದನು.

"ಅವರು ದಾಸೋಹದ ಕಾರ್ಯಕ್ಕಾಗಿ ಹೊರಗೆ ಹೋಗಿದ್ದಾರೆ, ಒಡೆಯರೆ."

-ಪಸಾಯಿತನು ಉತ್ತರ ಕೊಟ್ಟನು.

"ಈಗ ಬರುವುದಿಲ್ಲವೆ?"

"ಬರುವುದಿಲ್ಲ, ಒಡೆಯರೆ."

"ನೀವು ಹೋಗಬಹುದು, ನಿಮಗೆ ಇಲ್ಲೇನೂ ಕೆಲಸವಿಲ್ಲ."

-ಎಂದು ಜಗದೇಕಮಲ್ಲನು ಬೊಮ್ಮರಸನ ಕಡೆ ತಿರುಗಿ, "ಪ್ರವಚನಾರಂಭವಾಗಲಿ," ಎಂದನು.

ಹಿಂದಿನ ದಿನ ಗೊತ್ತಾಗಿದ್ದಂತೆ ಸೂತಸಂಹಿತೆಯ ಶ್ಲೋಕಗಳನ್ನು ಅಗ್ಗಳನು ರಾಗವಾಗಿ ಪಠಿಸಿದನು. ಬೊಮ್ಮರಸನು ಅರ್ಥವಿಸಿದನು.

ಹೀಗೆ ಕೊಂಚಕಾಲ ಪ್ರವಚನ ನಡೆದ ಮೇಲೆ, ಪಸಾಯಿತರು ಹೋದರೆ, ಕಾವಲುಭಟರೇನು ಮಾಡುತ್ತಿದ್ದಾರೆ, ಸಭೆಯಲ್ಲಿ ನಡೆಯುವ ಮಾತುಕತೆಗಳು ಬಾಗಿಲ ಹತ್ತಿರಿರುವವರಿಗೆ ಕೇಳಿಸುವುದೇ, ಇತ್ಯಾದಿ ವಿಚಾರಗಳನ್ನು ಎಚ್ಚರದಿಂದ ಪರಿಶೀಲಿಸಿದ ಬ್ರಹ್ಮಶಿವನು, ಬೊಮ್ಮರಸನ ಚರಣತಳದಲ್ಲಿ, ಬಾಗಿಲ ಕಡೆ ಮುಖ ಮಾಡಿ ಕುಳಿತು, ಆಸಕ್ತಶೋತೃವಿನಂತೆ ತಲೆಯೆತ್ತಿ, ಕಣ್ಣರಳಿಸಿ, ಕಿವಿ ತೆರೆದು ನೋಡುತ್ತ,

"ನನ್ನ ಸಂದೇಹವೊಂದಿದೆ. ಅದನ್ನು ಪರಿಹರಿಸಬೇಕಾಗಿ ಬೇಡುತ್ತೇನೆ," ಎಂದು ಬಿನ್ನವಿಸಿಕೊಂಡನು. "ಕೇಳಬೇಕಾದ್ದನ್ನು ಕೇಳು, ಹರೀಶ."

-ಸುಪ್ರೀತನಂತೆ ಬೊಮ್ಮರಸನು ನುಡಿದನು.

"ಬೆಕ್ಕು ಸನ್ಯಾಸ ದೀಕ್ಷೆ ತೆಗೆದುಕೊಂಡಾಗ ಇಲಿಗಳೇನು ಮಾಡುವವು?"

ಬ್ರಹ್ಮಶಿವನ ಪ್ರಶ್ನೆ ಅಲ್ಲಿದ್ದವರನ್ನು ಅಚ್ಚರಿಗೊಳಿಸಿತು. ಬೊಮ್ಮರಸನು ಕೋಪದಿಂದ "ಎಂತಹ ಅಸಂಬದ್ಧ ಪ್ರಶ್ನೆ!" ಎಂದನು.

"ಅಸಂಬದ್ಧವಲ್ಲ. ಈಗ ಹೆಗ್ಗಡೆ ಸಭೆಯಲ್ಲಿಲ್ಲ. ಈ ದಿನ ಬರುವುದೂ ಇಲ್ಲ. ಅನಿರೀಕ್ಷಿತವಾಗಿ ದೊರೆತ ಈ ಕಾಲವನ್ನು ನಾವು ಮಂತ್ರಾಲೋಚನೆಗಾಗಿ ಉಪಯೋಗಿಸಿಕೊಳ್ಳುವುದು ಉಚಿತವಲ್ಲವೆ?"

ಜಗದೇಕಮಲ್ಲನು ಅಗ್ಗಳ ಬೊಮ್ಮರಸರಿಗೆ ಪಠನ ವ್ಯಾಖ್ಯಾನಗಳನ್ನು ಮುಂದುವರೆಸಲು ಸನ್ನೆಮಾಡಿ ಪ್ರಾರಂಭಿಸಿದನು. "ಹೆಗ್ಗಡೆ ನಿನಗೇನು ಹೇಳಿದನು?"