ಪುಟ:ಕ್ರಾಂತಿ ಕಲ್ಯಾಣ.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೮

ಕ್ರಾಂತಿ ಕಲ್ಯಾಣ

"ದಾಸೋಹದ ಗೊಂದಲದಿಂದ ಇನ್ನೆರೆಡು ವಾರ ತಾನು ಸಭೆಗೆ ಬರುವುದಿಲ್ಲವೆಂದು. ಆ ಸಮಯದಲ್ಲಿ ನಾನು ಅವನ ಪ್ರತಿನಿಧಿಯಾಗಿ ಇಲ್ಲಿದ್ದು ಸಭೆಯಲ್ಲಿ ನಡೆಯುವುದನ್ನು ವರದಿಮಾಡಬೇಕಂತೆ?"

"ಅದಕ್ಕೆ ನೀನು ಒಪ್ಪಿದೆಯಾ?"

"ಒಪ್ಪಿದೆ."

"ಏನೆಂದು ವರದಿಮಾಡುವೆ?"

"ದಿನಕ್ಕೊಂದು ಅಧ್ಯಾಯದಂತೆ ಸೂತಸಂಹಿತೆಯ ವ್ಯಾಖ್ಯಾನ ನಡೆಯುತ್ತಿದೆಯೆಂದು. ಚತುರತೆಯಿಂದ ನಾನು ಆ ಕಾರ್ಯ ಮಾಡುತ್ತೇನೆ. ಪ್ರಭುಗಳು ನನ್ನ ಮೇಲೆ ಪೂರ್ಣ ಭರವಸೆಯಿಡಬಹುದು."—"ಹೆಗ್ಗಡೆ ಸಾಮಾನ್ಯನಲ್ಲ. ಅವಿವೇಕಿಯಂತೆ ನಟಿಸಿ, ಹೆಣ್ಣಿನಾಸೆ ತೋರಿಸಿ, ನಿಮ್ಮನ್ನು ವಂಚಿಸಲು ಪ್ರಯತ್ನಿಸುತ್ತಾನೆ. ಅವನ ವಿಚಾರದಲ್ಲಿ ನೀವು ಬಹಳ ಎಚ್ಚರದಿಂದಿರಬೇಕು. ನಮ್ಮ ಸಂಚಿತ ಸುಳಿವೂ ಅವನಿಗೆ ತಿಳಿಯದಂತೆ ನೋಡಿ ಕೊಳ್ಳಬೇಕು. ಈ ವಿಚಾರವನ್ನು ಬೊಮ್ಮರಸನಿಗೂ ತಿಳಿಸು."

"ಹೆಗ್ಗಡೆಯ ವಿಚಾರದಲ್ಲಿ ಆಗಲೆ ನಾನು ಅವರಿಗೆ ಎಚ್ಚರಿಕೆ ಕೊಟ್ಟಿದ್ದೇನೆ."

"ನೀವು ಕಲ್ಯಾಣಕ್ಕೆ ಬಂದು ಪಾಂಥನಿವಾಸದಲ್ಲಿ ಬಿಡಾರಮಾಡಿದವರೆಗಿನ ಎಲ್ಲ ಸುದ್ದಿಗಳೂ ನನಗೆ ಅಗ್ಗಳನಿಂದ ತಿಳಿದಿದೆ. ಆ ದಿನ ನೀವು ಪಾಂಥನಿವಾಸದಿಂದ ಹೋದ ಮೇಲೆ ನಿನ್ನೆ ರಾಜಗೃಹಕ್ಕೆ ಬಂದವರೆಗೆ ಏನೇನು ನಡೆಯಿತೆಂಬುದನ್ನು ಸಂಗ್ರಹವಾಗಿ ಹೇಳು."

ಬ್ರಹ್ಮಶಿವನು ಅದರಂತೆ ಎಲ್ಲವನ್ನೂ ತಿಳಿಸಿದನು. ಹುಲ್ಲಿನ ರಾಶಿಯಿಂದ ಕೋಳಿ ಹಾರಿ ಬಂದು ತಮ್ಮ ರಕ್ಷಣೆಗೆ ಕಾರಣವಾದದ್ದು ಮಹಮನೆಯಲ್ಲಿ ಮಾಚಿದೇವರ ಕಟುಹಾಸ್ಯ, ದೇವಗಿರಿಗೆ ಅವಸರದ ಭಟನನ್ನು ಕಳುಹಿಸಿದ್ದು, ಈ ಎಲ್ಲ ವಿಚಾರಗಳನ್ನೂ ಸಂಗ್ರಹವಾಗಿ ಹೇಳಿದನು.

"ದೇವಗಿರಿಗೆ ವರದಿ ಕಳುಹಿಸಿ ಎಷ್ಟು ದಿನಗಳಾದವು?" "ಸುಮಾರು ಹತ್ತು ದಿನಗಳು. ಪ್ರತಿದಿನ ಉತ್ತರ ನಿರೀಕ್ಷಿಸುತ್ತಿದ್ದೇವೆ."

"ಉತ್ತರ ಬಂದರೆ ನಿಮಗೆ ತಿಳಿಯುವುದು ಹೇಗೆ?"

"ಬಿಲ್ವಪತ್ರೆಗಾಗಿ ಪ್ರತಿದಿನ ಮಹಮನೆಗೆ ಹೋಗಿ ಬರಲು ಹೆಗ್ಗಡೆ ರಹದಾರಿ ಕೊಟ್ಟಿದ್ದಾನೆ. ಮಹಾರಾಣಿಯ ದೂತನು ನನಗಾಗಿ ಅಲ್ಲಿ ಕಾಯುವನು."

"ರಹದಾರಿಯನ್ನು ಬಹಳ ಎಚ್ಚರದಿಂದ ಉಪಯೋಗಿಸಿಕೊಳ್ಳಬೇಕು. ಎರಡು ಮೂರು ದಿನಗಳಿಗೊಂದು ಸಾರಿ ಹೋಗಿ ಬಂದರೆ ಸಾಕು. ಬರುವಾಗ