ಪುಟ:ಕ್ರಾಂತಿ ಕಲ್ಯಾಣ.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೧

೩. ಮಂಗಳವೇಡೆಯ ಅಗ್ನಿದಾಹ

ಮಂಗಳವೇಡೆಯಲ್ಲಿ ಕಲಚೂರ್ಯ ಅರಮನೆಯ ಹೊರಗಿನ ಉದ್ಯಾನ, ಕುಮಾರ ಸೋಮೇಶ್ವರನ ಪಟ್ಟಾಭಿಷೇಕಕ್ಕಾಗಿ ಅಲಂಕೃತವಾಗಿತ್ತು. ಉದ್ಯಾನದ ನಡುವೆ ದೊಡ್ಡ ಸಭಾಮಂಟಪ ರಚಿಸಲ್ಪಟ್ಟು, ಬಣ್ಣ ಬಣ್ಣದ ಬಟ್ಟೆಗಳ ಮೇಲ್ಕಟ್ಟು ತಳಿರು ತೋರಣ ಪತಾಕೆಗಳಿಂದ ಮೆರೆಯುತ್ತಿತ್ತು.

ಮಹೋತ್ಸವಕ್ಕಾಗಿ ಬರುವ ಸಾರ್ವಜನಿಕರ ಸಮಾರಾಧನೆಗಾಗಿ ಉದ್ಯಾನದ ಅಂಚಿನಲ್ಲಿ ರಾಜಮಾರ್ಗದ ಸಮೀಪ ಅರವಂಟಿಗೆಗಳು, ಮಿಠಾಯಿ ತಿಂಡಿ ತೀರ್ಥದ ಅಂಗಡಿಗಳು, ಪಾನಶಾಲೆ, ನಾಟ್ಯಗೃಹಗಳು, ನಟುವ ನಾಯಕಿ, ಜೋತಿಷಿ, ಹಾಡುಗಾರ, ಗಾರುಡಿಗ, ಹಾವಾಡಿಗ, ನಾಯಿಂದ, ಜಲಗಾರರ ಗುಡಿಸಲು ಗೂಡಾರ ಅವಾರಗಳು ಸಾಲಾಗಿದ್ದವು.

ಅಪರಾಹ್ನದ ಮೊದಲಜಾವ ಮುಗಿಯುತ್ತಿದ್ದಂತೆ ನಗರದ ಮಧ್ಯಮ ವರ್ಗದ ನಾಗರಿಕರು, ಸಮೀಪದ ಹಳ್ಳಿಗಳ ಶೆಟ್ಟಿ ಬಣಜಿಗ ಮೋಜುಗಾರ ಮೊನೆಗಾರರು, ಒಬ್ಬೊಬ್ಬರಾಗಿ ಇಬ್ಬಿಬ್ಬರಾಗಿ ಉದ್ಯಾನಕ್ಕೆ ಬರಲು ಪ್ರಾರಂಭಿಸಿದರು.

ಹಳ್ಳಿಯ ತರುಣ ಶೆಟ್ಟಿಯೊಬ್ಬನು ನಾಯಿಂದನ ಗೂಡಾರದಲ್ಲಿ ಮುಖ ಕೆರೆಸಿಕೊಂಡು, ಜಲಗಾರನ ಅವಾರದಲ್ಲಿ ಜಳಕಮಾಡಿ, ನಟುವ ಗೂಡಾರಗಳ ಹತ್ತಿರ ನಾಡ ಹಾಡಿತಿಯರ ಅಶ್ಲೀಲ ಹಾಡು ಕುಣಿತಗಳನ್ನು ನೋಡುತ್ತ ನಿಂತಿದ್ದಂತೆ ತರುಣ ನಾಗರಿಕನೊಬ್ಬನು ಅಲ್ಲಿಗೆ ಬಂದು, "ಏನಪ ಶೆಟ್ರ, ಯಾವಾಗ ಬಂದದ್ದು?” ಎಂದನು. "ಇದೇ ಬಂದೀನ್ರಿ, ರಂಗಣ್ಣ. ಏನ್ ಇಚಾರ? ಇಷ್ಟೆಲ್ಲ ಮೋಜು ನಡದೈತಿ?"–ಎಂದ ಶೆಟ್ಟಿ.

"ತಿಳೀದೇನ ನಿಮಗೆ? ಇನ್ ಹತ್ತು ದಿನವೂ ಊರಾಗ ಉತ್ಸವವೋ ಉತ್ಸವ, ಕುಮಾರ ಸೋಮಿದೇವರ ಪಟ್ಟಾಭಿಷೇಕ ನಡೀತೈತಿ."

ಹತ್ತು ದಿನ ಉತ್ಸವ! ಮೊದಲೇ ತಿಳಿದಿದ್ದರೆ ಗೆಳತಿಯನ್ನೂ ಸಂಗಡ ಕರೆತಂದು ಮೋಜು ಮಾಡಬಹುದಾಗಿತ್ತು–ಎಂದು ಯೋಚಿಸಿದ ಶೆಟ್ಟಿ.