ಪುಟ:ಕ್ರಾಂತಿ ಕಲ್ಯಾಣ.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೨

ಕ್ರಾಂತಿ ಕಲ್ಯಾಣ

ಇಂಗಿತವರಿತ ರಂಗಣ್ಣ, "ಈ ಹಳ್ಳಿಹಾಡಿತೀರ ನಾಡ ಕುಣಿತದಲ್ಲೇನದ ಶೆಟ್ರ? ಹಾಂಗಬನ್ರಿ, ನಾಟ್ಯಶಾಲೇಲಿ ಪಕ್ಕಾ ನರ್ತಕೀರ ನಾಟ್ಯ ನೋಡೋಣು," ಎಂದ.

ನಗರದ ಅನುಭವವಿಲ್ಲದ ಶೆಟ್ಟಿಗೆ ವಾಸ್ತವದಲ್ಲಿ ಇಂಥ 'ಗೆಳೆಯ' ಬೇಕಾಗಿತ್ತು. "ನೀವ್ ಸಿಕ್ಕಿದ್ದು ಚಲೋ ಆತು, ರಂಗಣ್ಣ. ನಡೀರಿ," ಎಂದು ಸಂಗಡ ಹೊರಟ.

ಅವರು ನಾಯಕಿಯರ ಗೂಡಾರಗಳ ಹತ್ತಿರ ಬಂದಾಗ ಸಿಂಗರಿಸಿಕೊಂಡು ಸಜ್ಜಾದ ಗಣಿಕೆಯರು ಬಾಗಿಲ ತೆರೆಗಳನ್ನು ಸರಿಸಿ-ನಿಂತು ಹೋಗಿ ಬರುವವರನ್ನು ಸನ್ನೆಮಾಡಿ ಕರೆಯುತ್ತಿದ್ದರು.

"ಯಾರಪ ಆಕಿ? ನಮ್ಮನ್ನೇ ಕರೀತಿರೋ ಹಾಂಗದ!" ಎಂದ ಶೆಟ್ಟಿ ಅವರಲ್ಲೊಬ್ಬಳನ್ನು ತೋರಿಸಿ.

"ಅವಳು ಕರೆಯೋದು ನಿಮ್ಮನ್ನಲ್ಲ, ಶೆಟ್ರ.ನಿಮ್ಮ ದುಡ್ಡಿನ ಚೀಲಾನ. ಅವರ ಸಾವಾಸ ಮಾಡಿದ್ರಿ ಅಂದ್ರ ನಿಮ್ ಕಿಸಿ ಬರೀದು ಮಾಡಿ ಕಳಿಸ್ತಾರ."

ರಂಗಣ್ಣನ ಎಚ್ಚರಿಕೆಯನ್ನು ಗಮನಿಸಿದ ಶೆಟ್ಟಿ, "ಎಷ್ಟಪಾ ಕೇಳಾರವರು? ನಾನೇನ ಪಟ್ಟಣಕ್ಕೆ ಬರೀ ಕಿಸಾಗ ಬಂದೀನೇನು?" ಎಂದು ಜಂಭವಾಡಿದ. "ಅವರು ಕೇಳೋದೇನೋ ಗಳಿಗೆಗೆ ಎರಡು ವರಹಾ, ಆದ್ರ ತಿಂಡಿ ತೀರ್ಥ ಬೋಮಾನ ಅಂತ ದುಪ್ಪಟ ಹಣ ಕಸೀತಾರ."

"ಹಂಗಾರ ಈ ನಾಯಕಿ ನರ್ತಕಿ ಅಂತ ಹೇಳಿಕೊಳ್ಳೋರು ಸೂಳೇರಿಗಿಂತ ದುಬಾರಿ ಅಂತೀರಾ ರಂಗಣ್ಣ?"

"ಇವರು ನಾಟ್ಯ ಶಾಲೇಲಿ ನರ್ತಕೀರು, ಗೂಡಾರದಲ್ಲಿ ನಾಯಕಿಯರು, ಮನೇಲಿ ಸೂಳೆಯರು. ಸೂಳೆಯಲ್ಲದ ನಾಯಕಿ, ನಾಯಕಿಯಲ್ಲದ ನರ್ತಕಿ, ಅಪರೂಪ ಶೆಟ್ರ. ಎಲ್ಲೋ ಅಲ್ಲೊಬ್ಬಳು, ಇಲ್ಲೊಬ್ಬಳು ಅದಾಳ, ನಾಟ್ಯಶಾಲೆಗೆ ಬಂದ್ರ ಅಂಥವಳೊಬ್ಬಳನ್ನ ತೋರಿಸ್ತೇನು. ಅವಳ ಸಂಗಡ ಗೆಣೆಯ ಒಬ್ಬ ಅದಾನ. ಅವನ್ನಲ್ಲದ ಮತ್ತಾರನ್ನೂ ಕಣ್ಣೆತ್ತಿ ಸುದ್ದಾ ನೋಡೋಲ್ಲ ಅವಳು." "ಅಂದ್ರ, ಸೂಳೆಯಾದ್ರೂ ಸತಿ."

"ಹೌದು, ಸತೀ ಸೂಳೆ. ಆದರೆ ಪತಿಗಳನ್ನ ತಿಂಗಳಿಗೊಂದ್ಸಾರಿ ಬದಲಾಯಿಸಿ ಕೊಳ್ತಾಳ. ಈ ತಿಂಗಳಿದ್ದವನು ನಾಳೆ ತಿಂಗಳಿಲ್ಲ. ನಿಮಗೆ ಇಚ್ಛಾ ಇದ್ದರ ಹೇಳ್ರಿ, ಸರದಿ ನೋಡಿಕೊಂಡು ನಿಮಗೂ ಒಂದು ತಿಂಗಳು ಗೊತ್ತುಮಾಡ್ತೇನು. ಒತ್ತಿಹಣ ಹೆಚ್ಚೇನೂ ಇಲ್ಲ. ತಿಂಗಳಿಗೊಂದು ಸಾವಿರ."

"ಒಬ್ಬ ಸೂಳೇಗ ಅಷ್ಟು ಹಣ ಕೊಡಾವ್ರೂ ಅದಾರ!" –ಆಶ್ಚರ್ಯದಿಂದ ಶೆಟ್ಟಿ ಕೇಳಿದ.