ಪುಟ:ಕ್ರಾಂತಿ ಕಲ್ಯಾಣ.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಂಗಳವೇಡೆಯ ಅದಾಹ

೧೧೩

"ಒಬ್ಬನ್ನೇ ನಂಬಿಕೊಂಡಿದ್ರೆ ಅವಳ ನಿಲವು ಹಣ ಸುರಿಯೋರದಾರ ಮಂಗಳವೇಡೇಲ್ಲಿ. ಆದರಾ ಮೋಜುಗಾತಿ ಒಪ್ಪಬೇಕಲ್ಲ? ತಿಂಗಳಿಗೊಬ್ಬ ಹೊಸಬನಾದ್ರವಳ ಮನಸಿಗೆ ಸಮಾಧಾನ, ದೇಹಕ್ಕೆ ಶಾಂತಿ," -ಎಂದು ರಂಗಣ್ಣ ಶೆಟ್ಟಿಯನ್ನು ನಾಟ್ಯಗೃಹಕ್ಕೆ ಕರೆದುಕೊಂಡು ಬಂದಾಗ ಶೆಟ್ಟಿ, "ಬಾ ರಂಗಣ್ಣ, ಹೊಟ್ಟೆ ಮೊದಲು ಬೆಚ್ಚಗಾಗಬೇಕು," ಎಂದ. ಇಬ್ಬರೂ ಪಾನಶಾಲೆಗೆ ಹೋದರು.

ಅಲ್ಲಿ ಜನ ತುಂಬಿತ್ತು. ಎರಡು ಪಾತ್ರೆ ಮಧುವನ್ನು ಕೊಳ್ಳಲು ಸಭಿಕನ ಗದ್ದಿಗೆಯ ಮುಂದೆ ಒಂದು ಗಳಿಗೆ ನಿಲ್ಲಬೇಕಾಯಿತು. ಕೊನೆಗವರು ಪಾತ್ರೆಗಳನ್ನು ಹಿಡಿದು ಪಾನಶಾಲೆಯ ಸುತ್ತ ಹಾಕಿದ್ದ ಜಗತಿಯ ಮೇಲೆ ಕುಳಿತಾಗ ಹಾಡುಗಾರನೊಬ್ಬ ಕುಣಿಯುತ್ತ ಒಳಗೆ ಬಂದ. ಅವನ ಹಿಂದೆ ನಾಲ್ಕಾರು ಜನರ ಸಣ್ಣ ಗುಂಪು,

ಹಾಡುಗಾರ ಹಾಡಿದ:

ಒಲಿದಾನ ಬಿಜ್ಜಳ ಚಾಲುಕ್ಯ ಲಕ್ಕಿಗೆ,

ಒಲಿದಾಳ ಲಕ್ಕಿ ಬಿಜ್ಜಳಗೆ!

ಹಿಟ್ಟು ಹಳಸಿತ್ತ! ನಾಯಿ ಹಸಿದಿತ್ತ!

ಚೆನ್ನಾಯ್ತು ಮೇಳ ಇಬ್ಬರಿಗೆ!

ಗುಂಪಿನಲ್ಲಿದ್ದವನೊಬ್ಬನು, "ಆ ಲಕ್ಕಿ ಹೆಸರೇನು ಹಾಡುಗಾರ?" ಎಂದ.

ಹಾಡುಗಾರ ಹಾಡಿದ:

ತೈಲವಿಲ್ಲದ ದೀಪ, ಗಂಡನಿಲ್ಲದ ತಾಪ,

ಹಾರಿಹತ್ತಿಕ್ಕಾಳ ಲಕ್ಕಿ!

ಬಿಜ್ಜಳನ ಬಿಡುತಾಳ, ತೊಡೆಯೇರಿ ಕುಳಿತಾಳ,

ಇಬ್ಬರಿಗೂ ಮಕ್ಕೀಕಾ ಮಕ್ಕಿ!

ಜನರು ಗೊಳ್ಳೆಂದು ನಕ್ಕರು; ಅವರಲ್ಲೊಬ್ಬನು ಮತ್ತೆ ಕೂಗಿದ. "ಹೆಸರು! ಹೆಸರು!" ಎಂದು. ಉಳಿದವರೂ ದನಿಗೂಡಿಸಿದರು.

ಹಾಡುಗಾರ ಹಾಡಿದ:

ಎರಡು ವರಹಕ್ಕೊಂದು ಗದ್ಯಾಣವೇಕೆಂದು

ಕೇಳುತ್ತಿದ್ದಾರೆಲ್ಲ ಕೊಸರಿ,

ಎರಡಕ್ಕ ಬೆಲೆ ಮೂರು ಲೋಕವೆಂದನುತಾಳ,

ಹೆಸರು ಕಾಮಕ್ಕ, ಅಧೀಶ್ವರಿ!

"ಕಾಮೇಶ್ವರಿ ಅಂತ ಕೂಡಿಸಿ ಹೇಳಬಾರದ, ಕಪೀಶ್ವರ?"-ಗುಂಪಿನಲ್ಲೊಬ್ಬನು ಗಟ್ಟಿಯಾಗಿ ಕೂಗಿದ. ಎಲ್ಲರೂ ದನಿಗೂಡಿಸಿದರು, " ಕಾಮೇಶ್ವರಿ! ಕಾಮೇಶ್ವರಿ!" ಎಂದು.