ಪುಟ:ಕ್ರಾಂತಿ ಕಲ್ಯಾಣ.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೧೭


ನಡುವೆ ಕಟ್ಟಿದ್ದ ಸಭಾಂಗಣದಲ್ಲಿ ಕಲಚೂರ್ಯ ರಾಜ್ಯ ಕಾಲದ ಮೇಲೆ ಹೊಸ ಬೆಳಕನ್ನು ಚೆಲ್ಲುವ ಇನ್ನೊಂದು ಸಂವಿಧಾನ ವಿರಚಿತವಾಗುತ್ತಿತ್ತು.

ಸಭಾಂಗಣದ ಮಹಾದ್ವಾರಕ್ಕೆ ಅಂದಣ ಬಂದ ಕೂಡಲೆ ಅಲ್ಲಿ ನೆರೆದಿದ್ದ ಸಾಮಂತ ಮನ್ನೆಯರು ಜಯಘೋಷ ಮಾಡುತ್ತ ಹೂವು ಗಂಧೂಡಿಗಳನ್ನೆರಚಿ ಕಾಮೇಶ್ವರಿಯನ್ನು ಸ್ವಾಗತಿಸಿದರು. ಸಾಮಂತರನ್ನು ಹಿಂದಿಟ್ಟುಕೊಂಡು ಬಿಜ್ಜಳನು, ಅಂದಣದ ಬಳಿಗೆ ಬಂದು ಕಾಮೇಶ್ವರಿ ಪ್ರೇಮಾರ್ಣವರ ಕೈಹಿಡಿದು ಕೆಳಗಿಳಿಸಿ, ಅಲಂಕೃತವಾದ ವೇದಿಕೆಗೆ ಬಿಜಯಮಾಡಿಸಿ, ಸಿದ್ದವಾಗಿದ್ದ ಭದ್ರಾಸನಗಳಲ್ಲಿ ಕುಳ್ಳಿರಿಸಿದನು. ಮೆರವಣಿಗೆಯ ಸಂಗಡಿದ್ದ ಸುಮಂಗಲಿಯರು, ಸಾಮಂತ ಮನ್ನೆಯರು, ನಾಗರಿಕ ಪ್ರಮುಖರು, ಪರಿವಾರದವರು, ವೇದಿಕೆಯ ಸುತ್ತ ಯಥೋಚಿತ ಸ್ಥಾನಗಳಲ್ಲಿ ನಿಂತರು. ಕ್ಷಣಾರ್ಧದಲ್ಲಿ ಸಮ್ಮೇಳನ ರಾಜಸಭೆಯ ರೂಪತಾಳಿತು.

ಬಿಜ್ಜಳನು ಸಭಾಸದರಿಗೆ ವಂದಿಸಿ ಗಂಭೀರವಾಣಿಯಿಂದ ಹೇಳಿದನು : “ಚಾಲುಕ್ಯ ಚಕ್ರೇಶ್ವರ ನೂರ್ಮಡಿ ತೈಲಪದೇವ ಮಹಾರಾಜರ ಪಟ್ಟಮಹಿಷಿ. ವಿದ್ಯಾಧರ ಕುಲಾವತಂಸ ಮಹಾಮಂಡಲೇಶ್ವರ ವಿಜಯಾರ್ಕ ಮಹಾರಾಜರ ಸಹೋದರಿ, ಚಾಲುಕ್ಯರಾಣಿ ಕಾಮೇಶ್ವರೀ ಮಹಾದೇವಿಯವರನ್ನೂ, ಅವರ ಪುತ್ರ ಕುಮಾರ ಪ್ರೇಮಾರ್ಣವನನ್ನೂ ಮಂಗಳವೇಡೆಗೆ ಸ್ವಾಗತಿಸುವ ಈ ಪುಣ್ಯದಿನ ಕಲಚೂರ್ಯ ಇತಿಹಾಸದ ಸುವರ್ಣದಿನವೆಂದು ನಾನು ತಿಳಿದಿದ್ದೇನೆ.

“ರಾಜ್ಯತ್ಯಾಗಮಾಡಿ ಕುಮ್ಮಟ ದುರ್ಗದಲ್ಲಿದ್ದ ತೈಲಪ ಮಹಾರಾಜರು ಸ್ವರ್ಗಸ್ಥರಾದಾಗ ಉತ್ತರಾಧಿಕಾರದ ವಿಚಾರದಲ್ಲಿ ಸ್ವಲ್ಪ ತೊಡಕಾಯಿತು. ತೈಲಪ ದೇವರು ತಮ್ಮ ಪುತ್ರ ಕೀರ್ತಿವರ್ಮನ ಸ್ಥಾನದಲ್ಲಿ ಸಹೋದರ ಜಗದೇಕಮಲ್ಲರಸರನ್ನು ಉತ್ತರಾಧಿಕಾರಿಯಾಗಿ ಅಂಗೀಕರಿಸುವಂತೆ ಕೋರಿದರು. ಮಂತ್ರಿಮಂಡಲ ಇದನ್ನು ನಿರಾಕರಿಸಿದ್ದರಿಂದ ಹೆಸರಿಗೆ ಮಾತ್ರ ಜಗದೇಕಮಲ್ಲರಸರಿಗೆ ಪಟ್ಟಕಟ್ಟಿ, ರಾಜ್ಯದ ಅಧಿಕಾರ ಸೂತ್ರಗಳನ್ನು ನನ್ನ ಕೈಯ್ಯಲ್ಲಿಟ್ಟುಕೊಳ್ಳುವುದು ಅಗತ್ಯವಾಯಿತು. ತರುವಾಯ ಕೆಲವು ದಿನಗಳಲ್ಲಿ ಕೀರ್ತಿದೇವನ ಅವಸಾನವಾಗಿ ಉತ್ತರಾಧಿಕಾರಿದ ಸಮಸ್ಯೆ ಇನ್ನೂ ತೊಡಕಾಯಿತು. ಆಗ ಕಾಮೇಶ್ವರೀದೇವಿಯವರನ್ನು ರಾಜ ಪ್ರತಿನಿಧಿಯಾಗಿ ಅಂಗೀಕರಿಸಿದ್ದರೆ ಚಾಲುಕ್ಯರಾಜ್ಯದ ಪ್ರಜೆಗಳಂತೆ ನನಗೂ ಪರಮಾನಂದವಾಗುತ್ತಿತ್ತು. ಹಾಗಾಗದಿದ್ದುದು ನಮ್ಮ ದುರಾದೃಷ್ಟ.

“ಮಹಾರಾಣಿ ಕಾಮೇಶ್ವರೀ ದೇವಿಯವರು ಕಳೆದ ಆರು ವರ್ಷಗಳಿಂದ ಕರ್ಹಾಡದಲ್ಲಿ ತಮ್ಮ ಸಹೋದರ ಮಹಾಮಂಡಲೇಶ್ವರ ವಿಜಯಾರ್ಕದೇವರಸರ