ಪುಟ:ಕ್ರಾಂತಿ ಕಲ್ಯಾಣ.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೧೯


ವಂದಿಸುತ್ತೇನೆ, ಚಾಲುಕ್ಯ ವಂಶದ ಈ ಕುಡಿಯನ್ನು ತನ್ನ ಪ್ರಾಣ ಸರ್ವಸ್ವದಂತೆ ಆರು ವರ್ಷಗಳ ಕಾಲ ರಕ್ಷಿಸಿ ಈಗ ನಿಮ್ಮ ಕೈಯಲ್ಲಿಡುತ್ತಿದ್ದೇನೆ. ಇನ್ನು ಮುಂದೆ ಅವನ ಯೋಗಕ್ಷೇಮ, ನಿಮಗೂ ಸರ್ವಾಧಿಕಾರಿ ಬಿಜ್ಜಳರಾಯರಿಗೂ ಸೇರಿದೆ. ನಾನು ನಿಮಿತ್ತ ಮಾತ್ರಳು, ನೀವೇ ಅವನ ರಕ್ಷಕರು, ಪೋಷಕರು, ಮತ್ತು ಪ್ರಜೆಗಳು. ತೈಲಪ ದೇವರ ಧೈರ್ಯ ಸಾಹಸಗಳು, ವಿಕ್ರಮಾಂಕ ಮಹಾರಾಜರ ಆಡಳಿತ ದಕ್ಷತೆ ರಾಜಿಕ ಕೌಶಲಗಳು, ಸರ್ವಜ್ಞ ಸೋಮೇಶ್ವರದೇವರ ಅಭಿಜ್ಞತೆ, -ಈ ಮೂರು ಗುಣ ಸಂಪತ್ತುಗಳು ಕುಮಾರ ಪ್ರೇಮಾರ್ಣವನಲ್ಲಿ ನೆಲೆಸಿ, ಅವನು ಚಾಲುಕ್ಯರಾಜ್ಯದ ಆದರ್ಶ ಜನಪ್ರಿಯ ಪ್ರಭುವಾಗಲೆಂಬುದೇ ಜಗದೀಶ್ವರನಲ್ಲಿ ನನ್ನ ಅನುದಿನದ ಪ್ರಾರ್ಥನೆ. ನನಗೆ ಈ ವೈಭವದ ಸ್ವಾಗತವೇರ್ಪಡಿಸಿ ನಿಮ್ಮೆಲ್ಲರ ಪರಿಚಯ ಸನ್ಮಾನ ಸಹಾಯಗಳು ದೊರಕುವಂತೆ ಮಾಡಿದುದಕ್ಕಾಗಿ ನಾನು ಮಹಾ ಮಂಡಲೇಶ್ವರ ಬಿಜ್ಜಳರಾಯರಿಗೂ, ಕುಮಾರ ಸೋಮೇಶ್ವರ ದೇವರಸರಿಗೂ ತುಂಬ ಕೃತಜ್ಞಳಾಗಿದ್ದೇನೆ,” ಎಂದು ಹೇಳಿದಳು.

ಜಯಘೋಷ ಸ್ತೋತ್ರ ಪಾಠಗಳೊಡನೆ ಸಭೆ ಮುಗಿದು ರಾಣಿ ಕಾಮೇಶ್ವರಿ ತನಗಾಗಿ ಏರ್ಪಡಿಸಿದ್ದ ಬಿಡಾರಕ್ಕೆ ಬಿಜಯಮಾಡಿದಳು.

***

ಕಾಮೇಶ್ವರಿ ಮಂಗಳವೇಡೆಗೆ ಬಂದ ಮೂರನೆಯ ದಿನ, ಕುಮಾರ ಸೋಮೇಶ್ವರನ ಪಟ್ಟಾಭಿಷೇಕಕೆ ಒಂದು ದಿನ ಮಾತ್ರ ಉಳಿದಿತ್ತು. ಅಂದು ಪೂರ್ವಾಹ್ನ ಕಾಮೇಶ್ವರಿ ಅಂತಃಗೃಹದಲ್ಲಿ ಕುಳಿತಿದ್ದಂತೆ ದಾಸಿ ಉಷಾ ಓಡಿಬಂದು ಕಾಲುಗಳ ಮೇಲೆ ಬಿದ್ದು ನೀರವವಾಗಿ ಅಳುವುದಕ್ಕೆ ಮೊದಲು ಮಾಡಿದಳು.

ಕಾಮೇಶ್ವರಿ ಅಚ್ಚರಿಯಿಂದ, “ಏನಾಯಿತು, ಉಷಾ ? ಏಕೆ ಅಳುತ್ತಿರುವೆ?” ಎಂದು ಕೇಳಿದಳು.

“ಕಳೆದುಹೋಗಿದ್ದ ನನ್ನ ತವನಿಧಿ ಪುನಃ ಕೈಸೇರಿತು, ಮಹಾರಾಣೀ !” - ಉಷಾ ತಲೆಯೆತ್ತಿ ಗದ್ದದಕಂಠದಿಂದ ಹೇಳಿದಳು.

“ಏನು ನೀನು ಹೇಳುತ್ತಿರುವುದು ? ನನಗೆ ಅರ್ಥವಾಗಲಿಲ್ಲ.”

“ಅಗ್ಗಳದೇವರು ಮಹಾರಾಣಿಯವರ ದರ್ಶನಕ್ಕಾಗಿ ಬಂದಿದ್ದಾರೆ.”

“ಈಗೆಲ್ಲಿದ್ದಾರೆ ಅವರು ?” -ಕಾಮೇಶ್ವರಿಯ ದನಿಯಲ್ಲಿ ಆತುರವಿಣುಕಿತ್ತು.

“ಹೊರಗಿನ ಅತಿಥಿಶಾಲೆಯಲ್ಲಿ”.

“ಸಂಗಡಲೇ ಏಕೆ ಕರೆತರಲಿಲ್ಲ ? ಹೋಗು. ಬೇಗ ಅವರನ್ನು ಕಳುಹಿಸು.” ಉಷಾ ಎದ್ದು ಕಣ್ಮರೆಸಿಕೊಂಡು ನವಿಲಂತೆ ನಲಿಯುತ್ತ ಹೊರಗೆ