ಪುಟ:ಕ್ರಾಂತಿ ಕಲ್ಯಾಣ.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೨೦

ಕ್ರಾಂತಿ ಕಲ್ಯಾಣ


ಹೋದಳು. ಅಗ್ಗಳ ಉಷಾವತಿಯರ ಪ್ರಣಯ ಪ್ರಸಂಗ ಮಹಾರಾಣಿಯ ಪರಿವಾರದ ಪ್ರಕಟ ರಹಸ್ಯವಾಗಿತ್ತು. ಒಂದು ರೀತಿಯಿಂದ ಕಾಮೇಶ್ವರಿಯೂ ಅದಕ್ಕೆ ನೆರವು ಕೊಟ್ಟಿದ್ದಳು.

ಕೊಂಚ ಹೊತ್ತಿನ ಮೇಲೆ ಅಗ್ಗಳನು ಅಲ್ಲಿಗೆ ಬಂದು ಮೊಣಕಾಲೂರಿ ವಂದನೆ ಸಲ್ಲಿಸಿದಾಗ, ಕಾಮೇಶ್ವರಿ-

“ದೇವಗಿರಿಯಿಂದ ನಾನು ನಿಮ್ಮನ್ನು ಕಲ್ಯಾಣಕೆ ಕಳುಹಿಸಿದಾಗ ಅದು ಅನರ್ಥದ ಕಾರಣವಾಗುವುದೆಂದು ಭಾವಿಸಿರಲಿಲ್ಲ, ಅಗ್ಗಳದೇವ. ನೀವು ಕಾಣೆಯಾದ ಸುದ್ದಿ ತಿಳಿದಕೂಡಲೆ ನಾನು ಬಿಜ್ಜಳರಾಯರಿಗೆ ಅವಸರದ ಪತ್ರ ಬರೆದೆ. ಅವರ ಉತ್ತರ ಬಂದಮೇಲೆ ಸ್ವಲ್ಪ ಸಮಾಧಾನವಾಯಿತು,” ಎಂದಳು.

ಅಗ್ಗಳ, ಕುತೂಹಲದಿಂದ "ಬಿಜ್ಜಳರಾಯರು ಏನೆಂದು ಉತ್ತರ ಕೊಟ್ಟರು?”

“ನಿಮ್ಮ ಮನೆಹೆಗ್ಗಡೆ ರಾಜಕೀಯ ಕಾರಣಗಳಿಂದ ಅನಿವಾರ್ಯ ಅಜ್ಞಾತವಾಸದಲ್ಲಿದ್ದಾರೆ. ಅವರ ಯೋಗಕ್ಷೇಮಗಳು ನಮ್ಮ ಹೊಣೆ. ಮಂಗಳವೇಡೆಗೆ ಬರುತ್ತಲೆ ಅವರನ್ನು ನೋಡುವಿರಿ,' ಎಂದು.”

“ಬಿಜ್ಜಳನ ರಾಜಕೀಯ ಚಾತುರ್ಯಕ್ಕೆ ಈ ಉತ್ತರ ಒಂದು ನಿದರ್ಶನ,”

“ಚಾತುರ್ಯವೇನಿದೆ ಇದರಲ್ಲಿ?”

“ನನ್ನನ್ನು ವಂಚನೆಯಿಂದ ಬಂಧನದಲ್ಲಿಟ್ಟು, ಅದನ್ನು ಅನಿವಾರ್ಯ ಅಜ್ಞಾತವಾಸವೆಂದು ಕರೆಯುವುದು ಚತುರತೆಯಲ್ಲವೆ?”

“ಬಿಜ್ಜಳರಾಯರು ನಿಮ್ಮನ್ನು ಬಂಧನದಲ್ಲಿಟ್ಟಿದ್ದರೆ ?” -ಅಗ್ಗಳನು ಉತ್ತರ ಕೊಡಲಿಲ್ಲ. ಸುತ್ತ ನೋಡಿ ಮೆಲುದನಿಯಲ್ಲಿ, “ಈಗ ಯಾರೂ ಇಲ್ಲಿಗೆ ಬರುವುದಿಲ್ಲವಷ್ಟೆ?” ಎಂದನು.

“ಯಾರನ್ನೂ ಒಳಗೆ ಬಿಡದಂತೆ ಭಟರಿಗೆ ಹೇಳಿ ಕಳುಹಿಸುತ್ತೇನೆ.”

“ಅದರ ಅಗತ್ಯವಿಲ್ಲ, ರಾಣೀಜಿ. ನಮ್ಮ ಕಡೆಯ ಜನರನ್ನು ಅಂತಃಗೃಹದ ಬಾಗಿಲಲ್ಲಿ ಕಾವಲಿರುವಂತೆ ಆಜ್ಞೆ ಮಾಡಿದರೆ ಸಾಕು.”

“ಏಕೆ ಹೀಗೆ ಹೇಳುತ್ತಿದ್ದೀರಿ ?”

“ಹೊರಗೆ ಕಾವಲಿರುವ ಭಟರು ಬಿಜ್ಜಳನ ಕಡೆಯವರು. ಅವರಿಗೇಕೆ ತಿಳಿಯಬೇಕು, ನಾವು ರಹಸ್ಯವಾಗಿ ಮಾತಾಡಿದೆವೆಂದು.

ಅಗ್ಗಳನ ಉದ್ದೇಶ ಆಗ ಕಾಮೇಶ್ವರಿಗೆ ಅರ್ಥವಾಯಿತು. ದಾಸಿಯನ್ನು ಕರೆದು ಆಜ್ಞೆಮಾಡಿ, “ಈಗ ನಿಮ್ಮ ಬಂಧನದ ವಿಚಾರ ಹೇಳಿರಿ,” ಎಂದಳು.

“ಇಲ್ಲಿ ನಡೆಯುವ ಮಾತುಕಥೆಗಳನ್ನು ಹೊಂಚಿ ಕೇಳುವುದು ಸಾಧ್ಯವೆ?” -ಪುನಃ ಅಗ್ಗಳನ್ನು ಪ್ರಶ್ನಿಸಿದನು.