ಪುಟ:ಕ್ರಾಂತಿ ಕಲ್ಯಾಣ.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೨೧


“ಇಷ್ಟೆಲ್ಲ ಎಚ್ಚರಿಕೆಯ ಅಗತ್ಯವೇನಿದೆ?”

“ಅದು ನಿಮಗೆ ಮುಂದೆ ಅರ್ಥವಾಗುವುದು,” - ಎಂದು ಅಗ್ಗಳನು ಬಾಗಿಲು ಜಾಲಂದ್ರಗಳನ್ನು ಪರೀಕ್ಷಿಸಿ ಪುನಃ ಕಾಮೇಶ್ವರಿಯ ಬಳಿಗೆ ಬಂದು, “ನಾವು ಸಿಂಹದ ಗುಹೆಯಲ್ಲಿರುವಾಗ ಒಂದೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದಿಡುವುದು ಅಗತ್ಯ, ರಾಣೀಜಿ,” ಎಂದನು. “ಸಿಂಹವೀಗ ನನ್ನ ಆಟಿಕೆಯ ನವಿಲಾಗಿದೆ” – ರಾಣಿಗಿರಿಯ ಅಭಿಮಾನದಿಂದ ನುಡಿದಳು ಕಾಮೇಶ್ವರಿ.

- “ಸಿಂಹದಂತಹ ಹಿಂಸಕಜಂತುವಿನ ಉಗುರು ಕೋರೆದಾಡೆಗಳೊಡನೆ ಆಟವಾಡುವುದು ಅಪಾಯಕಾರಿ, ರಾಣೀಜಿ” ಎಂದು ಅಗ್ಗಳನು, ತನ್ನನ್ನು ನೋಡಲು ನಾರಣ ಕ್ರಮಿತನು ಪಾಂಥನಿವಾಸಕ್ಕೆ ಬಂದ ಕ್ಷಣದಿಂದ ಅಂದಿನವರೆಗಿನ ಎಲ್ಲ ಘಟನೆಗಳನ್ನು ವಿವರಿಸಿ ಕೊನೆಗೆ,

“ತನ್ನ ವಿರುದ್ಧ ನಡೆಯುತ್ತಿರುವ ರಾಜ್ಯಕ್ರಾಂತಿಯ ಒಳಸಂಚಿನಲ್ಲಿ ಭಾಗವಹಿಸಿದ್ದ ಮುಖ್ಯವ್ಯಕ್ತಿಗಳು ರಾಜಗೃಹದಲ್ಲಿ ಒಂದುಗೂಡಲು ಬಿಜ್ಜಳನೇ ಸಹಾಯಕನಾದನು. ಅವನು ಆ ಕಾರ್ಯವನ್ನು ಏನಾದರೊಂದು ರಹಸ್ಯ ಉದ್ದೇಶದಿಂದ ಮಾಡಿದನೇ? ಅಥವಾ ಇವೆಲ್ಲ ಕಾಕತಾಳೀಯ ಘಟನೆಗಳೇ? ಎಂಬುದನ್ನು ತಿಳಿಯಲು ನಾನು ಇದುವರೆಗೆ ಅಸಮರ್ಥನಾಗಿದ್ದೇನೆ,” ಎಂದು ಮುಗಿಸಿದನು.

ಒಳಸಂಚಿನಲ್ಲಿ ಜಗದೇಕಮಲ್ಲನ ಸಹಾನುಭೂತಿ, ಪ್ರೇಮಾರ್ಣವನ ಬಗೆಗೆ ಅವನ ಆದರ, ಈ ವಿಚಾರಗಳನ್ನು ಕೇಳಿದಾಗ ಕಾಮೇಶ್ವರಿಗೆ ಸಮಾಧಾನವಾಯಿತು. ಆದರೆ ಗೋಮಂತಕದ ನರ್ತಕಿ ತಾನೇ ಎಂಬುದು ಜಗದೇಕಮಲ್ಲನಿಗೆ ತಿಳಿದದ್ದು ಹೇಗೆ ? ಎಂದು ಯೋಚಿಸಿ ಅವಳು,

“ನಿನ್ನೆ ಸ್ವಾಗತ ಸಭೆಯಲ್ಲಿ ನಡೆದ ವಿಚಾರಗಳು ನಿಮಗೆ ತಿಳಿದಿದೆಯೆ ?” ಎಂದಳು.

“ಸಾಮಂತನೊಬ್ಬನು ವಿವರಿಸಿದನು. ಆದರೆ ಅರೆಕೊರೆ ಪಕ್ಷಪಾತಗಳಿಂದ ಕೂಡಿದ ಆ ವಿವರಣೆ ನನ್ನನ್ನು ವಂಚಿಸಲು ಬಿಜ್ಜಳನಿಂದ ಪ್ರೇರಿತವಾಗಿರಬಹುದು. ತೊಂದರೆಯಾಗದಿದ್ದರೆ ಮಹಾರಾಣಿಯವರ ಬಾಯಿಂದ ಎಲ್ಲವನ್ನೂ ಕೇಳಬಯಸುತ್ತೇನೆ. ಅಗ್ಗಳನು ವಿನಯದಿಂದ ಬಿನ್ನವಿಸಿಕೊಂಡನು.

ಕಾಮೇಶ್ವರಿ ಎಲ್ಲವನ್ನೂ ವಿವರಿಸಿದಳು. ರಾಜಿಕದೃಷ್ಟಿಯಿಂದ ಉಪಯುಕ್ತವಾದ ಯಾವ ಅಂಶವನ್ನೂ ಬಿಡಲಿಲ್ಲ. ಮುಗಿದ ಮೇಲೆ ಅಗ್ಗಳನು, “ಈಗ ನನ್ನ ಬಂಧನದ ಉದ್ದೇಶ ಅರ್ಥವಾಗುತ್ತಿದೆ,” ಎಂದನು.

“ಆ ಉದ್ದೇಶವೇನು ?”