ಪುಟ:ಕ್ರಾಂತಿ ಕಲ್ಯಾಣ.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೨೨

ಕ್ರಾಂತಿ ಕಲ್ಯಾಣ


“ಕಲ್ಯಾಣದ ವಿಚಾರಗಳೊಂದೂ ನಿಮಗೆ ತಿಳಿಯದಂತೆ ಮುಳ್ಳುಬೇಲಿ ಹಾಕಿ, ಏನಾದರೊಂದು ಉಪಾಯದಿಂದ ನಿಮ್ಮನ್ನು ಮಂಗಳವೇಡೆಗೆ ಕರೆಸಿಕೊಳ್ಳುವುದು. ಅದಕ್ಕಾಗಿಯೇ ಬಿಜ್ಜಳನು ನಾನು ಕಲ್ಯಾಣಕ್ಕೆ ಹೋದ ದಿನವೇ ನನ್ನನ್ನು ವಂಚನೆಯಿಂದ ರಾಜಗೃಹದಲ್ಲಿ ಬಂಧಿಸಿಟ್ಟನು. ಪ್ರೇಮಾರ್ಣವನ ಉತ್ತರಾಧಿಕಾರ ಸ್ವೀಕಾರಕ್ಕೆ ಜಗದೇಕಮಲ್ಲರಸರನ್ನು ಒಪ್ಪಿಸಬೇಕೆಂಬುದು ನಿಮಿತ್ತ ಮಾತ್ರ. ಒಳಸಂಚಿನ ವಿಚಾರ ಬಿಜ್ಜಳನಿಗೆ ತಿಳಿದಿದ್ದರೆ, ರಾಜಗೃಹದ ಬದಲಾಗಿ ನಾನು ಕಾರಾಗೃಹದಲ್ಲಿರಬೇಕಾಗುತ್ತಿತ್ತು.”

“ಹಾಗಿದ್ದರೆ ಬೊಮ್ಮರಸ ಬ್ರಹ್ಮಶಿವರನ್ನು ಹಿಡಿಯಲು ಪ್ರಯತ್ನಿಸಿದ್ದೇಕೆ ?” -ಕಾಮೇಶ್ವರಿ ಸಂದೇಹದಿಂದ ಕೇಳಿದಳು.

“ಅದು ನನ್ನ ಬಂಧನವನ್ನು ರಹಸ್ಯವಾಗಿಡಲು ನಡೆದ ಪ್ರಯತ್ನ, ರಾಣೀಜಿ. ವಾಸ್ತವದಲ್ಲಿ ಬಿಜ್ಜಳನ ಬೇಹುಗಾರರು ಬೊಮ್ಮರಸನನ್ನು ಉಜ್ಜಯಿನಿಯ ಶ್ರೀಮಂತ ಹರದನೆಂದೇ ತಿಳಿದಿದ್ದಾರೆ. ಅದರಿಂದಲೆ ಬೊಮ್ಮರಸನು ಭಟರಿಂದ ಪಾರಾಗಿ ಜಂಗಮವೇಷದಿಂದ ಮಹಮನೆಯನ್ನು ಸೇರಿದನು, ಜಗದೇಕಮಲ್ಲರಸರ ಧರ್ಮೋಪದೇಶಕನಾದನು.”

ಕಾಮೇಶ್ವರಿ ಮೌನವಾಗಿ ಯೋಚಿಸುತ್ತ ಕುಳಿತಳು. ಅಗ್ಗಳನ ಸಂದೇಹ ಸಕಾರಣವೇ? ಅಥವಾ ರಾಜಗೃಹದ ಅಜ್ಞಾತವಾಸದಲ್ಲಿ ನಿರಾಶೆಯ ನಡುವೆ ಮೂಡಿದ ಅಕಾರಣ ಕಲ್ಪನೆಗಳೆ?

ತುಸುಹೊತ್ತಿನ ಮೇಲೆ ಅವಳು, “ನಿನ್ನಿನ ಸಭೆಯ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು? ಬಿಜ್ಜಳರಾಯರು ಮಾತಿನಂತೆ ನಡೆಯುವರೇ ಅಥವಾ ಮೋಸಮಾಡುವರೇ?” ಎಂದಳು.

“ಬಿಜ್ಜಳನು ಬಹಿರಂಗವಾಗಿ ಮಾಡುವ ಕಾರ್ಯಗಳಿಂದ ಅವನ ಅಂತರಂಗವನ್ನು ತಿಳಿಯುವುದು ಬ್ರಹ್ಮದೇವನಿಗೂ ಸಾಧ್ಯವಿಲ್ಲ, ರಾಣೀಜಿ. ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ದುರಾತ್ಮನಾಂ-ಎಂದು ಹೇಳುತ್ತದೆ ಸುಭಾಷಿತ. ಮನಸ್ಸಿನಲ್ಲೊಂದು, ಹೇಳುವುದೊಂದು, ಮಾಡುವುದು ಮತ್ತೊಂದು. ಬಿಜ್ಜಳನ ವಿಚಾರದಲ್ಲಿ ಇದು ಅಕ್ಷರಶಃ ಸತ್ಯ.”

"ಹಾಗಾದರೆ ನೀವು ಬಿಜ್ಜಳನನ್ನು ಹೊರಗಿನ ನೋಟಕ್ಕೆ ಸಜ್ಜನನಂತೆ ಕಾಣುವ ವಂಚಕನೆಂದು ಭಾವಿಸುತ್ತೀರಾ ?”

“ಶರಣರನ್ನು ನಿರ್ಮೂಲಗೊಳಿಸುವುದು ಬಿಜ್ಜಳನ ಉದ್ದೇಶ. ಬಸವಣ್ಣನವರ ನಿರ್ವಾಸನದ ಅನಂತರ ಈ ವಿಚಾರದಲ್ಲಿ ಯಾರಿಗೂ ಸಂದೇಹ ಉಳಿದಿಲ್ಲ.