ಪುಟ:ಕ್ರಾಂತಿ ಕಲ್ಯಾಣ.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೨೩


ಆದರೂ ಬಿಜ್ಜಳನು ಚೆನ್ನಬಸವಣ್ಣನವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡು ಶರಣರ ಹಿತಚಿಂತಕನಂತೆ ನಟಿಸುತ್ತಿದ್ದಾನೆ. ಶರಣರು ಅದನ್ನು ನಂಬಿದ್ದಾರೆ. ಇದಕ್ಕಿಂತ ದೊಡ್ಡ ವಂಚನೆ ಮತ್ತೇನಿದೆ?”

“ಶರಣರನ್ನು ವಂಚಿಸಿದರೆ ಬಿಜ್ಜಳನು ನಮ್ಮನ್ನೂ ವಂಚಿಸುವನೆಂದು ನಿಮ್ಮ ಅಭಿಪ್ರಾಯವೇ?”

“ಬಿಜ್ಜಳನು ವಂಚಿಸಲು ಹವಣಿಸಿರುವನೆಂಬುದು ಖಚಿತ. ಆದರೆ ಒಂದು ಆತಂಕವಿದೆ.”

“ಯಾವ ಆತಂಕ?”

“ಕುಮಾರ ಸೋಮೇಶ್ವರ. ಬಿಜ್ಜಳನ ಎಲ್ಲ ದೌರ್ಜನ್ಯ ವಂಚನೆಗಳಿಗೆ ಸೋಮೇಶ್ವರನು ಆತಂಕಸ್ವರೂಪವಾಗಿ ಅಡ್ಡ ನಿಂತಿದ್ದಾನೆ. ಚೆನ್ನಬಸವಣ್ಣನವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡದ್ದು, ಕುಮಾರ ಪ್ರೇಮಾರ್ಣವನ ಉತ್ತರಾಧಿಕಾರದ ಅಂಗೀಕಾರ, ಇವು ಸೋಮೇಶ್ವರನ ಇಚ್ಛೆಯಂತೆ ನಡೆಯಿತೆಂದು ಸಾಮಂತರು ತಿಳಿದಿದ್ದಾರೆ. ನಾಳೆ ಪಟ್ಟಾಭಿಷೇಕ ಸಮಯದಲ್ಲಿ ರಾಜ್ಯಭಾರ ನಿರೂಪಣ ಮಡುವನೆಂದು ಸುದ್ದಿ ಹರಡಿದೆ. ಅದಕ್ಕಾಗಿ ಶಾಸನ ನಿರೂಪಗಳು ಆಗಲೆ ರಚಿತವಾಗಿವೆಯಂತೆ.”

“ರಾಜ್ಯಭಾರ ನಿರೂಪಣವೆಂದರೆ?”

"ತನ್ನ ಎಲ್ಲ ಅಧಿಕಾರ ಪದವಿ ಗೌರವಗಳನ್ನು ಮಗನಿಗೆ ಬಿಟ್ಟು ಕೊಡುವುದು.”

ಕಾಮೇಶ್ವರಿ ಕೆಲವು ಕ್ಷಣಗಳು ಯೋಚಿಸಿ, “ಮಂಗಳವೇಡೆಗೆ ಬಂದ ದಿನವೇ ನೀವು ಇಷ್ಟೆಲ್ಲ ವಿಷಯಗಳನ್ನು ತಿಳಿದದ್ದು ಹೇಗೆ?” ಎಂದಳು.

“ಗೂಢಚಾರನಂತೆ ವಿಷಯ ಸಂಗ್ರಹಕ್ಕೆ ತೊಡಗಿದಾಗ ಮಂಗಳವೇಡೆಯ ಗೋಡೆ ಕಂಬಗಳೂ ಮಾತಾಡುತ್ತವೆ. ಕಲಚೂರ್ಯ ಸಾಮಂತ ಮನ್ನೆಯರಲ್ಲಿ ಎರಡು ದಿನಗಳಿಂದ ಈ ಸಂಬಂಧವಾದ ಚರ್ಚೆ ನಡೆಯುತ್ತಿದೆ.”

ಕಾಮೇಶ್ವರಿ ನಗೆಹಾರಿಸಿ, “ರಾಜಗೃಹದ ನಿರ್ಬಂಧದಿಂದ ನಿಮ್ಮ ರಾಜಕೀಯ ಕಲ್ಪಕತೆ ಎಚ್ಚೆತ್ತಿದೆ, ಅಗ್ಗಳದೇವ. ಗೋಡೆ ಕಂಬಗಳೂ ನಿಮ್ಮ ಸಂಗಡ ಮಾತನಾಡುತ್ತವೆ. ಆದರೆ ನಮ್ಮ ಸಾಮಾನ್ಯ ಕಿವಿಗಳೀಗೆ ಅದೊಂದೂ ಕೇಳಿಸುತ್ತಿಲ್ಲ,” ಎಂದಳು.

“ಮಹಾರಾಣಿಯವರು ಕ್ಷಮಿಸಬೇಕು. ಇದು ನಗುವ ವಿಚಾರವಲ್ಲ. ನಿಮ್ಮ ಮತ್ತು ಬಿಜ್ಜಳನ ಸಂಬಂಧವಾಗಿ ಕುಚೋದ್ಯದ ಕತೆಯೊಂದು ನಗರದಲ್ಲಿ ಹರಡಿದೆ.” -ಅಗ್ಗಳನು ಗಂಭೀರವಾಗಿ ಹೇಳಿದನು.

“ಏನು ಆ ಕಥೆ ?” -ಕಾಮೇಶ್ವರಿ ಕುತೂಹಲದಿಂದ ಕೇಳೀದಳು.