ಪುಟ:ಕ್ರಾಂತಿ ಕಲ್ಯಾಣ.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೨೫


ನನ್ನ ಮೇಲೆ ಇಂತಹ ಆಪಾದನೆಯೆ ?” -ಕಾಮೇಶ್ವರಿ ವಿಷಾದದಿಂದ ನುಡಿದಳು.

“ಕ್ಷಮಿಸಿರಿ, ಮಹಾರಾಣಿ. ಈ ವಿಚಾರವನ್ನು ನಿಮಗೆ ತಿಳಿಸುವುದು ಮನೆ ಹೆಗ್ಗಡೆಯಾದ ನನ್ನ ಕರ್ತವ್ಯವಾಗಿತ್ತು, ಅದನ್ನು ಮಾಡಿದೆ.” -ಅಗ್ಗಳನು ಕೈ ಜೋಡಿಸಿ ಕ್ಷಮೆ ಬೇಡಿದನು.

ಕೆಲವು ಕ್ಷಣಗಳ ಮೇಲೆ ಕಾಮೇಶ್ವರಿ, “ಈ ಹಾಡಿನ ವಿಚಾರ ಬಿಜ್ಜಳರಾಯರಿಗೆ ತಿಳಿದಿದೆಯೇ? ಹಾಡುಗಾರನೇನಾದನು ?” ಎಂದು ಕೇಳಿದಳು.

“ಹೀಗೆ ಬಂದರೆ ತೋರಿಸುತ್ತೇನೆ,” ಎಂದು ಅಗ್ಗಳನು ಕಾಮೇಶ್ವರಿಯನ್ನು ಅಂತಃಗೃಹದ ವಾತಾಯನಕ್ಕೆ ಕರೆದುಕೊಂಡು ಹೋದನು. ಉದ್ಯಾನದ ಹೊರಗೆ ನಗರದ ಅಂಚಿನಲ್ಲಿದ್ದ ದೊಡ್ಡ ಬಯಲು ಅಲ್ಲಿಂದ ಕಾಣುತ್ತಿತ್ತು. ಅಗ್ಗಳನು ಕೈ ತೋರಿಸಿ,

“ಆ ಬಯಲ ನಡುವೆ ಶೂಲದ ಮರದಿಂದ ನೇತಾಡುತ್ತಿರುವ ವಸ್ತು ನಿಮಗೆ ಕಾಣುತ್ತಿದೆಯೇ ? ಅದು ಆ ಹಾಡುಗಾರನ ಶವ. ಈ ದಿನ ಮುಂಜಾವಿನಲ್ಲಿ ಅವನನ್ನು ಶೂಲಕ್ಕೇರಿಸಿದರು,” ಎಂದನು.

ಅವರು ನೋಡುತ್ತಿದ್ದಂತೆ ಗಾಳಿಯಿಂದ ದೇಹ ಅಲುಗಿತು. ಸುತ್ತ ನಿಂತಿದ್ದ ಜನರ ಗುಂಪು ಶವದ ಕಡೆ ಕೈತೋರಿಸಿ ಕೇಕೆ ಹಾಕಿ ನಕ್ಕರು. ಕಾಮೇಶ್ವರಿ ಚೇಳು ಕುಟುಕಿದಂತೆ ಬೆಚ್ಚಿ ಹಿಂದಕ್ಕೆ ಸರಿದು ಅಂತಃಗೃಹದ ಸುಖಾಸನದಲ್ಲಿ ಕುಳಿತು ಕೊಂಡಳು. ತುಸುಹೊತ್ತಿನ ಮೇಲೆ ಅವಳು ನಿಟ್ಟುಸಿರಿಟ್ಟು,

"ಈ ದುರ್ಘಟನೆ ಏನೋ ಅಶುಭವನ್ನು ಸೂಚಿಸುತ್ತಿದೆ, ಅಗ್ಗಳದೇವ. ನಾನು ಮಂಗಳವೇಡೆಗೆ ಬಂದದ್ದು ಯುಕ್ತವೇ ಎಂದು ಯೋಚಿಸುತ್ತಿದ್ದೇನೆ,” ಎಂದಳು.

“ಬಿಜ್ಜಳನ ಮಾತುಗಳಲ್ಲಿ ವಿಶ್ವಾಸವಿಟ್ಟು ನೀವು ಮಂಗಳವೇಡೆಗೆ ಬರುವುದು ಜಗದೇಕಮಲ್ಲರಸರಿಗೆ ಇಷ್ಟವಿರಲಿಲ್ಲ," ಅಗ್ಗಳನು ಹೇಳಿದನು. “ಕುಮಾರ ಪ್ರೇಮಾರ್ಣವನ ಉತ್ತರಾಧಿಕಾರದ ವಿಚಾರ ಮಂತ್ರಿಮಂಡಲದ ಅನುಮೋದನೆ ಪಡೆದು ಪಟ್ಟಾಭಿಷೇಕ ಗೊತ್ತಾಗುವವರಗೆ ನೀವು ದೇವಗಿರಿಯಲ್ಲಿಯೇ ಇರಬೇಕೆಂದು ಅವರು ಹೇಳುತ್ತಿದ್ದರು. ಅದನ್ನು ನಿಮಗೆ ತಿಳಿಸಲು ಅವಸರದ ಭಟನನ್ನು ಕಳುಹಿಸುವಷ್ಟರಲ್ಲಿ ನೀವು ಮಂಗಳವೇಡೆಗೆ ಬಂದಿರಿ.”

ತನ್ನ ಕಡೆಯವರಿಂದ ಸುದ್ದಿ ಬರುವ ಮೊದಲೇ ದೇವಗಿರಿಯನ್ನು ಬಿಟ್ಟದ್ದು ಅವಿಚಾರವೆಂದು ಕಾಮೇಶ್ವರಿಗೆ ಅರಿವಾಯಿತು. “ಬಂದದ್ದಾಯಿತು. ಈಗೇನು ಮಾಡಬೇಕೆಂದು ಹೇಳುವಿರಿ ?” ಎಂದಳು.