ಪುಟ:ಕ್ರಾಂತಿ ಕಲ್ಯಾಣ.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೨೬

ಕ್ರಾಂತಿ ಕಲ್ಯಾಣ


“ಬಿಜ್ಜಳನ ಐದುಮಂದಿ ಪುತ್ರರಲ್ಲಿ ಸೋಮೇಶ್ವರ ಮತ್ತು ಮೈಲುಗಿ, ಈ ಇಬ್ಬರೇ ನೆನ್ನಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದುದು. ಸಂಕಮ, ಆಹವಮಲ್ಲ ಮತ್ತು ಜೋಗಮರು ನಗರದಲ್ಲಿದ್ದರೂ ಮೆರವಣಿಗೆಗೆ ಬರಲಿಲ್ಲ. ಅವರು ಅಂತರಂಗದಲ್ಲಿ ತಂದೆಯನ್ನು ವಿರೋಧಿಸುತ್ತಿದ್ದಾರೆ. ಬಿಜ್ಜಳನ ಸಹೋದರ ಕರ್ಣದೇವನು 'ಆ ಮಾಟಗಾತಿ ಅಣ್ಣನವರ ಬುದ್ದಿಗೆಡಿಸಿದ್ದಾಳೆ. ಅದರಿಂದಲೇ ಏನೇನೋ ನಡೆಯುತ್ತಿದೆ,' ಎಂದು ಪ್ರಕಟವಾಗಿ ಹೇಳಿದನಂತೆ. ಈ ಎಲ್ಲಾ ವಿಚಾರಗಳನ್ನು ವಿವರಿಸಿ ಕರ್ಹಾಡಕ್ಕೆ ವಿಜಯಾರ್ಕದೇವರಿಗೆ ಓಲೆ ಬರೆದಿದ್ದೇನೆ. ಅವರಸದ ಭಟನು ಹೊರಗೆ ಕಾದಿದ್ದಾನೆ. ಮಹಾರಾಣಿಯವರು ಅನುಮೋದಿಸಿದರೆ ಇಂದೇ ಕರ್ಹಾಡಕ್ಕೆ ಕಳುಹಿಸುತ್ತೇನೆ,” -ಎಂದು ಅಗ್ಗಳನ್ನು ಸಿದ್ಧವಾಗಿದ್ದ ಓಲೆಯನ್ನು ಕೈಚೀಲದಿಂದ ಹೊರಗೆ ತೆಗೆದು ಕಾಮೇಶ್ವರಿಗೆ ಕೊಟ್ಟನು.

ಕಾಮೇಶ್ವರಿ ಓಲೆಯನ್ನು ಓದಿ ಹಿಂದಿರುಗಿಸಿ, “ನೀವು ನಿಮ್ಮ ಕಾರ್ಯವನ್ನು ಚತುರತೆಯಿಂದ ನಿರ್ವಹಿಸಿದಿರಿ, ಅಗ್ಗಳದೇವ. ಆದರೆ ನಾನು.....ಬಿಜ್ಜಳನು ಆಹ್ವಾನ ಪತ್ರದಲ್ಲಿ ಬರೆದುದೆಲ್ಲವನ್ನೂ ನಾನು ನಿಜವೆಂದು ನಂಬಿದೆ. ಸಾಕಾದಷ್ಟು ಮಂದಿ ರಕ್ಷಕ ಭಟರನ್ನು ಸಂಗಡ ಕರೆದುಕೊಳ್ಳದೆ ದೇವಗಿರಿಯನ್ನು ಬಿಟ್ಟೆ ನನಗಾಗಿ ಗೊತ್ತಾದ ಈ ಬಿಡಾರದ ಸುತ್ತ ಬಿಜ್ಜಳನ ಭಟರು ಕಾವಲಿದ್ದಾರೆ. ನಾನು ವಿಪತ್ತಿನಲ್ಲಿ ಸಿಕ್ಕಿಬಿದ್ದೆನೇ ಎಂದು ಭಯವಾಗುತ್ತಿದೆ,” ಎಂದು ಹೇಳಿದಳು.

“ಭಯವಿಲ್ಲ ಮಹಾರಾಣೀ. ಬಿಜ್ಜಳನ ಎಲ್ಲ ವಂಚನೆ ದೌರ್ಜನ್ಯಗಳಿಗೆ ಕುಮಾರ ಸೋಮೇಶ್ವರನು ಆತಂಕಸ್ವರೂಪನೆಂದು ಹೇಳಿದೆನಲ್ಲವೆ. ಅವನ ಸ್ವಂತ ಸೈನ್ಯದ ಎರಡು ಸಾವಿರ ಮಂದಿ ರಾವುತರು, ಐದುಸಾವಿರ ಪದಾತಿ, ಈಗ ಮಂಗಳವೇಡೆಯಲ್ಲಿದೆ. ನಿಮ್ಮ ಮತ್ತು ಪ್ರೇಮಾರ್ಣವನ ಯೋಗಕ್ಷೇಮ ತನ್ನ ವಿಶೇಷ ಹೊಣೆಯೆಂದು ಸೋಮೇಶ್ವರನು ತಿಳಿದಿದ್ದಾನೆ. ಅವನ ಸೈನ್ಯ ಇಲ್ಲಿರುವವರೆಗೆ ನೀವು ಸುರಕ್ಷಿತರು. ಕರ್ಣದೇವನಾಗಲಿ, ಬಿಜ್ಜಳನ ಬೇರೆ ಮಕ್ಕಳಾಗಲಿ, ಅವರ ಸಾಮಂತರಾಗಲಿ, ಸ್ವಯಂ ಬಿಜ್ಜಳನೇ ಆಗಲಿ, ಸೋಮೇಶ್ವರನ ವಿರುದ್ದ ನಿಮಗೆ ಅಹಿತವೆಸಗಲು ಅಸಮರ್ಥರು."

ಅಗ್ಗಳನ ಭರವಸೆಯ ನುಡಿಗಳಿಂದ ಕಾಮೇಶ್ವರಿಗೆ ಸಮಾಧಾನವಾಯಿತು. “ನಿಮ್ಮ ಬಿಡಾರವೆಲ್ಲಿದೆ? ನೀವು ಸಮೀಪದಲ್ಲಿದ್ದರೆ ನನಗೆ ಸಾವಿರ ಸೈನ್ಯವಿದ್ದಷ್ಟು ಧೈರ್ಯ”, ಎಂದಳು.

“ನಿಮ್ಮ ಮನೆಹೆಗ್ಗಡೆಯಾದ ನನಗೆ ಇಲ್ಲಿಯೇ ಸ್ಥಳಮಾಡುವುದು ಉಚಿತವಾಗಿತ್ತು. ಆದರೆ ತಿಳಿದೋ ತಿಳಿಯದೆಯೋ ಬಿಜ್ಜಳನ ಕಾರ್ಯಕರ್ತರು