ಪುಟ:ಕ್ರಾಂತಿ ಕಲ್ಯಾಣ.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧ ರಾಜಗೃಹದ ರಹಸ್ಯ

ಬಿಜ್ಜಳರಾಯನ ಧರ್ಮಾಧಿಕರಣದ ವಿಚಾರಣೆ ಮುಗಿದು, ನಿರ್ವಾಸನದ ಆಜ್ಞೆ ಪ್ರಚಾರವಾಗಿ, ಬಸವಣ್ಣನವರು ಕಲ್ಯಾಣವನ್ನು ಬಿಟ್ಟ ಆ ಚರಿತ್ರಾರ್ಹವಾದ ದಿನ ಸಂಜೆ, ಆರು ಮಂದಿ ರಾವುತ ಪರಿವಾರದಿಂದ ಕೂಡಿದ ಒಂದು ದೊಡ್ಡ ರಥ ನಗರದ ಸದಾಚಾರಿ ಮಠದ ಪಾರ್ಶ್ವದಲ್ಲಿದ್ದ ಪಾಂಥ ನಿವಾಸದ ಎದುರಿಗೆ ನಿಂತಿತು. ರಾಜ ಪುರೋಹಿತ ನಾರಣಕ್ರಮಿತನು ರಥದಿಂದ ಇಳಿದು ನಿವಾಸದ ಉಪ್ಪರಿಗೆಯ ಅಲಂಕೃತವಾದ ಮೊಗಸಾಲೆಯತ್ತ ನೋಡುತ್ತ ನಿಂತನು.

ಹಜಾರದಿಂದ ಇದನ್ನು ಗಮನಿಸಿದ ನಿವಾಸದ ಕಾರ್ಯಕರ್ತನು ಅವಸರದಿಂದ ಹೊರಗೆ ಬಂದು, "ಒಡೆಯರು ಒಳಗೆ ದಯಮಾಡಿಸಬೇಕು," ಎಂದು ಬಿನ್ನವಿಸಿ ಕೊಂಡನು.

ಹಿಂದಿನ ದಿನ ಧರ್ಮಾಧಿಕರಣದಲ್ಲಿ ನಡೆದ ಅದ್ಭುತ ಘಟನೆಗಳ ಫಲವಾಗಿ ಕ್ರಮಿತನ ಅಕೀರ್ತಿ ಕುಪ್ರತಿಷ್ಠೆಗಳು ಶಿಖರಕ್ಕೆ ಏರಿದ್ದವು. ಸುಸಜ್ಜಿತವಾದ ರಥ, ಅಂಗ ರಕ್ಷಕ ರಾವುತ ಮತ್ತು ಸೈನ್ಯದಳಗಳೂ, ಕ್ರಮಿತನ ಉಪಯೋಗಕ್ಕಾಗಿ ಯಾವಾಗಲೂ ಸಿದ್ಧವಾಗಿರತಕ್ಕದ್ದೆಂದು ಬಿಜ್ಜಳನು ಆಜ್ಞೆ ಮಾಡಿದ್ದನು. ಕಲ್ಯಾಣದ ಶ್ರೀಮಂತ ಸಾಮಂತ ನಾಗರಿಕರಲ್ಲಿ ವಿಚಾರಣೆಯ ಉತ್ರ್ಪೇಕ್ಷಿತ ವರದಿಗಳೂ ಹರಡಿ ಆಶ್ಚರ್ಯ ಕುತೂಹಲಗಳಿಗೆ ಕಾರಣವಾಗಿತ್ತು. ಒಂದೇ ದಿನದಲ್ಲಿ ಬಸವಣ್ಣನವರಂತಹ ಮಾಹಿಮಾನ್ವಿತ ದಂಡನಾಯಕರ ನಿರ್ವಾಸನ, ಮಧುವರಸರಂತಹ ದಕ್ಷಮಂತ್ರಿಯ ಪದಚ್ಯುತಿ, ಈ ಎರಡು ಕಾರ್ಯಗಳನ್ನು ಸಾಧಿಸಬಲ್ಲ ವ್ಯಕ್ತಿ, ಸರ್ವಾಧಿಕಾರಿ ಬಿಜ್ಜಳರಾಯರ ಪರಿಪೂರ್ಣ ಅನುಗ್ರಹಕ್ಕೆ ಪಾತ್ರನೆಂದು ಜನರು ತಿಳಿದರು.

ತನ್ನ ಬಗೆಗೆ ಕಲ್ಯಾಣದಲ್ಲಿ ತಲೆದೋರಿದ ಘನತೆ ಗೌರವಗಳ ಮೂಲವನ್ನು ಅರಿತಿದ್ದ ಕ್ರಮಿತನು ಕಾರ್ಯಕರ್ತನ ವಿನಯದ ನುಡಿಗಳನ್ನು ಉಪೇಕ್ಷಿಸಿ, ಅಧಿಕಾರ ದರ್ಪದ ಬಿರುದನಿಯಿಂದ, "ಇಂದು ನಗರಕ್ಕೆ ಬಂದ ದೇವಗಿರಿಯ ಹರದರು ಇಲ್ಲಿ ಬಿಡಾರ ಮಾಡಿರುವರೆ?" ಎಂದು ಕೇಳಿದನು.

"ಅವರು ಇಲ್ಲಿಯೇ ಇದ್ದಾರೆ, ಒಡೆಯರೆ" ಕಾರ್ಯಕರ್ತನೆಂದನು: