ಪುಟ:ಕ್ರಾಂತಿ ಕಲ್ಯಾಣ.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೨೮

ಕ್ರಾಂತಿ ಕಲ್ಯಾಣ


ಮಂತ್ರಪೂತವಾದ ಪವಿತ್ರ ಜಲಗಳ ಅಭಿಷೇಕದಿಂದ ಸೋಮೇಶ್ವರ ಸುಂದರವಲ್ಲಿಯರ ಮಸ್ತಕಗಳು ತೊಯ್ದವು. ಪುರೋಹಿತರು ಆಶೀರ್ವಚನಗಳನ್ನು ನುಡಿದರು. ವಂದಿ ಮಾಗಧರು ಕಲಚೂರ್ಯ ವಂಶದ ವಿಖ್ಯಾತ ಅರಸರ ಪ್ರಶಂಸೆಯ ಪದ್ಯಗಳನ್ನು ಪಠಿಸಿದರು. ಸ್ತುತಿ ಪಾಠಕರು ಹೊಸ ಮಂಡಲಾಧೀಶ್ವರನ ಮತ್ತು ಅವನ ಪತ್ನಿಯ ಮೇಲೆ ರಚಿಸಿದ್ದ ಸ್ತುತಿಗೀತಗಳನ್ನು ಹಾಡಿದರು. ಬಡಿವಾರದವರು ಸೋಮೇಶ್ವರರನ ಶೌರ್ಯ ಪ್ರತಾಪ ಬಿರುದಾವಳಿಗಳನ್ನು ಉಗ್ಗಡಿಸಿದರು.

ಈ ಕಾರ್ಯಗಳು ನಡೆಯುತ್ತಿದ್ದಂತೆ ಸೋಮೇಶ್ವರ ಸುಂದರವಲ್ಲಿಯರು ಅಭಿಷೇಕ ಪೀಠದಿಂದೆದ್ದು ಅಂತಃಗೃಹಕ್ಕೆ ಹೋಗಿ ರಾಜರಾಣಿಯರಿಗೆ ಉಚಿತವಾದ ವಸ್ತ್ರಾಭರಣಗಳಿಂದ ಅಲಂಕೃತರಾಗಿ ಪುನಃ ಓಲಗಶಾಲೆಗೆ ಬಂದರು. ಬೆಳ್ಳಿಯ ಕೋಲುಗಳನ್ನು ಹಿಡಿದ ಕಂಚುಕಿ ಪ್ರತಿಹಾರಿಗಳು ಅವರನ್ನು ಮೊದಲೆ ಸಿದ್ಧವಾಗಿದ್ದ ಶ್ವೇತಛತ್ರಶೋಭಿತವಾದ ಭದ್ರಾಸನದಲ್ಲಿ ಕುಳ್ಳಿರಿಸಿದರು.

ಆಗ ಬಿಜ್ಜಳನು ಮಹಾಮಂಡಲೇಶ್ವರನ ರಾಜಲಾಂಛನಗಳಾದ ರತ್ನಕಂಠಿಕೆ, ಮುದ್ರೆಯುಂಗುರ, ವಜ್ರಕೆತ್ತಿದ ಹಿಡಿ ಓರೆಗಳಿಂದ ಥಳಥಳ ಹೊಳೆಯುತ್ತಿದ್ದ ಕಿಗ್ಗಠಾರಿ, ಪೇರ್ಮಾಡಿ ನಾಮಾಂಕಿತವಾದ ಬಿಚ್ಚುಗತ್ತಿ, ನವರತ್ನಗಳ ಸಾಲುದಂಡೆಗಳಿಂದ ಬೆಳಗುವ ಗೊಮ್ಮಟಾಕಾರದ ರಾಜಮಕುಟ, ಇವುಗಳನ್ನು ಸ್ವಹಸ್ತದಿಂದ ಸೋಮೇಶ್ವರನಿಗೆ ಅರ್ಪಿಸಿದನು, ಮಂತ್ರಿ ಸಾಮಂತಮನ್ನೆಯರು ಮುಜುರೆಮಾಡಿ ಕಪ್ಪಕಾಣಿಕೆಗಳನ್ನು ಸಲ್ಲಿಸಿದರು. ಬಿಜ್ಜಳನ ರಾಜ್ಯಭಾರ ನಿರೂಪಣ ಸಾಂಗವಾಗಿ ನೆರವೇರಿತು.

ಆ ದಿನ ಸಂಜೆ ಅರಮನೆಯ ಬಹಿರುದ್ಯಾನದಲ್ಲಿ ರಚಿತವಾಗಿದ್ದ ಸಭಾಮಂಟಪದಲ್ಲಿ ನೂತನ ಮಹಾಮಂಡಲೇಶ್ವರ ಸೋಮೇಶ್ವರನೂ ಅವನ ಪಟ್ಟಮಹಿಷಿ ಸಾವಳ ದೇವಿ ಎಂಬ ಹೆಸರಿಂದ ಕರೆಯಲ್ಪಡುತ್ತಿದ್ದ ಸುಂದರವಲ್ಲಿಯೂ ಮಂಡಲದ ಪ್ರಜೆಗಳಿಗೆ ದರ್ಶನಕೊಟ್ಟರು. ಆ ಸಂದರ್ಭದಲ್ಲಿ ಪ್ರಜಾಸಮುದಾಯದ ಸಮಾರಾಧನೆಗಾಗಿ ಬಿಜ್ಜಳನು ಏರ್ಪಡಿಸಿದ್ದ ಸಂಗೀತ, ನರ್ತನ, ಯಕ್ಷಗಾನ, ಬಯಲಾಟ, ದೊಡ್ಡಾಟ, ಗಾರುಡಿ, ಯಕ್ಷಿಣಿ, ಬೊಂಬೆಕುಣಿತ ಇತ್ಯಾದಿ ವಿನೋದಗಳಲ್ಲಿ ಪ್ರಾಚೀನ ಶೌತ ಸೂತ್ರಗಳಲ್ಲಿ ವರ್ಣಿಸಲ್ಪಟ್ಟಂತೆ ವಿಧ್ಯುಕ್ತವಾಗಿ ನಡೆದ 'ಮಹಾವ್ರತ'ವೆಂಬ ಹಾಸ್ಯ ರೂಪಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಸಂದರ್ಭದಲ್ಲಿ ದೇವಗಿರಿಯ ಯಾದವ ಅರಸರ ಪತ್ರಲೇಖಕನಾಗಿ ಮಂಗಳವೇಡೆಯಲ್ಲಿದ್ದ ರಾಜದೂತನು ತನ್ನ ಪ್ರಭುವಿಗೆ ಬರೆದ ಒಂದು ಪತ್ರದಲ್ಲಿ ಈ ಪ್ರದರ್ಶನದ ಸ್ವಾರಸ್ಯವಾದ ವಿವರಣೆ ದೊರಕುತ್ತದೆ. ಭಾಷೆಯನ್ನು ನವೀಕರಿಸಿ ಪತ್ರದ ಕೆಲವು ಭಾಗಗಳನ್ನು ಮುಂದೆ ಉಲ್ಲೇಖೀಸಿದೆ :