ಪುಟ:ಕ್ರಾಂತಿ ಕಲ್ಯಾಣ.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೩೦

ಕ್ರಾಂತಿ ಕಲ್ಯಾಣ


ಸರಿಯುತ್ತಿದ್ದಂತೆ ಈ ಮೇಳ ಚಕ್ರಾಕಾರವಾಗಿ ರಂಗದಮೇಲೆ ಕುಳಿತಿರುವುದನ್ನು ಕಾಣುತ್ತೇವೆ.

“ಉದ್ಗಾತೃವು ಮೆತ್ತನೆಯ ದಿಂಬುಗಳ ಸುಖಾಸನದಲ್ಲಿ, ಅವನ ಬಲದ ಕುಶಾಸನದ ಮೇಲೆ ಪ್ರಸ್ತೋತೃ, ರಂಗದ ಒಂದು ಕಡೆ ಮರಕ್ಕೆ ಕಟ್ಟಿದ ತೂಗು ಮಂಚದಲ್ಲಿ ಹೋತೃ, ರಂಗದ ನಡುವೆ ಎತ್ತರವಾದ ಅಟ್ಟಣೆಯ ಮೇಲೆ ಅಧ್ವರ್ಯ ಅಟ್ಟಣೆಯಿಕ್ಕೆಳಗಳಲ್ಲಿ ಕುಶಾಸನಗಳ ಮೇಲೆ ಸಭಾಪತಿ ಬ್ರಹ್ಮ ಮತ್ತು ಬ್ರಾಹ್ಮಣಾ ಶಂಸಿ, ಇವರೆಲ್ಲರ ಹಿಂದೆ ಬಣ್ಣಬಣ್ಣದ ವಸ್ತ್ರಾಭರಣಗಳಿಂದ ಅಲಂಕೃತವಾಗಿ ಚಕ್ರಾಕಾರವಾಗಿ ಕುಳಿತ ಬ್ರಾಹ್ಮಣಿಯರ ತಂಡ, ರಂಗದ ನಡುವೆ ಅಟ್ಟಣೆಯ ಕೆಳಗಿರುವ ಮಾರ್ಜಾಲೀಯವೆಂಬ ಮೋಟುಗುಡಿಸಲಿನ ಎರಡು ಕಡೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದು ರಂಗದ ಯೋಜನೆ.

“ಇವರಲ್ಲಿ ಅಧ್ವರ್ಯು ಮತ್ತು ಬ್ರಹ್ಮ ಇವರ ಹೊರತಾಗಿ ಉಳಿದವರೆಲ್ಲರ ಕೈಯಲ್ಲಿ ಒಂದೊಂದು ವಾದ್ಯ. ಅವುಗಳ ಹೆಸರುಗಳನ್ನು ಮುಂದೆ ಕೊಟ್ಟದೆ. ಖಂಡವೀಣೆ, ತಂಬಲುವೀಣೆ, ತಾಲುಕವೀಣೆ-ಇವು ವೀಣೆಯ ವಿಭೇದಗಳು. ಪಿಚ್ಚೋಠ, ಕರ್ಕರೀಕ, ಕಪಿಶಿರ್ಷಿನಿ, ಇವು ಊದುವ ವಾದ್ಯಗಳು. ಆಘಾಟಿ, ಅವಘಟರಿಕಾ, ಮೃದಂಗ ಇವು ಮದ್ದಲೆಗಳು. ಹಳ್ಳತೋಡಿ ಅದರ ಮೇಲೆ ಚರ್ಮವನ್ನು ಬಿಗಿಯಾಗಿ ಎಳೆದು ಕಟ್ಟಿದ ಭೂಮಿದುಂದುಭಿ ಎಂಬ ನಗಾರಿ ಬ್ರಾಹ್ಮಣಾಶಂಸಿಯ ಮುಂದಿರುತ್ತದೆ. ಬ್ರಾಹ್ಮಣಿಯರ ಗೀತೆ ನಡೆಯುವಾಗ ಎಲ್ಲರೂ ಒಟ್ಟಿಗೆ, ಉಳಿದ ಸಮಯಗಳಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಕೆಲವರು ವಾದ್ಯ ನುಡಿಸುತ್ತಾರೆ.

“ಉದ್ಗಾತೃ, ಪ್ರಸ್ತೋತೃಗಳ ಸಾಮಗಾನದಿಂದ ರೂಪಕ ಆರಂಭವಾಗುತ್ತದೆ. ನಾರಣಕ್ರಮಿತರ ಯಜ್ಞಶಾಲೆಯಲ್ಲಿ ಪ್ರಭುಗಳಿಗೆ ಸಾಮಗಾನದ ಪರಿಚಯವಾಗಿರುವುದರಿಂದ ಅದನ್ನು ಪುನಃ ಇಲ್ಲಿ ವಿವರಿಸುವ ಅಗತ್ಯವಿರುವುದಿಲ್ಲ. ಮಂದ್ರದಲ್ಲಿ ಪ್ರಾರಂಭವಾಗುವ ಈ 'ಭುಭುಭೂ'ಗಾನ ತಾರಕಕ್ಕೇರಿ ತೀವ್ರಗತಿಯಲ್ಲಿ ಮೊಳಗುತ್ತಿದ್ದಂತೆ ಬ್ರಾಹ್ಮಣಿಯರು ಮೊದಲ ದೃಶ್ಯದ ವಸ್ತುವನ್ನು ಸೂಚಿಸುವ ಗಾಥೆಗಳನ್ನು ಹಾಡುತ್ತಾರೆ.

“ಗುರುಕುಲದ ವಿದ್ಯಾರ್ಥಿಯೊಬ್ಬನು ಪ್ರೇಮಪಾಠದ ಪ್ರಥಮ ಶಿಕ್ಷಣಕ್ಕಾಗಿ ವಯಸ್ಸಿನಲ್ಲಿ ತನಗಿಂತ ಹಿರಿಯಳಾದ ಗಣಿಕೆಯೊಬ್ಬಳ ಬಳಿಗೆ ಹೋದಾಗ ಅವರ ನಡುವೆ ನಡೆಯುವ ವಿನೋದ ಸಂಭಾಷಣೆಯೇ ಈ ದೃಶ್ಯದ ಕಥಾವಸ್ತು. ಛಾಂದಸನಾದ ಪತಿಯನ್ನು ಬಿಟ್ಟು ದೂರದ ಯಾವುದೋ ಗ್ರಾಮದಿಂದ ಮಂಗಳವೇಡೆಗೆ ಬಂದಿದ್ದ ಪಂಡಿತ ಪತ್ನಿಯೊಬ್ಬಳು ಗಣಿಕೆಯ ಪಾತ್ರವಹಿಸಿದ್ದಳು.