ಪುಟ:ಕ್ರಾಂತಿ ಕಲ್ಯಾಣ.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೩೧


ನಗರದಲ್ಲಿ ಮೋಜುಗಾರನೆಂದು ಹೆಸರಾಗಿದ್ದ ಉಪೇಂದ್ರ ಮಾಘ ವಿದ್ಯಾರ್ಥಿಯ ಪಾತ್ರದಲ್ಲಿ. ಇವರ ಸಂಭಾಷಣೆ ಸಂಸ್ಕೃತ ಪ್ರಾಕೃತ ದೇಶೀಮಿಶ‍್ರಿತವಾದ ಒಂದು ವಿಚಿತ್ರಭಾಷೆಯಲ್ಲಿ ನಡೆಯಿತು. ಜನರಿಗೆ ಅದು ಅರ್ಥವಾಗದಿದ್ದರೂ, ಹೋತೃ ಅಧ್ವರ್ಯುಗಳ ಅಟ್ಟಹಾಸ, ಹಿಮ್ಮೇಳದ ಬ್ರಾಹ್ಮಣಿಯರ ವಿಕೃತ ಚೇಷ್ಟೆಗಳು, ಪಾತ್ರಧಾರಿಗಳ ಹಾವಭಾವ ವಿಲಾಸ, ಇವುಗಳ ಸಹಾಯದಿಂದ ಸಂಭಾಷಣೆಯ ಅಶ್ಲೀಲ ಕಲಾಸ್ಥಾನಗಳನ್ನು ಜನರು ಸುಲಭವಾಗಿ ಗುರುತಿಸಬಹುದಾಗಿತ್ತು.

“ದೃಶ್ಯಾಂತ್ಯದಲ್ಲಿ ವಾದ್ಯಘೋಷ, ಹಿಮ್ಮೇಳದ ಗೀತೆ, ಆಮೇಲೆ ಎರಡನೆಯ ದೃಶ್ಯ. ಅಂಗೈ ಅಗಲದ ಬಿಳಿಯ ಚರ್ಮದ ತುಂಡಿಗಾಗಿ ಹೋರಾಡುತ್ತ ತರುಣರಿಬ್ಬರು ಪ್ರವೇಶಿಸುವರು. ಅವರಲ್ಲಿ ಒಬ್ಬ ಆರ್ಯ ಅಥವಾ ಬಿಳಿಯ ಜನಾಂಗಕ್ಕೆ ಸೇರಿದವನು. ಇನ್ನೊಬ್ಬನು ಅನಾರ್ಯ ಅಥವಾ ಶೂದ್ರ. ಅನಾಗರಿಕನಾದ ಶೂದ್ರನಿಗೆ ಚರ್ಮದ ಉಡಿಗೆ, ದೊಣ್ಣೆ, ಕಲ್ಲು, ಗುಂಡುಗಳು ಆಯುಧಗಳು. ಕಬ್ಬಿಣದ ಕವಚತೊಟ್ಟು ಕೈಯಲ್ಲಿ ಕತ್ತಿ ಭರ್ಜಿಗಳನ್ನು ಹಿಡಿದ ಆರ್ಯನು ಬೆಕ್ಕು ಇಲಿಯೊಡನೆ ಚೆಲ್ಲಾಟವಾಡುವಂತೆ ಶೂದ್ರನನ್ನು ಕೊಂಚಹೊತ್ತು ಆಡಿಸಿ, ಜನರನ್ನು ನಗಿಸಿ, ಕೊನೆಗೆ ಭರ್ಜಿ ಇರಿದು ಕೊಲ್ಲುತ್ತಾನೆ. ವಿಜಯ ಧನವಾಗಿ ತನಗೆ ಲಭಿಸಿದ ಚರ್ಮದ ತುಂಡು ಹೋರಾಟದಲ್ಲಿ ಚಿಂದಿಚಿಂದಿಯಾಗಿರುವುದನ್ನು ಕಂಡಾಗ ಆರ್ಯವೀರನಿಗಾಗುವ ದುಃಖ ಪ್ರದರ್ಶನವನ್ನು ನೋಡಿಯೇ ಆನಂದಿಸಬೇಕು. ಅಚ್ಯುತ ಕ್ರಮಿತನೂ ವಿಶ್ವಬಂಧು ಭಾರವಿಯೂ ಅನುಕ್ರಮವಾಗಿ ಈ ಪಾತ್ರಗಳನ್ನು ದಕ್ಷತೆಯಿಂದ ನಿರ್ವಹಿಸಿ ಎಲ್ಲರ ಮೆಚ್ಚುಗೆ ಪಡೆದರು.

“ಮತ್ತೆ ವಾದ್ಯಘೋಷ, ಬ್ರಾಹ್ಮಣಿಯರ ಗೀತೆ. ಆಮೇಲೆ ಮೂರನೆಯ ದೃಶ್ಯ ಒಬ್ಬ ವಿಪ್ರೋತ್ತಮನಿಗೂ ಇನ್ನೊಬ್ಬ ಶೂದ್ರನಿಗೂ ಯಜ್ಞಯಾಗಗಳ ವಿಚಾರವಾಗಿ ನಡೆಯುವ ಸಂವಾದವೇ ಈ ದೃಶ್ಯದ ವಸ್ತು. 'ದುಡಿಮೆಯಿಂದ ಗಳಿಸಿದ ಹಣವನ್ನು ಪೋಲುಮಾಡುವುದು ಯಜ್ಞಯಾಗಗಳ ಉದ್ದೇಶ. ತಿಂದು ತೇಗಿ ದಕ್ಷಿಣೆಗೆ ಕೈಯೊಡ್ಡುವ ಋತ್ವಿಕ್ಕುಗಳ ಹೊರತಾಗಿ ಮತ್ತಾವ ದೇವತೆಗಳೂ ಅವುಗಳಿಂದ ಸಂತುಷ್ಟರಾಗುವುದಿಲ್ಲ. ಅಗ್ರವರ್ಣದವರು ಉಳಿದ ಮೂರು ವರ್ಣಗಳವರ ಸಿರಿ ಸಂಪತ್ತುಗಳನ್ನು ಅಪಹರಿಸಲು ಹೂಡಿದ ತಂತ್ರವೇ ಯಜ್ಞಯಾಗಗಳು,' ಎಂದು ಶೂದ್ರನ ವಾದ. 'ಯಜ್ಞಯಾಗಗಳಿಂದ ಜಗತ್ತು ಉಳಿದಿದೆ, ಸೂರ ಚಂದ್ರರು ಗಗನದಲ್ಲಿ ಚಲಿಸುತ್ತಿದ್ದಾರೆ, ಋತುಧರ್ಮ ನಡೆಯುತ್ತಿದೆ. ಯಜ್ಞಯಾಗಗಳು ನಿಂತರೆ ಇಂದ್ರನು ಮಳೆಗರೆಯುವುದಿಲ್ಲ. ಸಸ್ಯಗಳು ಬೆಳೆದು ಫಲಕೊಡುವುದಿಲ್ಲ. ಉದಯಾಸ್ತಗಳು ಸ್ತಂಭಿಸಿ ಜಗತ್ತಿನಲ್ಲಿ ಕತ್ತಲೆ ಹರಡುತ್ತದೆ. ಪ್ರಳಯವಾಗುತ್ತದೆ,' ಎಂದು ವಿಪ್ರನು ಉತ್ತರಕೊಡುತ್ತಾನೆ.