ಪುಟ:ಕ್ರಾಂತಿ ಕಲ್ಯಾಣ.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೩೨

ಕ್ರಾಂತಿ ಕಲ್ಯಾಣ


“ಈ ವಿವಾದದಲ್ಲಿ ಸಭಾಪತಿ ಬ್ರಹ್ಮನು ಶೂದ್ರನ ಕಡೆಗೂ, ಬ್ರಾಹ್ಮಣಾಶಂಸಿಯು ವಿಪ್ರನ ಕಡೆಗೂ ಸೇರುತ್ತಾರೆ. ಮೇಲಿಂದ ಮೇಲೆ ಭಲೆ! ಭಲೆ! ಭೇಷ್! ಭೇಷ್! ಎಂದು ಅಬ್ಬರಿಸಿ ತಮ್ಮ ಕಡೆಯವನಿಗೆ ಇಬ್ಬರು ಪ್ರೋತ್ಸಾಹ ಕೊಡುತ್ತಾರೆ. ವಿವಾದ ತುಟಿಗಳನ್ನು ದಾಟಿ ಕೈ ಕೈ ಮಸಗುವಂತಾದಾಗ ಅಟ್ಟಣೆಯ ಮೇಲೆ ಕುಳಿತು ಎಲ್ಲವನ್ನೂ ಕೇಳುತ್ತಿರುವ ಹೋತೃ ತನ್ನ ಕೈಯಲ್ಲಿರುವ ಬಾರುಗೋಲಿನಿಂದ ಇಬ್ಬರನ್ನೂ ಥಳಿಸಿ ರಂಗದಿಂದ ಓಡಿಸುತ್ತಾನೆ.

“ಅವರು ಓಡುತ್ತಿದ್ದಂತೆ ಕ್ಷತ್ರಿಯರಿಂದ ತುಂಬಿದ ಎರಡು ರಥಗಳು ಎರಡು ಕಡೆಗಳಿಂದ ರಂಗಕ್ಕೆ ಬರುತ್ತವೆ. ಇಬ್ಬರೂ ಆ ಕ್ಷತ್ರಿಯರಿಗೆ ಶರಣಾಗತರಾಗುತ್ತಾರೆ. ರಥದಲ್ಲಿ ತಂದಿದ್ದ ಚರ್ಮದ ಗುರಿಹಲಿಗೆಯನ್ನು ಶರಣಾಗತರಾದ ಆ ಇಬ್ಬರ ನಡುವೆ ನಿಲ್ಲಿಸಿ, ಕ್ಷತ್ರಿಯರು ಬಾಣ ಹೊಡೆಯುವ ಸ್ಪರ್ಧೆಗೆ ಪ್ರಾರಂಭಿಸುತ್ತಾರೆ. ಬಾಣ ಗುರಿಯನ್ನು ಮುಟ್ಟಿ ಕೆಳಗೆ ಬೀಳಬಾರದು. ಬಾಣದ ಅಲಗು ಗುರಿಗೆ ತಾಕಿ ಚರ್ಮ ಹರಿಯದಂತೆ ಅಲ್ಲಿಯೇ ನಿಲ್ಲಬೇಕು, ಎಂಬುದು ಸ್ಪರ್ಧೆಯ ನಿಯಮ. ಎಲ್ಲರೂ ಸ್ಪರ್ಧಿಸುತ್ತಾರೆ. ಯಾರೂ ಗೆಲ್ಲುವುದಿಲ್ಲ. ಪರಿಚಯವಿಲ್ಲದ ಕ್ಷತ್ರಿಯನೊಬ್ಬನು ನರ್ತಿಸುತ್ತ ರಂಗವನ್ನು ಪ್ರವೇಶಿಸಿ ಮೊದಲ ಬಾಣಕ್ಕೆ ಗುರಿಯನ್ನು ಭೇದಿಸುತ್ತಾನೆ. ಎಲ್ಲರೂ ಅವನನ್ನು ನಾಯಕನಾಗಿ ಆರಿಸುತ್ತಾರೆ.

“ಸ್ಪರ್ಧೆ ನಡೆಯುವಾಗ ಗುರಿಹಲಿಗೆಯನ್ನು ಹಿಡಿದ ವಿಪ್ರ ಶೂದ್ರನ ಪ್ರಾಣ ಭೀತಿ, ಆರ್ತಸ್ವರ, ಹೋತೃ ಅಧ್ವರ್ಯುಗಳ ಅಟ್ಟಹಾಸ, ಬ್ರಹ್ಮ ಬ್ರಾಹ್ಮಣಾಶಂಸಿಗಳ ವಿಕಾರ ಚೇಷ್ಟೆಗಳು, ಈ ದೃಶ್ಯದಲ್ಲಿ ಪರಿಹಾಸ ಸ್ಥಾನಗಳು.

“ಕ್ಷತ್ರಿಯ ವೀರರು ಹೊಸ ನಾಯಕನನ್ನು ಸುತ್ತುಗಟ್ಟಿ ಕುಣಿಯುತ್ತಿದ್ದಂತೆ ಪೂರ್ಣಕುಂಭಗಳನ್ನು ಹೊತ್ತ ಎಂಟು ಮಂದಿ ದಾಸಿಯರು ರಂಗವನ್ನು ಪ್ರವೇಶಿಸಿ ಕುಣಿಯುತ್ತ ರಂಗದ ಎಂಟು ದಿಕ್ಕುಗಳಲ್ಲಿ ಕುಂಭಗಳನ್ನಿಡತ್ತಾರೆ. ವಾದ್ಯಘೋಷ ಹಿಮ್ಮೇಳದ ಗೀತಗಳೊಡನೆ ರೂಪಕ ಮುಗಿಯುತ್ತದೆ.

“ಸಂಜೆ ನಾರಣಕ್ರಮಿತರನ್ನು ಕಂಡು ಅವರ ಪ್ರಯೋಗ ಜನಪ್ರಿಯವಾದುದಕ್ಕಾಗಿ ಅಭಿನಂದಿಸಿ, ನಿಮ್ಮ ರೂಪಕದ ಸಂಕೇತಾರ್ಥವೇನು?” ಎಂದು ಕೇಳಿದೆ. ಅವರು ನಕ್ಕು,

ಆಪಸ್ತಂಭೀಯ ಶೌತಸೂತ್ರದಲ್ಲಿ ಮಹಾವ್ರತದ ವಿವರಣೆಯಿದೆ. ಅದನ್ನು ಆಧರಿಸಿ ನಾನು ರೂಪಕ ರಚಿಸಿದೆ. ಪ್ರಾಚೀನರ ರಾಜಕೀಯ ಜಾಗ್ರತೆಗೆ ಇದು ನಿದರ್ಶನ. ನೋಡುವವರು ತಮ್ಮ ತಮ್ಮ ಇಷ್ಟ ಬಂದಂತೆ ಅರ್ಥಮಾಡಿಕೊಳ್ಳಬಹುದು,' ಎಂದರು.