ಪುಟ:ಕ್ರಾಂತಿ ಕಲ್ಯಾಣ.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೩೪

ಕ್ರಾಂತಿ ಕಲ್ಯಾಣ

ದ್ಯೂತಸಭೆ ನಡೆಸುವುದು ಅನರ್ಥಕ್ಕೆ ಆಹ್ವಾನವಿತ್ತಂತೆ ಎಂದು ಅವನಿಗೆ ತಿಳಿದಿತ್ತು.

“ದ್ಯೂತಸಭೆ ಪ್ರಭುಗಳ ಸಮ್ಮುಖದಲ್ಲಿ ನಡೆಯುತ್ತದೆ. ಮಂಗಳವೇಡೆಯ ಶ್ರೀಮಂತ ಸಾಮಂತ ಮನ್ನೆಯರು ಸಭೆಯಲ್ಲಿ ಭಾಗವಹಿಸುತ್ತಾರೆ. ಅನುಮತಿಯ ವಿಚಾರ ತಿಳಿದರೆ ಅಂತಃಪುರದ ಮಹಿಳೆಯರೂ ಬರಬಹುದು. ಇಂತಹ ಪ್ರತಿಷ್ಠಿತರ ಸಭೆಗೆ ಅಧ್ಯಕ್ಷನಾಗಲು ಅಗತ್ಯವಾದ ಸಹನೆ ಸೌಜನ್ಯ ಗಾಂಭೀರ್ಯಗಳು ಕರ್ಣ ದೇವರಸರಿಗಿದೆಯೇ ಎಂದು ನನಗೆ ಸಂದೇಹ,” -ಎಂದು ಅವನು ಆಕ್ಷೇಪಿಸಿದನು.

“ಕರ್ಣದೇವನು ನನ್ನ ಸೋದರನೆಂಬುದನ್ನು ನೀವು ಮರೆತಂತಿದೆ.” – ಬಿಜ್ಜಳನು ನಸುನಕ್ಕು ನುಡಿದನು.

"ಪ್ರಭುಗಳ ಘನತೆ ಗೌರವಗಳ ವಿಚಾರದಲ್ಲಿ ಸ್ಪಷ್ಟವಾಗಿ ಮಾತಾಡುವುದು ನನ್ನ ಕರ್ತವ್ಯ. ಅದರಿಂದ ನಿಮಗೆ ಅಸಮಾಧಾನವಾಗದಿದ್ದರೆ....”

ಕ್ರಮಿತನಿಗೆ ಮಾತು ಮುಗಿಸುವ ಅವಕಾಶಕೊಡದೆ ಬಿಜ್ಜಳನು, “ಇದು ಅಸಮಾಧಾನದ ವಿಚಾರವಲ್ಲ. ಸಭಿಕನಾಗಲು ಕರ್ಣದೇವ ಅನರ್ಹನಾದರೆ ನೀವೇ ಆ ಕಾರ್ಯ ನಿರ್ವಹಿಸಬೇಕಾಗುವುದು,” ಎಂದನು.

“ಪ್ರಭುಗಳು ಇಚ್ಛಿಸುವುದಾದರೆ ನಾನು ಸಿದ್ಧ,” ಎಂದು ಕ್ರಮಿತನು ಒಪ್ಪಿಕೊಂಡನು.

ನವಮಿಯ ದಿನ ಅಪರಾಹ್ನ ಮೊದಲನೆಯ ಪ್ರಹರ ಮುಗಿಯುತ್ತಿದ್ದಂತೆ ದ್ಯೂತ ಸಭೆ ಪ್ರಾರಂಭವಾಯಿತು. ಸಭಾಂಗಣದ ಒಂದು ಪಾರ್ಶ್ವದಲ್ಲಿ ಸಭಿಕರಿಗಾಗಿ ವೇದಿಕೆಯ ಮೇಲೆ ದಿಂಬುಗಳ ಸುಖಾಸನ, ಉಳಿದ ಕಡೆಗಳಲ್ಲಿ ಹತ್ತು ಗುಂಪು ಒಂದೇ ಸಾರಿ ಆಟವಾಡಲು ಅನುಕೂಲವಾಗುವಂತೆ ಜೋಡಿಸಿದ ಹಾಸಂಗಿ ದಿಂಬುಗಳು ಇದ್ದವು. ಆಟಗಾರರಿಗೆ ಆಗಾಗ ಉಪಾಹಾರ ಪಾನೀಯಗಳನ್ನು ತಂದುಕೊಡಲು ದಾಸಿಯರು ಸಿದ್ದರಾಗಿ ನಿಂತಿದ್ದರು.

ಅಪರಾಹ್ನ ಮೊದಲನೆಯ ಪ್ರಹರ ಮುಗಿದ ಘಂಟೆ ಹೊಡೆಯುತ್ತಿದ್ದಂತೆ ಆಹ್ವಾನಿತರಾಗಿದ್ದ ಶ್ರೀಮಂತ ಸಾಮಂತರಲ್ಲಿ ಕೆಲವರು ಅಲ್ಲಿಗೆ ಬಂದರು.

ಕ್ರಮಿತನು ಅವರನ್ನು ಸ್ವಾಗತಿಸಿ, “ಹಾಸಂಗಿ ಲೆತ್ತಗಳು ನಿಮಗಾಗಿ ಕಾದಿವೆ, ಆಟ ಪ್ರಾರಂಭಿಸಬಹುದು,” ಎಂದನು.

ವೇದಿಕೆಯ ಪಾರ್ಶ್ವದ ಮಂದಾಸನದಲ್ಲಿ ಧನದೇವತೆ ಲಕ್ಷ್ಮಿಯ ವಿಗ್ರಹವನ್ನು ಪೂಜೆಗಿಟ್ಟಿದ್ದರು. ಎದುರಿಗೆ ದೀಪಸ್ತಂಭಗಳು ಉರಿಯುತ್ತಿದ್ದವು. ಮಂದಾಸನದ ತಳದಲ್ಲಿ ಸಭೆಯ ಕರಣಿಕನ ಗದ್ದುಗೆ. ಸಾಮಂತರು ದೇವತೆಗೆ ವಂದಿಸಿ, ಆಟಕ್ಕೆ ಬೇಕಾಗುವ ಬಣ್ಣದ ಗುರುತು ಬಿಲ್ಲೆಗಳನ್ನು ಕರಣಿಕನಿಂದ ಕೊಂಡುಕೊಂಡು ಹಾಸಂಗಿಗಳ ಸುತ್ತ ಆಟಕ್ಕೆ ಕುಳಿತರು.