ಪುಟ:ಕ್ರಾಂತಿ ಕಲ್ಯಾಣ.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೩೫


ರಾಜಾನುಮತಿ ಪಡೆದು ನಡೆಸಲ್ಪಡುತ್ತಿದ್ದ ಸಾರ್ವಜನಿಕ ದ್ಯೂತಾಗಾರಗಳು, ಚಾಲುಕ್ಯರಾಜ್ಯದ ಪ್ರಮುಖ ನಗರಗಳಲ್ಲಿ ಹಿಂದಿನಿಂದ ಪ್ರಚಾರದಲ್ಲಿದ್ದವು. ಅವುಗಳಲ್ಲಿ ಹಣದ ಪ್ರತಿಯಾಗಿ ಸಭಿಕನಿಂದ ಕೊಂಡುಕೊಂಡ ಗುರುತುಬಿಲ್ಲೆಗಳನ್ನು ಮಾತ್ರವೇ ಉಪಯೋಗಿಸಬೇಕೆಂಬ ಹೊಸನಿಬಂಧನೆಯನ್ನು ಕೆಲವು ವರ್ಷಗಳ ಹಿಂದೆ ಬಿಜ್ಜಳನು ಪ್ರಚಾರಕ್ಕೆ ತಂದಿದ್ದನು. ಪ್ರತಿದಿನ ಮಾರಾಟವಾಗುವ ಬಿಲ್ಲೆಗಳ ಮೇಲೆ ತೆರಿಗೆ ಕೊಡಬೇಕಾಗುತ್ತಿತ್ತು.

ದಾಳದಿಂದ ಆಡುತ್ತಿದ್ದ ಎರಡು ಬಗೆಯ ಆಟಗಳು ಆಗ ಜನಪ್ರಿಯವಾಗಿದ್ದವು. ಬೇರೆ ಬೇರೆ ಆಕಾರದ ಹಾಸಂಗಿಗಳ ಮೇಲೆ ಬಣ್ಣ ಬಣ್ಣದ ಕಾಯಿಗಳನ್ನು ಇಟ್ಟು ನಾಲ್ಕು ಮುಖದ ಎರಡು ದಾಳಗಳಿಂದ ಆಡುತ್ತಿದ್ದ ಪಗಡೆಯಾಟ ರಾಜಾಂತಃಪುರಗಳಂತೆ ಸಾಮಾನ್ಯ ಜನರಲ್ಲಿಯೂ ಪ್ರಚಾರದಲ್ಲಿತ್ತು. ಇದಕ್ಕೆ ಬೇಕಾದ ಆಟಗಾರರ ಸಂಖ್ಯೆ ಎರಡರಿಂದ ನಾಲ್ಕು.

ಹಾಸಂಗಿಯಿಲ್ಲದೆ ಘನಾಕೃತಿಯ ನಾಲ್ಕು ದಾಳ ಅಥವಾ ಲೆತ್ತದಿಂದ ಆಡುವ ಇನ್ನೊಂದು ಬಗೆಯ ಆಟ ದ್ಯೂತಾಗಾರಗಳಲ್ಲಿ, ಮುಖ್ಯವಾಗಿ ಜೂಜಾಟದ ಹುಚ್ಚಿದ್ದವರಲ್ಲಿ ಮಾತ್ರವೇ ಪ್ರಚಾರದಲ್ಲಿತ್ತು. ಇದಕ್ಕೆ ಉಪಯೋಗಿಸುತ್ತಿದ್ದ ಘನಾಕೃತಿಯ ಸಣ್ಣದಾಳಗಳ ಆರು ಮುಖಗಳ ಮೇಲೆ ೧ ರಿಂದ ೬ ರವರೆಗೆ ಗುರುತುಗಳಿರುತ್ತಿದ್ದವು. ನಾಲ್ಕು ಆರು ಅಥವಾ ಎಂಟು ದಾಳಗಳನ್ನು ಸೊಲಿಗೆಯಂತಹ ಮರದ ಬಟ್ಟಲಲ್ಲಿ ಹಾಕಿ ಆಡಿಸಿ ಚೆಲ್ಲಿ, ದಾಳದ ಮೇಲ್ಮೊಗದ ಸಂಖ್ಯೆಯನ್ನು ಕೂಡಿಸಿ ಬಂದ ಮೊತ್ತವನ್ನು ನಾಲ್ಕರಿಂದ ಭಾಗಿಸಿದಾಗ ಉಳಿಯುವ ಶೇಷದಿಂದ ಸೋಲು ಗೆಲುವುಗಳನ್ನು ಗೊತ್ತು ಮಾಡುತ್ತಿದ್ದರು. ಶೇಷ ೧ ಉಳಿದರೆ ಕಲಿ, ೨ ಕ್ಕೆ ದ್ವಾಪರ ಅಥವಾ ದುಗ್ಗ. ೩ ಕ್ಕೆ ತ್ರೇತಾ ಅಥವಾ ತಿಗ್ಗ, ನಿಶ್ಯೇಷವಾದರೆ ಕೃತ. ಕಲಿಯಿಂದ ಕೃತದವರೆಗೆ ಒಂದಕ್ಕಿಂತ ಒಂದು ಹೆಚ್ಚಿನದೆಂದು ಆಟದ ನಿಯಮ.

ಕ್ರಮಿತನು ಏರ್ಪಡಿಸಿದ್ದ ದ್ಯೂತ ಸಭೆಯಲ್ಲಿ ಮೇಲಿನ ಎರಡು ಬಗೆಯ ಆಟಗಳಿಗೂ ಅವಕಾಶವಿತ್ತು, ವಿನೋದಕ್ಕಾಗಿ ಆಡಲು ಬಂದಿದ್ದವರು ಕಡಿಮೆ ಹಣ ಕಳೆದುಕೊಂಡು ಹೆಚ್ಚುಕಾಲ ಆಡಲು ಅನುಕೂಲವಾದ ಪಗಡೆಯಾಟಕ್ಕೆ ಕುಳಿತರು. ಅತ್ಯಲ್ಪಕಾಲದಲ್ಲಿ ಹೆಚ್ಚು ಹಣ ಗಳಿಸುವ ಆಸೆಯಿದ್ದ ಅಲ್ಪಸಂಖ್ಯೆಯ ಹುಟ್ಟು ಜೂಜುಗಾರರು ಲೆತ್ತದಾಟಕ್ಕೆ ಕುಳಿತರು.

ಸಂಜೆ ದೀಪ ಹೊತ್ತಿಸುವ ಸಮಯಕ್ಕೆ ಬಿಜ್ಜಳನು ಅಲ್ಲಿಗೆ ಬಂದಾಗ ಆಟ ಕಳೆಯೇರಿತ್ತು. ಲೆತ್ತವಾಡುತ್ತಿದ್ದವರಲ್ಲಿ ಕೆಲವರು ಹೆಚ್ಚು ಹಣಗಳಿಸಿ ಶ್ರೀಮಂತರಾಗಿದ್ದರು. ಕೆಲವರು ತಂದದ್ದನ್ನೆಲ್ಲ ಕಳೆದುಕೊಂಡು ನಿರ್ಗತಿಕರಾಗಿ ಆಟದಿಂದ ಏಳುತ್ತಿದ್ದರು.