ಪುಟ:ಕ್ರಾಂತಿ ಕಲ್ಯಾಣ.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕ್ರಾಂತಿ ಕಲ್ಯಾಣ

“ಆದರೆ ಅವರಲ್ಲೊಬ್ಬನು ಹರದನಂತೆ ಕಂಡರೂ ವಾಸ್ತವದಲ್ಲಿ ಕವಿಯೋ ಸಾಮಂತನೋ ಆಗಿರಬೇಕು.”

“ನೀನು ಅದನ್ನು ಹೇಗೆ ತಿಳಿದೆ?”

“ಹೊರಗಿನಿಂದ ಪಾಂಥ ನಿವಾಸಕ್ಕೆ ಬರುವವರ ಹೆಸರು ಪರಿಚಯಗಳನ್ನು ನಗರ ರಕ್ಷಕರಿಗೆ ತಿಳಿಸಬೇಕೆಂಬ ಆಜ್ಞೆ ಈಗ ಎರಡು ತಿಂಗಳಿಂದ ಪ್ರಚಾರದಲ್ಲಿದೆ. ಅದರಂತೆ ವರದಿಯನ್ನು ಸಿದ್ಧಗೊಳಿಸುತ್ತಿದ್ದಂತೆ ನೀವು ಬಂದಿರಿ.”

“ಆ ವರದಿಯನ್ನು ನಾವು ನೋಡಬಹುದೆ?”

ಕಾರ್ಯಕರ್ತನು ಕಿಸೆಯಿಂದ ಕರಡು ಕಾಗದದ ಸುರುಳಿಯೊಂದನ್ನು ತೆಗೆದು ಎರಡು ಕೈಗಳನ್ನೂ ಮುಂದೆ ಚಾಚಿ ಕ್ರಮಿತನಿಗೆ ಕೊಟ್ಟನು. ಈ ಅತಿ ವಿನಯವನ್ನು ಕಂಡು ನಸುನಕ್ಕು ಕ್ರಮಿತನು ವರದಿಯನ್ನು ತೆಗೆದುಕೊಂಡು ಓದಿದನು.

ಕಳೆದ ಎರಡು ದಿನಗಳಿಂದ ಪಾಂಥ ನಿವಾಸಕ್ಕೆ ಬಂದ ಪ್ರವಾಸಿಗಳ ಹೆಸರು ಪರಿಚಯಗಳೂ ಅದರಲ್ಲಿದ್ದುವು. ಕ್ರಮಿತನಿಗೆ ಬೇಕಿದ್ದ ವಿವರಗಳು ಈ ರೀತಿ ಇತ್ತು:

೧. ಉಜ್ಜಯಿನಿಯ ವಡ್ಡ ವ್ಯವಹಾರಿ ಬ್ರಹ್ಮರಾಜ ಸೇಟ್, ಶ್ರೀಮಂತ
ವರ್ತಕರು, ವಯಸ್ಸು ಸುಮಾರು ೫೦.
೨. ಮೇಲೆ ಕಂಡವರ ಕಾರ್ಯದರ್ಶಿ, ಶಿವಗಣ ಭಂಡಾರಿ,
ವಯಸ್ಸು ಸುಮಾರು ೩೫. ವೇಣುಗ್ರಾಮದ ನಿವಾಸಿಯೆಂದು ಪರಿಚಯ
ಹೇಳುತ್ತಾನೆ. ಜೀವನಕ್ಕಾಗಿ ಶ್ರೀಮಂತರನ್ನು ಆಶ್ರಯಿಸಿದ ಬುದ್ದಿಜೀವಿ.
೩. ರಾಜಪುತ್ರ ಅಗ್ಗಳದೇವ, ವಯಸ್ಸು ಸುಮಾರು ೩೫. ಪರಿಚಯ
ಹೇಳಲು ನಿರಾಕರಿಸುತ್ತಾನೆ. ತಾನು ಕ್ಷತ್ರಿಯ ಎಂಬುದನ್ನು ತೋರಿಸಿಕೊಳ್ಳಲು
ಹೆಸರಿನ ಮುಂದೆ ರಾಜಪುತ್ರ ಪ್ರಶಸ್ತಿಯನ್ನು ಸೇರಿಸಿಕೊಂಡಂತೆ
ಕಾಣುತ್ತದೆ. ಕವಿಯೋ ಸಾಮಂತನೋ ಆಗಿರಬೇಕು.

ಈ ದಿನ ದೇವಗಿರಿಯಿಂದ ಬಂದ ಹರದರ ತಂಡದೊಡನೆ ಇವರು ನಗರವನ್ನು ಪ್ರವೇಶಿಸಿದರು. ಬ್ರಹ್ಮರಾಜ ಸೇಟನೂ ಅವರ ಕಾರ್ಯದರ್ಶಿಯೂ ಹಿಂದೆ ಕೆಲವು ಸಾರಿ ನಮ್ಮ ಪಾಂಥ ನಿವಾಸದಲ್ಲಿ ಬಿಡಾರ ಮಾಡಿದ್ದಾರೆ. ಪರಿಚಿತರೂ ಶ್ರೀಮಂತರೂ ಆದ್ದರಿಂದ ಉಪ್ಪರಿಗೆಯ ಎರಡು ದೊಡ್ಡ ಕೊಟಡಿಗಳನ್ನು ಅವರ ವಾಸಕ್ಕಾಗಿ ಕೊಟ್ಟಿದ್ದೇನೆ. ಅವರ ಸಂಗಡ ಬಂದ ಗಾಡಿಯವನಿಗೆ ನಿವಾಸದ ಹಿಂದಿನ ಕೊಟ್ಟಿಗೆಯಲ್ಲಿ

ಸ್ಥಳಮಾಡಿದೆ. ಅವರ ಗಾಡಿ ಮತ್ತು ಎತ್ತುಗಳು ಅಲ್ಲಿಯೇ ಇವೆ.